ADVERTISEMENT

ರಾಸು, ಕುರಿ ಮಾರಾಟಕ್ಕೂ ಮುಂದಾದ ರೈತರು

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಮಳೆ ಕೊರತೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 11:25 IST
Last Updated 25 ಅಕ್ಟೋಬರ್ 2016, 11:25 IST
ವಿಜಯಪುರ ಸಮೀಪದ ಅಂಕತಟ್ಟಿಯ ಬಳಿ  ಕುರಿಗಳನ್ನು ಮೇಯಿಸುತ್ತಿರುವ ಕುರಿಗಾಹಿ ಪಿಳ್ಳಪ್ಪ
ವಿಜಯಪುರ ಸಮೀಪದ ಅಂಕತಟ್ಟಿಯ ಬಳಿ ಕುರಿಗಳನ್ನು ಮೇಯಿಸುತ್ತಿರುವ ಕುರಿಗಾಹಿ ಪಿಳ್ಳಪ್ಪ   

ವಿಜಯಪುರ: ನಾಲ್ಕು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಸಮಸ್ಯೆ ಎದುರಿಸುತ್ತಿರುವ  ರೈತರು ತಾವು ಸಾಕಾಣಿಕೆ ಮಾಡುತ್ತಿದ್ದ ರಾಸುಗಳ ಜೊತೆಗೆ ಕುರಿಗಳನ್ನೂ ಮಾರಾಟಕ್ಕೆ ಮುಂದಾಗುತ್ತಿದ್ದಾರೆ.

ಬಯಲು ಸೀಮೆ ಭಾಗಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದ ಭಾಗಗಳಲ್ಲಿನ ದನಕರುಗಳಿಗೆ ಮೇವುಗಳಷ್ಟೆ ಅಲ್ಲದೆ ಕುಡಿಯುವ ನೀರೂ ಸಿಗುತ್ತಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿನ ರೈತರು ತಮ್ಮ ಕೃಷಿ ಕಸುಬುಗಳ ಜೊತೆಗೆ ಉಪ ಕಸುಬನ್ನಾಗಿ  ನಂಬಿಕೊಂಡಿದ್ದ ಕುರಿ ಸಾಕಣೆಯನ್ನು ಕೈಬಿಟ್ಟು ಅವುಗಳನ್ನು ಮಾರಾಟ ಮಾಡಲಾರಂಭಿಸಿದ್ದಾರೆ.

ಪ್ರತಿ ನಿತ್ಯ ಒಂದು ಹಸುವಿನ ಪೋಷಣೆಗಾಗಿ ಸುಮಾರು ₹150 ವೆಚ್ಚ ಮಾಡಬೇಕಾಗುತ್ತದೆ. ರಾಸುಗಳಿಗೆ ಹಸಿರು ಮೇವು ಹಾಗೂ ಪಶು ಆಹಾರವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಒಂದು ಟ್ರ್ಯಾಕ್ಟರ್ ಲೋಡು ರಾಗಿ ಹುಲ್ಲು ಸುಮಾರು ₹30 ಸಾವಿರವಾಗಿದ್ದು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಮೇವು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಗೋ ಶಾಲೆಗಳಿಗೆ ಬಿಡಲು ಹೋದರೆ ಅಲ್ಲಿಯೂ ಮೇವು ಕೊರತೆಯಿಂದಾಗಿ ರಾಸುಗಳನ್ನು ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

₹80 ಸಾವಿರದಿಂದ ₹1 ಲಕ್ಷದವರೆಗೂ ಮಾರಾಟವಾಗುತ್ತಿದ್ದ ಹಸುಗಳನ್ನು ಕೇವಲ ₹ 20ರಿಂದ ₹25 ಸಾವಿರಕ್ಕೆ ಮಾರಾಟ ಮಾಡುವಂತಾಗಿದೆ. ಮೇವು ಕೊರತೆಯಿಂದಾಗಿ ಹಸುಗಳಲ್ಲಿ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣದಲ್ಲಿಯೂ ಗಣನೀಯವಾಗಿ ಇಳಿಮುಖವಾಗುತ್ತಿದೆ ಎಂದು ರೈತರೊಬ್ಬರು ಹೇಳಿದರು.

ಕುರಿ ಸಾಕಾಣಿಕೆಯನ್ನು ಉಪ ಕಸುಬನ್ನಾಗಿಸಿಕೊಂಡು ಜೀವನ ಮಾಡುತ್ತಿದ್ದ ರೈತರೂ ಕೂಡಾ ಸುಮಾರು ₹ 6 ರಿಂದ ₹ 8 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ ಕುರಿಗಳನ್ನು ಈಗ ಕೇವಲ ₹3 ರಿಂದ ₹4 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ.

ಬೇಸಿಗೆಯಲ್ಲಿ ಮಧ್ಯಾಹ್ನವಾಗುತ್ತಿದ್ದಂತೆ ಕುರಿಗಳನ್ನು ಕೆರೆ ಕುಂಟೆಗಳಿಗೆ ಕರೆದುಕೊಂಡು ಹೋಗಿ ನೀರು ಕುಡಿಸಿ, ಮರದ ನೆರಳಿನಲ್ಲಿ ಮಂದೆ ಹಾಕಲಾಗುತ್ತಿತ್ತು. ಈಗ ಮಳೆಗಾಲವೂ ಬೇಸಿಗೆಯಂತಾಗಿದ್ದು ಕೆರೆ ಕುಂಟೆಗಳಲ್ಲಿ ನೀರು ಬತ್ತಿಹೋಗಿರುವ ಕಾರಣ. ಕುಡಿಸಲು ನೀರು ಸಿಗುತ್ತಿಲ್ಲ ಎಂದು ಕುರಿಗಾಹಿಯೊಬ್ಬರು ತಿಳಿಸಿದ್ದಾರೆ.

‘ತೋಟಗಳ ಬಳಿಯಲ್ಲಿ ಮಾಡಿಕೊಂಡಿದ್ದ ಮಣ್ಣಿನ ತೊಟ್ಟಿಗಳಲ್ಲಿ ನೀರು ಕುಡಿಸುತ್ತಿದ್ದೆವು. ಈಗ ತೋಟಗಳಲ್ಲಿಯೂ ತೊಟ್ಟಿಗಳಿಲ್ಲ. ರೈತರು  ಕೊಳವೆಬಾವಿಗಳ ಮೂಲಕ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಮಳೆಯ ಕೊರತೆಯಿಂದಾಗಿ ಬಿಸಿಲಿನ ತಾಪವು ಹೆಚ್ಚಾಗುತ್ತಿದ್ದು, ಬೇಸಿಗೆ ಕಾಲದಂತೆ ಭಾಸವಾಗುತ್ತದೆ. ಇದರಿಂದ ನೀರು ಕುಡಿಸಲು ಆಗದಂತಹ ಪರಿಸ್ಥಿತಿ  ನಿರ್ಮಾಣವಾಗಿದೆ ಎಂದು ರೈತ ನಂಜುಂಡಪ್ಪ ಹೇಳುತ್ತಾರೆ.

ಬಹಳಷ್ಟು ಕಡೆಗಳಲ್ಲಿನ ರೈತರು ಕೃಷಿ ಹೊಂಡಗಳನ್ನು ಮಾಡಿಕೊಂಡು ಹೊಂಡಗಳ ಮೇಲೆ ಹೊದಿಕೆ ಹಾಕಿ, ನೆಲದಲ್ಲಿ ಹರಡುತ್ತಿದ್ದ ಹನಿ ನೀರಾವರಿ ಪದ್ಧತಿಯನ್ನು ಬದಲಾವಣೆ ಮಾಡಿ, ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಪೈಪ್‍ ಕಿತ್ತು ಪಾತ್ರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲವೆಂದು ಕುರಿಗಾಹಿಗಳಾದ ಲಕ್ಷ್ಮಮ್ಮ, ನಾರಾಯಣಪ್ಪ ಹೇಳುತ್ತಾರೆ.

ಸರ್ಕಾರ ಕುರಿ ಅಭಿವೃದ್ಧಿ  ಮಂಡಳಿ ಮೂಲಕ ನೀಡುತ್ತಿರುವ ಸೌಲಭ್ಯಗಳ ಜೊತೆಯಲ್ಲೆ ಬರಗಾಲ ಪೀಡಿತ ಜಿಲ್ಲೆಗಳ ಪ್ರತಿಯೊಂದು ಹಳ್ಳಿಗೊಂದರಂತೆ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಮೇವಿನ ಬ್ಯಾಂಕಿನ ರೂಪದಲ್ಲಿ ದನಕರುಗಳಿಗೆ ಕುಡಿಯುವ ನೀರು ಒದಗಿಸಿಕೊಟ್ಟರೆ ತುಂಬಾ ಅನುಕೂಲವಾಗಲಿದೆ ಎನ್ನುತ್ತಾರೆ ರೈತರು.

ಕಾಲುವೆ ಒತ್ತುವರಿ
ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಪ್ರತಿ ವರ್ಷ ನಿಗದಿತ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ಕೆರೆ ಕುಂಟೆಗಳಿಗೆ ನೀರು ಬರುವ  ಕಾಲುವೆಗಳು ಹಾಗೂ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ನಾಗರಿಕರ ದೂರು.

ಅವುಗಳ ಮೇಲೆ ಕಟ್ಟಡನಿರ್ಮಾಣ ಮಾಡಿರುವುದರಿಂದ ನೀರು ಬರಲು ಜಾಗವಿಲ್ಲ. ಬಿದ್ದ ಮಳೆಯ ನೀರು ಭೂಮಿಗೆ ಇಂಗುತ್ತಿರುವುದರಿಂದ ಕೆರೆ ಕುಂಟೆಗಳಿಗೆ ಬರುತ್ತಿಲ್ಲವೆಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
–ಎಂ.ಮುನಿನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT