ADVERTISEMENT

‘ಮುನ್ನೆಚ್ಚರಿಕೆಯಿಂದ ಜೀವ ಉಳಿಸಲು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 10:29 IST
Last Updated 12 ಜುಲೈ 2017, 10:29 IST

ದೊಡ್ಡಬಳ್ಳಾಪುರ: ‘ಸಮಯಕ್ಕೆ ತಕ್ಕ ಮುಂಜಾಗ್ರತೆ ಹಾಗೂ ಎಚ್ಚರಿಕೆ ಹಲವು ಬಾರಿ ನಮ್ಮ ಜೀವ ಉಳಿಸುತ್ತದೆ’ ಎಂದು ಹಿರಿಯ ವೈದ್ಯ ಡಾ.ಟಿ.ಎಚ್. ಆಂಜನಪ್ಪ ಹೇಳಿದರು.
ಹಿರಿಯ ಗಾಯಕ ದಿವಂಗತ ಕೆ.ಅಬ್ದುಲ್ ಬಷೀರ್ ಸ್ಮರಣಾರ್ಥ ಗೀತಗಾಯನ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಎಂ.ಇ. ಖಲೀಲುಲ್ಲಾ ಖಾನ್ ಬರೆದಿರುವ ‘ಸಾಧನೆ ಮತ್ತು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು’ ಮಕ್ಕಳ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌಷ್ಟಿಕ ಆಹಾರ, ಉತ್ತಮ ಚಿಂತನೆ ಹಾಗೂ ಪರಿಪೂರ್ಣ ಮನೋಸ್ಥೈರ್ಯ  ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜನಪದ ವಿದ್ವಾಂಸ ಡಾ.ಟಿ. ಗೋವಿಂದರಾಜು ಮಾತನಾಡಿ, ‘ಸಾಹಿತ್ಯ ಕೃತಿಗಳು ಒಂದು ನೆಲದ ಸಾಂಸ್ಕೃತಿಕ ಪ್ರಜ್ಞೆಯ ಬೇಕು- ಬೇಡಗಳಿಗೆ ಸ್ಪಂದಿಸುವ ಶಕ್ತಿ ಹೊಂದಿದ್ದಾಗ ಮಾತ್ರ ಉತ್ತಮ ಚಿಂತನೆಗಳನ್ನು ಪ್ರಚೋದಿಸಲು ಸಾಧ್ಯ’ ಎಂದರು.

ಪುಸ್ತಕದ ಕುರಿತು ಮಾತನಾಡಿದ  ದೇವರಾಜ ಅರಸು ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಆರ್. ರವಿಕಿರಣ್ ಹಾಗೂ ಖಲೀಲುಲ್ಲಾ ಖಾನ್ ಅವರು, ‘20 ನಿಮಿಷ ಅವಧಿಯ ಕಿರುನಾಟಕದಲ್ಲಿ ತಮ್ಮ  ಆತ್ಮಕಥೆಯನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಶಾಲೆಯ ಮೆಟ್ಟಿಲು ಹತ್ತದ ವ್ಯಕ್ತಿ ಶಾಲಾ ಮಾಸ್ತರರಾಗಿ ಬೆಳೆಯುವ ಯಶೋಗಾಥೆ ನಾಟಕದ ಕಥೆ’ ಎಂದರು.

ADVERTISEMENT

ಕರ್ನಾಟಕ ರಾಜ್ಯ ಸಮಾನ ಮನಸ್ಕರ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಸಮಾಜ ಸ್ಪಂದನಾ ಸೇವಾ ಒಕ್ಕೂಟದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ನಗರಸಭಾ ಸದಸ್ಯ ತ.ನ. ಪ್ರಭುದೇವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಆಯೋಜಕ ಮ.ಚಿ.ಕೃಷ್ಣ, ಉಪನ್ಯಾಸಕಿ ಯು.ಶಶಿಕಲಾ, ಮುಖಂಡರಾದ ಡಿ.ವಿ. ನಾರಾಯಣ ಶರ್ಮ, ಕೆ.ಮಹಾಲಿಂಗಯ್ಯ ಹಾಜರಿದ್ದರು.

ಕನ್ನಡ ಚಳವಳಿಗಾರ ತೂಬಗೆರೆ ಷರೀಫ್, ನಿವೃತ್ತ ಪ್ರಾಧ್ಯಾಪಕ ಅಬ್ದುಲ್ ರವೂಫ್, ರೈಲ್ವೇ ಇಲಾಖೆ ನೌಕರ ಮಹ್ಮದ್ ರಫೀಕ್, ಮಹ್ಮದ್ ಕರೀಂ, ಮಹ್ಮದ್ ರಫಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.