ADVERTISEMENT

ತಾಲ್ಲೂಕು ರಚನೆಗೆ ಸಮಗ್ರ ಮಾಹಿತಿ ಅಗತ್ಯ

ವಿಜಯಪುರ ತಾಲ್ಲೂಕು ಹೋರಾಟ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಶಾಸಕ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:47 IST
Last Updated 19 ಜನವರಿ 2017, 6:47 IST
ತಾಲ್ಲೂಕು ರಚನೆಗೆ ಸಮಗ್ರ ಮಾಹಿತಿ ಅಗತ್ಯ
ತಾಲ್ಲೂಕು ರಚನೆಗೆ ಸಮಗ್ರ ಮಾಹಿತಿ ಅಗತ್ಯ   

ವಿಜಯಪುರ:  ‘ವಿಜಯಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ಮೂಲಕ ಹೋರಾಟ ಆರಂಭ ಮಾಡಲು ಪಕ್ಷಾತೀತವಾಗಿ ಎಲ್ಲ ಮುಖಂಡರು ಹಾಗೂ ನಾಗರಿಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಸಭೆ ಸೇರಿದ್ದ ವಿಜಯಪುರ ತಾಲ್ಲೂಕು ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಯಾವುದೇ ಹೋರಾಟಗಳನ್ನು ಕೈಗೆತ್ತಿಕೊಳ್ಳುವ ಮೊದಲು ಹೋರಾಟ ಮಾಡುವಂತಹ ಉದ್ದೇಶದ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಕಲೆ ಹಾಕಬೇಕು. ತಾಲ್ಲೂಕು ರಚನೆಗೆ ಅಗತ್ಯವಾದ ಮಾನದಂಡಗಳಲ್ಲಿ ವಿಜಯಪುರ ಪಟ್ಟಣ ಎಷ್ಟರ ಮಟ್ಟಿಗೆ ಸಮರ್ಥವಾಗಿದೆ ಎಂಬುದರ ಬಗ್ಗೆ ಮಾಹಿತಿ ಕ್ರೋಡೀಕರಿಸಿ ಪಕ್ಷಾತೀತವಾಗಿ ಹೋರಾಟಕ್ಕೆ  ಮುಂದಾದರೆ ಅಗತ್ಯವಾಗಿರುವ ಎಲ್ಲ  ಸಹಕಾರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಪುರಸಭೆ ಅಭಿವೃದ್ಧಿಗೂ ಬಹಳಷ್ಟು ಪ್ರಾಮಾಣಿಕತೆಯಿಂದ ಪ್ರಯತ್ನ ಮಾಡುತ್ತಿದ್ದು ಎಲ್ಲರೂ ಭಿನ್ನಾಭಿಪ್ರಾಯ  ಮರೆತು ಸಹಕಾರ ನೀಡಿದರೆ ಮುಂದಿನ 6 ತಿಂಗಳಲ್ಲಿ ಮಾದರಿ ಪುರಸಭೆಯನ್ನಾಗಿ ಮಾಡುವುದಾಗಿ ಹೇಳಿದರು. ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಎಂ.ಸತೀಶ್ ಕುಮಾರ್ ಮಾತನಾಡಿದರು.
ಆರ್.ದೇವರಾಜಪ್ಪ, ಪುರಸಭಾ ಸದಸ್ಯರಾದ ಎಸ್. ಭಾಸ್ಕರ್, ವರದರಾಜು, ವಿ.ಎಂ. ನಾಗರಾಜು, ಎಸ್ಆರ್ಎಸ್ ಬಸವರಾಜು, ಮಾಜಿ ಪುರಸಭಾ ಸದಸ್ಯ ಮುನಿಶಾಮಪ್ಪ, ಕರವೇ ಮಹೇಶ್ ಕುಮಾರ್( ಪ್ರವೀಣ್ ಶೆಟ್ಟಿ ಬಣ) ಕೆ.ಮಂಜುನಾಥ್ ( ಜಯ ಕರ್ನಾಟಕ ಸಂಘಟನೆ) ಅಣ್ಣಮ್ಮತಾಯಿ ಸುರೇಶ್ (ಶಿವರಾಮೇಗೌಡರ ಬಣ), ದಸಂಸ ಸಂಘಟನೆ ಸಂಚಾಲಕ ವೇಣು, ಕನಕರಾಜು, ವರದರಾಜು, ನಂಜುಂಡಪ್ಪ, ಮಾದಿಗ ದಂಡೋರ ಅಧ್ಯಕ್ಷ ಪ್ರಭು, ಭಜರಂಗದಳ ಕೃಷ್ಣಮೂರ್ತಿ, ಕಲ್ಯಾಣ್ ಕುಮಾರ್ ಬಾಬು, ನರಸಿಂಹರಾಜು, ರೈತ ಸಂಘದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.