ADVERTISEMENT

‘ವಚನಗಳಿಂದ ಸಮಾಜ ತಿದ್ದುವ ಕಾಯಕ’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 8:21 IST
Last Updated 12 ಏಪ್ರಿಲ್ 2017, 8:21 IST
ಕನಕಪುರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಆರ್‌.ಯೋಗಾನಂದ ಮಾತನಾಡಿದರು, ರಾಮಕೃಷ್ಣಪ್ಪ, ರಾಮಚಂದ್ರ, ಜೆ.ನಟರಾಜು, ಎಲ್ಲೇಗೌಡ ಬೆಸಗರಹಳ್ಳಿ, ಕೃಷ್ಣಪ್ಪ ಉಪಸ್ಥಿತರಿದ್ದರು
ಕನಕಪುರ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಆರ್‌.ಯೋಗಾನಂದ ಮಾತನಾಡಿದರು, ರಾಮಕೃಷ್ಣಪ್ಪ, ರಾಮಚಂದ್ರ, ಜೆ.ನಟರಾಜು, ಎಲ್ಲೇಗೌಡ ಬೆಸಗರಹಳ್ಳಿ, ಕೃಷ್ಣಪ್ಪ ಉಪಸ್ಥಿತರಿದ್ದರು   

ಕನಕಪುರ:  ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾಯಕ ಮಾಡಿದವರು ಮಹಾಪುರುಷ ದೇವರ ದಾಸಿಮಯ್ಯ ಎಂದು ತಾಲ್ಲೂಕು ತಹಶೀಲ್ದಾರ್ ಆರ್‌. ಯೋಗಾನಂದ್ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಶರಣ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೀರೆ ನೇಯುವ ಕಾಯಕ ಮಾಡುತ್ತಿದ್ದ ದಾಸಿಮಯ್ಯ ಅವರು ಸಾಮಾಜಿಕ ಕಳಕಳಿ ಉಳ್ಳವರಾಗಿ ಸಮಾಜದ ಪರಿವರ್ತನೆಗೆ ಶ್ರಮಿಸಿದವರು, ರಾಮನಾಥ ಅಂಕಿತ ನಾಮದೊಂದಿಗೆ ಸಮಾಜದ ಬದಲಾವಣೆಗಾಗಿ 176 ವಚನಗಳನ್ನು ರಚಿಸಿದ್ದಾರೆ ಎಂದರು.

ರಾಮನಗರ ಜಿಲ್ಲಾ ನೇಕಾರರ ಸಂಘದ ಗೌರವಾಧ್ಯಕ್ಷ ಹಾಗೂ ನಗರಸಭಾ ಮಾಜಿ ಅಧ್ಯಕ್ಷ ಆರ್.ರಾಮಚಂದ್ರ ಮಾತನಾಡಿ ದಾಸಿಮಯ್ಯ ಅವರ ವಚನಗಳು ಭಕ್ತಿಭಾವಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುವಂತಾಗಿದ್ದವು. ಇಂತಹ ಮಹಾಪುರುಷರ ಜಯಂತಿಯನ್ನು ತಾಲ್ಲೂಕು ಆಡಳಿತ ಆಚರಿಸುವುದು ಶ್ಲಾಘನೀಯ ಎಂದರು.

ನೇಕಾರ ವೃತ್ತಿಯನ್ನೇ ಅವಲಂಬಿಸಿಕೊಂಡು ಬರುತ್ತಿರುವ ಕಾರ್ಮಿಕರ ಕುಟುಂಬಗಳು ಸಂಕಷ್ಟ ಎದುರಿಸುವಂತಾಗಿವೆ. ಸರ್ಕಾರವು ನೇಕಾರರಿಗೆ ಅಗತ್ಯ ನೆರವು  ನೀಡಬೇಕೆಂದು ಮನವಿ ಮಾಡಿದರು.

ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಅಧಿಕಾರಿ ರಾಮಕೃಷ್ಣಪ್ಪ, ನೇಕಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ್, ಕುರುಹಿನಶೆಟ್ಟಿ ಸಂಘದ ಅಧ್ಯಕ್ಷ ಚನ್ನನರಸಿಂಹಯ್ಯ, ಪಟ್ಟಶಾಲಿ ಸಂಘದ ಅಧ್ಯಕ್ಷ ಚನ್ನಕೃಷ್ಣಪ್ಪ, ಪದ್ಮಶಾಲಿ ಸಂಘದ ಬಾಬುಕುಮಾರ್,

ದೇವಾಂಗ ಸಂಘದ ಕೃಷ್ಣಪ್ಪ, ಸಕುಳಸಾಳಿ ಸಂಘದ ಅಧ್ಯಕ್ಷ ಮನೋಹರ, ತಾಲ್ಲೂಕು ನೇಕಾರರ ಒಕ್ಕೂಟದ ಅಧ್ಯಕ್ಷ ಜೆ.ನಟರಾಜು ಹಾಜರಿದ್ದರು.  ಬಸವ ಸಮಿತಿಯ ಅಧ್ಯಕ್ಷ ನಿರಂಜನಮೂರ್ತಿ ಹಾಗೂ ವಚನ ಗಾಯಕ ಬಿ.ಪಿ.ರೇಣುಕಪ್ಪ ವಚನ ಗಾಯನಗಳನ್ನು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.