ADVERTISEMENT

ಯುವಕನ ಕೊಲೆ ಆನೇಕಲ್‌ ಉದ್ವಿಗ್ನ

ಅಘೋಷಿತ ಬಂದ್‌, ಪೊಲೀಸರಿಂದ ಬಿಗಿ ಬಂದೋಬಸ್ತ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 7:06 IST
Last Updated 31 ಡಿಸೆಂಬರ್ 2016, 7:06 IST

ಆನೇಕಲ್‌: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪದ ಬಾರ್‌ನಲ್ಲಿ ಗುರುವಾರ ರಾತ್ರಿ ಆನೇಕಲ್‌ನ ಕಾಲೊನಿಯ ಪ್ರಭು (23) ಎಂಬ ಯುವಕನನ್ನು ಗುಂಪೊಂದು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಭಯದಿಂದ ವ್ಯಾಪಾರಿಗಳು ಕೆಲಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಅಘೋಷಿತ ಬಂದ್‌ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ತಾಲ್ಲೂಕಿನ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೂ ಮೀಸಲು ಪಡೆ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದು ಬಿಗಿ ಬಂದೋಬಸ್‌್ತ ಕೈಗೊಂಡಿದ್ದಾರೆ.

ಗುರುವಾರ ರಾತ್ರಿ ಕೊಲೆಯಾದ ಪ್ರಭು (23) ಡ್ಯಾನ್ಸರ್ ಆಗಿದ್ದ ಎನ್ನಲಾಗಿದೆ.  ಸ್ನೇಹಿತರಾದ ಮಂಜು, ಪ್ರವೀಣ್ ಹಾಗೂ ಕಾಂತರಾಜು ಜೊತೆ ಬಾರ್‌ನಲ್ಲಿ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ಪ್ರಭು ಮೇಲೆ ದಾಳಿ ನಡೆಸಿ ಕುತ್ತಿಗೆಯನ್ನು ಕುಯ್ದು, ಮಾರಕಾಸ್ತ್ರದಿಂದ ಚುಚ್ಚಿ ಗಾಯಗೊಳಿಸಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಭಯಗೊಂಡ ಮೃತನ ಸ್ನೇಹಿತರು  ಹೊರಗೆ ಓಡಲು ಪ್ರಾರಂಭಿಸಿದಾಗ ಅವರನ್ನು ಹಿಂಬಾಲಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು ಅವರು ಓಡಿಹೋಗಿ ಅಪಾಯದಿಂದ ಪಾರಾಗಿದ್ದಾರೆ.

ಮೃತನ ಸಹೋದರ ಕುಮಾರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದು ಎರಡು ದಿನಗಳ ಹಿಂದೆ ಪ್ರಭು ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಬಿ.ನಾಗರಾಜು ಮಗನ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಈ ವಿಚಾರದಲ್ಲಿ ಬಿ.ನಾಗರಾಜು ಪ್ರಭುವನ್ನು ಬೆದರಿಸಿ ಕಳುಹಿಸಿದ್ದರು.

ಘಟನೆ ನಂತರ ಬಿ.ನಾಗರಾಜು ಆರೋಪಿಗಳಾದ ಹೇಮಂತ್, ಕಾಲೊನಿ ಸಂಜಯ್, ಥಳಿ ಮಂಜ ಹಾಗೂ ಇತರ 4 ಮಂದಿಯ ಮೂಲಕ ಪ್ರಭುವಿನ ಕೊಲೆ ಮಾಡಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಆರೋಪಿಗಳಾದ ಹೇಮಂತ್, ಕಾಲೊನಿ ಸಂಜಯ್, ಥಳಿ ಮಂಜ ಹಾಗೂ ಬಿ.ನಾಗರಾಜು ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಆನೇಕಲ್‌ ಸಬ್‌ ಇನ್‌ಸ್ಪೆಕ್ಟರ್‌ ಗೋವರ್ದನ್ ತಿಳಿಸಿದ್ದಾರೆ.

ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಮೃತನ ಕುಟುಂಬದವರು, ಸ್ನೇಹಿತರು ಹಾಗೂ ಸಂಬಂಧಿಕರು ಆನೇಕಲ್ ಪೊಲೀಸ್ ಠಾಣೆಯ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಆರೋಪಿಗಳನ್ನು ಬಂಧಿಸದಿದ್ದರೆ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಉದ್ವಿಗ್ನ ಗುಂಪೊಂದು ಘೋಷಣೆಗಳನ್ನು ಕೂಗುತ್ತಾ ಪುರಸಭಾ ಮಾಜಿ ಅಧ್ಯಕ್ಷ ಬಿ.ನಾಗರಾಜು ಅವರ ಮನೆಯ ಬಳಿಗೆ ತೆರಳಿ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಶೆಡ್‌ನಲ್ಲಿ ನಿಲ್ಲಿಸಿದ್ದ ಇನೋವಾ ಹಾಗೂ ಸ್ಕಾರ್ಪಿಯೊ ಕಾರು, ಒಂದು ಲಾರಿ ಮತ್ತು ಟೆಂಪೋಗಳನ್ನು ಜಖಂಗೊಳಿಸಿದರು.

ಈ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಯುವಕರನ್ನು ಸ್ಥಳಕ್ಕೆ ಬಂದ ಪೊಲೀಸರು ಚದುರಿಸಿದರು. ಮತ್ತೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಪ್ರತಿಭಟನಕಾರರು ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗಿದರು. ಆರೋಪಿಗಳ ಬಗ್ಗೆ ಪೂರ್ಣ ಮಾಹಿತಿ ಇದ್ದರೂ ಪೊಲೀಸರು ಬಂಧಿಸುತ್ತಿಲ್ಲ. ಆರೋಪಿಗಳ ಪರ ವಹಿಸಿದ್ದಾರೆ. ತಾಲ್ಲೂಕಿನಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ.

ADVERTISEMENT

ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಆರೋಪಿಗಳನ್ನು 24ಗಂಟೆಯೊಳಗೆ ಬಂಧಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದರು. ಬಳಿಕ ಕೆಲ ಯುವಕರು ಹತ್ಯೆ ನಡೆದಿದ್ದ ಬಾರ್ ಮೇಲೆ ದಾಳಿ ನಡೆಸಿ, ಕಲ್ಲು ತೂರಾಟ ಮಾಡಿದರು. ಇದರಿಂದ ಬಾರ್‌ನ ಗಾಜುಗಳು ಜಖಂಗೊಂಡವು.

ಭಯಗೊಂಡ ವ್ಯಾಪಾರಿಗಳು ಕ್ಷಣಾರ್ಧದಲ್ಲೇ ಅಂಗಡಿಗಳ ಬಾಗಿಲು ಮುಚ್ಚಿದರು. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ನಾರಾಯಣ್, ಡಿವೈಎಸ್ಪಿ ಎಸ್.ಕೆ.ಉಮೇಶ್, ಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಲ್.ವೈ.ರಾಜೇಶ್ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.