ADVERTISEMENT

ವರ ನಾಪತ್ತೆ: ರದ್ದಾದ ಮದುವೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 9:21 IST
Last Updated 12 ಸೆಪ್ಟೆಂಬರ್ 2017, 9:21 IST
ವಧುವಿನ ಪೋಷಕರು ಪ್ರತಿಭಟನೆ ಮಾಡಿದರು
ವಧುವಿನ ಪೋಷಕರು ಪ್ರತಿಭಟನೆ ಮಾಡಿದರು   

ವಿಜಯಪುರ: ಸಂಬಂಧಿಕರ ಒಪ್ಪಿಗೆಯಿಂದ ಒಂಬತ್ತು ತಿಂಗಳ ಹಿಂದೆ ನಿಶ್ಚಯವಾಗಿದ್ದ ಮದುವೆಗೆ ಶಾದಿಮಹಲ್‌ಗೆ ವರನು ಬಾರದ ಕಾರಣ ಮದುವೆ ಮುರಿದು ಬಿದ್ದಿದೆ. ಇದನ್ನು ಆಕ್ಷೇಪಿಸಿ ವಧುವಿನ ಪೋಷಕರು, ವರನ ಮನೆಯ ಮುಂದೆ ಪ್ರತಿಭಟನೆ ನಡೆಸಿದರು.

ಇಲ್ಲಿನ 8ನೇ ವಾರ್ಡಿನ ನಿವಾಸಿ ಸೈಯದ್ ಷರ್ಪುದ್ದೀನ್‌ ವಿವಾಹವು ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿರುವ ಸಂಬಂಧಿಕರ ಮನೆಯ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು.

ಹಿರಿಯರ ಒಪ್ಪಿಗೆಯಂತೆ ವಧುವಿನ ಕಡೆಯವರು ಮದುವೆ ಮಾಡಿಕೊಡಲು ಜನವರಿ ತಿಂಗಳಿನಲ್ಲಿನಿಶ್ಚಯ ಮಾಡಿದ್ದರು. ಸೆ. 10ರಂದು ಯಶವಂತಪುರದ ಟಿ.ಕೆ.ಶಾದಿಮಹಲ್‌ನಲ್ಲಿ ಮದುವೆ ನಡೆಯಬೇಕಿತ್ತು. ಶನಿವಾರ ರಾತ್ರಿ ಮದುವೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ವರನನ್ನು ವಧುವಿನ ಕಡೆಯವರು ಕಾಯುತ್ತಿದ್ದರು.

ADVERTISEMENT

ರಾತ್ರಿಯಾದರೂ ವರನು ಬಾರದಿರುವುದನ್ನು ಗಮನಿಸಿದ ವಧುವಿನ ಪೋಷಕರು, ವರನ ಮೊಬೈಲ್‌ಗೆ ದೂರವಾಣಿ ಕರೆ ಮಾಡಿದ್ದರು. ಬಹಳ ಸಮಯ ಕಾರ್ಯನಿರತವಾಗಿದ್ದ ಮೊಬೈಲ್ ನಂತರ ಸ್ವಿಚ್ ಆಫ್ ಆಗಿರುವುದನ್ನು ಗಮನಿಸಿದರು. ಆಗ ವರನ ಮನೆಯವರಿಗೆ ದೂರವಾಣಿ ಕರೆ ಮಾಡಿದ್ದರು. ವರನ ಪೋಷಕರು ಕರೆ ಸ್ವೀಕರಿಸಲಿಲ್ಲ.

ಗಾಬರಿಗೊಂಡ ವಧುವಿನ ಪೋಷಕರು, ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಸೋಮವಾರ ರಾತ್ರಿ 8 ಗಂಟೆಗೆ ವಧುವಿನ ಪೋಷಕರು, ವಿಜಯಪುರದ ವರನ ನಿವಾಸಕ್ಕೆ ಬಂದು ವಿಚಾರಿಸಿದಾಗ ‘ನಮಗೆ ಗೊತ್ತಿಲ್ಲ’ ಎಂದು ವರನ ಪೋಷಕರು ಹೇಳಿದ್ದಾರೆ ಎಂದು ವಧುವಿನ ಪೋಷಕರು ಆರೋಪಿಸಿದರು. ಬೇಸತ್ತಿದ್ದ ವಧುವಿನ ಪೋಷಕರು, ಪ್ರತಿಭಟನೆ ನಡೆಸಿದರು.

‘ನಮಗೆ ಸುಮಾರು ₹5 ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ. ಕೂಡಲೇ ವರನನ್ನು ಪತ್ತೆ ಹಚ್ಚಿ ನ್ಯಾಯ ಕಲ್ಪಿಸಬೇಕು’ ಎಂದರು.ವಧುವಿನ ಪೋಷಕರಾದ ತಾಜುದ್ದಿನ್‌, ಸೈಯದ್ ಖಾಜಾ, ಮೌನುದ್ದಿನ್‌, ಸಲೀಂ, ರೇಷ್ಮಾ, ಸಯಿದಾ, ಆಸ್ಮಾಭಾನು, ರೆಹಾನಾ ಇದ್ದರು. ವರನ ಸಹೋದರ ಸೈಯದ್ ಶಾಬುದ್ಧೀನ್ ಮಾತನಾಡಿ, ‘ಮದುವೆಗೆ ನಾವೂ ಸಿದ್ಧತೆ ಮಾಡಿಕೊಂಡಿದ್ದೆವು. ನನ್ನ ತಮ್ಮನ ಒಪ್ಪಿಗೆಯಿಂದಲೇ ಮದುವೆ ನಿಶ್ಚಯ ಮಾಡಿದ್ದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.