ADVERTISEMENT

ಶಿಷ್ಟಾಚಾರ ಉಲ್ಲಂಘಿಸಿ ಕಾಂಗ್ರೆಸ್ ಸಮಾವೇಶ: ಮುನೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 10:32 IST
Last Updated 12 ಜುಲೈ 2017, 10:32 IST

ದೇವನಹಳ್ಳಿ: ದೊಡ್ಡಬಳ್ಳಾಪುರದಲ್ಲಿ ಸೋಮವಾರ ನಡೆದ ವಿವಿಧ ಕಾಮಗಾರಿ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್ ಸಮಾವೇಶವನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದರು. ‘ಜಕ್ಕಲಮಡಗು ಕುಡಿಯುವ ನೀರಿನ ಯೋಜನೆ, ಒಳಚರಂಡಿ ವ್ಯವಸ್ಥೆ, ನೂತನ ಸೇತುವೆ ಈ ಹಿಂದಿನ ಶಾಸಕರ ಕೊಡುಗೆ. ಈಗಿನ ಶಾಸಕ ವೆಂಕಟರಮಣಯ್ಯ ತಾಲ್ಲೂಕಿಗೆ ₹4,000 ಕೋಟಿ ಅನುದಾನ ತಂದಿದ್ದೇನೆ. ನಾಲ್ಕು ವರ್ಷದಲ್ಲಿ ಕ್ಷೇತ್ರ ಪ್ರಗತಿಯಾಗಿದೆ ಎಂದು ಹೇಳುತ್ತಿದ್ದಾರೆ ಎಂದರು.

ನೆಲಮಂಗಲ ಮತ್ತು ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕರು ಅಭಿವೃದ್ಧಿ ಕೆಲಸ ಮಾಡಿದ್ದಾರೆ; ಸುಳ್ಳು ಹೇಳುತ್ತಿಲ್ಲ. ಹೊಸಕೋಟೆ ಕ್ಷೇತ್ರಕ್ಕೆ ಸಿಗದಷ್ಟು ಅನುದಾನ ದೊಡ್ಡಬಳ್ಳಾಪುರಕ್ಕೆ ಸಿಗುವುದು ಹೇಗೆ ಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಷ್ಟು ಕೋಟಿ ಅನುದಾನ ನೀಡಿಲ್ಲ ಎಂದು ದೂರಿದರು.

ADVERTISEMENT

ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಐದು ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಎ.ಪಿ.ಎಂ.ಸಿ. ನಿರ್ದೇಶಕರು, ಹಾಪ್‌ಕಾಮ್ ನಿರ್ದೇಶಕರು ಆಯ್ಕೆಗೊಂಡಿದ್ದಾರೆ. ಅಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರಿಲ್ಲ ಎಂದರು.

ಸರ್ಕಾರ ಶಿಷ್ಟಾಚಾರ ಗೊತ್ತಿಲ್ಲದ ಅಧಿಕಾರಿಗಳನ್ನು ನೇಮಿಸಿದೆ. ಸರ್ಕಾರದ ಕಾರ್ಯಕ್ರಮ ಎಂಬುದನ್ನು ಮರೆತು ಕಾಂಗ್ರೆಸ್ ಸಮಾವೇಶ ನಡೆಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಸತತವಾಗಿ ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಸರ್ಕಾರದ ಯಾವುದೇ  ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.