ADVERTISEMENT

ಬೇಸಿಗೆಗೂ ಮುನ್ನ ಜಾನುವಾರು ಮೇವಿಗೆ ಪರದಾಟ

ತಾಲ್ಲೂಕಿನಲ್ಲಿ ಶೇ 90 ಬೆಳೆ ನಾಶ, ಹನಿ ನೀರಿಗೂ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:46 IST
Last Updated 19 ಜನವರಿ 2017, 6:46 IST
ಬೇಸಿಗೆಗೂ ಮುನ್ನ ಜಾನುವಾರು ಮೇವಿಗೆ ಪರದಾಟ
ಬೇಸಿಗೆಗೂ ಮುನ್ನ ಜಾನುವಾರು ಮೇವಿಗೆ ಪರದಾಟ   

ವಿಜಯಪುರ: ತೀವ್ರ ಮಳೆಯ ಅಭಾವದಿಂದಾಗಿ ಈ ಬಾರಿ ಹೊಲಗಳಲ್ಲಿ ರೈತರು ಬೆಳೆ ಕಾಣದೇ ಇರುವ ಪರಿಣಾಮವಾಗಿ ದನಕರುಗಳ ಮೇವಿಗೆ ಬೇಸಿಗೆಗೂ ಮುನ್ನ ಪರದಾಟ ಪ್ರಾರಂಭವಾಗಿದೆ.

ದೇವನಹಳ್ಳಿ ತಾಲ್ಲೂಕಿನಾದ್ಯಂತ ಶೇ 90 ರಷ್ಟು ಬೆಳೆಗಳು ನಾಶವಾಗಿವೆ. ಜನರು ಸೇರಿದಂತೆ ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆಗೆ ಮೇವಿನ ಕೊರತೆ ಗಂಭೀರವಾಗಿ ಕಾಡಲಾರಂಭಿಸಿದ್ದು ರೈತರು ತಮ್ಮ ತೋಟಗಳಲ್ಲಿನ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಒಂದೆಡೆಯಾದರೆ ಕುರಿ ದನಗಳಿಗೆ ಮೇವುಗಳನ್ನು ಪೂರೈಸಲು ಅರಳಿಕಟ್ಟೆಗಳಲ್ಲಿನ ಅರಳಿ ಮರದ ಎಲೆಗಳಿಗೆ ಮೊರೆ ಹೋಗುವಂತಾಗಿದೆ,  ಈಗಲೇ ಇಂತಹ ಪರಿಸ್ಥಿತಿಯಾದರೆ ಬೇಸಿಗೆಯಲ್ಲಿ ಎಂತಹ ಪರಿಸ್ಥಿತಿ ಎದುರಿಸಬೇಕೊ ಎಂದು ರೈತ ಮುಖಂಡ ನಂಜುಂಡಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೆ  ಆಂಧ್ರಪ್ರದೇಶದ ಹಿಂದೂಪುರ, ಬಾಗೇಪಲ್ಲಿ, ಚೇಳೂರು ಮುಂತಾದ ಕಡೆಗಳಿಂದ ಒಂದು ಲೋಡು ಮೇವಿಗೆ ಸುಮಾರು ₹ 20 ಸಾವಿರದವರೆಗೂ ಭರಿಸಿ ಖರೀದಿ ಮಾಡಿಕೊಂಡು ಬಂದಿದ್ದೇವೆ. ಈಗಾಗಲೇ ಅರ್ಧ ಭಾಗದ ಮೇವು ಖಾಲಿಯಾಗಿದೆ. ಹಾಲು ಕರೆಯುವ ರಾಸುಗಳಿಗೆ ಹಸಿರು ಮೇವುಗಳನ್ನು ಹಾಕಿದರೆ ಮಾತ್ರ ಉತ್ತಮ ಹಾಲು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ನಾವು ಪ್ರತಿದಿನ ₹ 300 ಖರ್ಚು ಮಾಡಿಕೊಂಡು ಹಸಿರು ಮೇವನ್ನು ಖರೀದಿ ಮಾಡಿಕೊಂಡು ಬಂದು ಉಳಿಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ರೈತ ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.

‘ಹಾಲಿನ ಡೈರಿಗಳಿಗೆ ನಾವು ಹಾಕುವ ಹಾಲಿಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಬಿಲ್ಲನ್ನು ನಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಾರಾದರೂ ಬ್ಯಾಂಕಿನಿಂದ ಹಣ ಪಡೆದುಕೊಂಡು ಬಂದು ರಾಸುಗಳಿಗೆ ಮೇವನ್ನು ಪೂರೈಸಿ ಪೌಷ್ಟಿಕಾಂಶ ಭರಿತ ಪಶು ಆಹಾರ ಒದಗಿಸುವುದು ಕಷ್ಟಕರವಾಗಿದೆ ಎಂದು ಮುರಳೀಧರ ಹೇಳುತ್ತಾರೆ.

ಜಿಲ್ಲಾಡಳಿತದಿಂದ ಪಂಚಾಯಿತಿಗೆಒಂದರಂತೆ ಮೇವಿನ ಬ್ಯಾಂಕುಗಳನ್ನು ತೆರೆಯಬೇಕು ಎಂದು ಅನೇಕ ಬಾರಿ ಒತ್ತಾಯ ಮಾಡಿದ್ದೇವೆ. ರೈತರ ಪರಿಸ್ಥಿತಿಗಳು ತೀರಾ ಹದಗೆಡುತ್ತಿದೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಬೇಕು.  ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಬ್ಯಾಂಕುಗಳಿಂದ ಪಡೆದುಕೊಂಡಿರುವ. ಸಾಲಗಳನ್ನು ಮನ್ನಾ ಮಾಡಬೇಕು ಎಂದು ಕೃಷಿಕ ಸಮಾಜದ ಅಧ್ಯಕ್ಷ ಮಂಡಿಬೆಲೆ ದೇವರಾಜಪ್ಪ ಒತ್ತಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.