ADVERTISEMENT

ನಾಶವಾದ ಪಾಲಿಹೌಸ್ ಪರಿಶೀಲಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:43 IST
Last Updated 27 ಮೇ 2017, 9:43 IST

ದೇವನಹಳ್ಳಿ: ನಾಲ್ಕೈದು ದಿನಗಳ ಹಿಂದೆ ಬೀಸಿದ ಬಿರುಗಾಳಿ ಮಳೆಗೆ ನಾಶವಾದ ಸೌತೆಗೌಡನಹಳ್ಳಿ ರೈತ ಮಹಿಳೆ ಮುನಿರತ್ನಮ್ಮರ ಪಾಲಿಹೌಸ್‌ ಅನ್ನು ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.), ತೋಟಗಾರಿಕೆ ಇಲಾಖೆ ವಿಭಾಗದ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು ಪರಿಶೀಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಮುನಿರತ್ನಮ್ಮ, ಮೂರು ವರ್ಷಗಳಿಂದ ಎರಡು ಎಕರೆಯಲ್ಲಿ ಫಾಲಿಹೌಸ್ ನಿರ್ಮಾಣ ಮಾಡಿ ವಿವಿಧ ಪುಪ್ಪ ಮತ್ತು ತರಕಾರಿ ಬೆಳೆಗೆ ಮುಂದಾಗಿದ್ದೆ. ಪ್ರತಿವರ್ಷ ಮುಂಗಾರು ಮತ್ತು ಹಿಂಗಾರು ಸಂದರ್ಭದಲ್ಲಿ ಬಿರುಗಾಳಿ, ಅಲಿಕಲ್ಲು ಮಳೆ ಮತ್ತು ಅಕಾಲಿಕ ಮಳೆಗೆ ಬೆಳೆ ನಾಶವಾಗುತ್ತಿದೆ.

ಪ್ರಸ್ತುತ ಔಷಧೀಯ ಸೌತೆಕಾಯಿ ಬೆಳೆ ಬೆಳೆಯುತ್ತಿದ್ದೆ. ಜತೆಗೆ ಎರಡು ಎಕರೆ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಪಾಲಿಹೌಸ್ ಸಂಪೂರ್ಣ ನಾಶವಾಗಿದೆ ಎಂದರು. ‘ಸಾಲ ಯಾವ ರೀತಿ ತೀರಿಸಬೇಕೆಂದು ತೋಚುತ್ತಿಲ್ಲ. ನನಗೆ ಸಹಾಯ ಮಾಡಿ’ ಎಂದು ಮನವಿ ಮಾಡಿದರು.

ADVERTISEMENT

ಜಿಕೆವಿಕೆ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಸಿ ನರಸೇಗೌಡ ಮಾತನಾಡಿ, ಪ್ರಕೃತಿ ಮುನಿಸು ಯಾರಿಂದಲೂ ತಡೆಯಲಾಗದು. ಬೆಳೆ ಆರಂಭಕ್ಕೆ ಮೊದಲು ಬೆಳೆ ವಿಮೆಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

ನಷ್ಟದ ವರದಿಯನ್ನು ಹಿರಿಯ ಇಲಾಖೆಗೆ ನೀಡಲಾಗುವುದು ಎಂದರು. ಪ್ರಾಧ್ಯಾಪಕ ಡಾ.ಆರ್.ಕೆ. ಮನೋಹರ್, ಡಾ.ಆರ್.ಸಿ.ಗೌಡ, ಡಾ.ಎ.ಸತೀಶ್, ದೇವನಹಳ್ಳಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಮಂಜುನಾಥ್ ಪರಿಶೀಲನಾ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.