ADVERTISEMENT

ಸಂಗೀತದಿಂದ ಬದುಕಿನಲ್ಲಿ ಶಾಂತಿ ನೆಮ್ಮದಿ

ರಾಮನಗರದಲ್ಲಿ ಮಧುಬನ ಸಂಗೀತ ಶಾಲೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 9:07 IST
Last Updated 6 ಫೆಬ್ರುವರಿ 2017, 9:07 IST
ರಾಮನಗರದ ಶರತ್ ಮೆಮೋರಿಯಲ್ ಶಾಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಧುಬನ ಸಂಗೀತ ಶಾಲೆಗೆ ಸಂಗೀತ ವಿದ್ವಾನ್‌ ಶಿವಾಜಿರಾವ್‌ ಚಾಲನೆ ನೀಡಿದರು
ರಾಮನಗರದ ಶರತ್ ಮೆಮೋರಿಯಲ್ ಶಾಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಧುಬನ ಸಂಗೀತ ಶಾಲೆಗೆ ಸಂಗೀತ ವಿದ್ವಾನ್‌ ಶಿವಾಜಿರಾವ್‌ ಚಾಲನೆ ನೀಡಿದರು   

ರಾಮನಗರ: ‘ಸಂಗೀತ ಎನ್ನುವುದು ಮನುಷ್ಯ ಜೀವನ ಕ್ರಮವಾಗಿದ್ದು ಸಂಗೀತದಿಂದ ಬದುಕಿನಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ’ ಎಂದು ಸಂಗೀತ ವಿದ್ವಾನ್ ಶಿವಾಜಿ ರಾವ್ ಹೇಳಿದರು.

ನಗರದ ಶರತ್ ಮೆಮೊರಿಯಲ್ ಶಾಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಧುಬನ ಸಂಗೀತ ಶಾಲೆಗೆ ಚಾಲನೆ ನೀಡಿ ಅವರು ಮಾತನಾಡಿದರು. ‘ಇಂದಿಗೂ ಭಾರತ ಮತ್ತು ಕರ್ನಾಟಕ ಸಂಗೀತ ತನ್ನದೇ ಆದ ಸ್ಥಾನ ಪಡೆದುಕೊಂಡಿವೆ’ ಎಂದು ತಿಳಿಸಿದರು.

‘ಇಂದಿನ ಪೋಷಕರಲ್ಲಿ ಮಕ್ಕಳ ಅಂಕ ಗಳಿಕೆಯೇ ಮುಖ್ಯವಾಗುತ್ತಿದೆ.  ಇದರಿಂದ ಮಕ್ಕಳಿಗೆ ಮಾನಸಿಕ ಸ್ಥಿಮಿತ ಇಲ್ಲದಂತಾಗಿದೆ. ಯಾವ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳುವುದಿಲ್ಲವೋ ಅವರಿಗೆ ಮಾನಸಿಕ ಸ್ಥೈರ್ಯ  ಕಡಿಮೆ’ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕಿ ಎಚ್.ಕೆ. ಶೈಲಾ ಶ್ರೀನಿವಾಸ್ ಮಾತನಾಡಿ ‘ಸಂಗೀತ ಎನ್ನುವುದು ಕಾಲ, ದೇಶ, ಭಾಷೆ ಮೊದಲಾದ  ಪರಿಮಿತಿಯನ್ನು ಮೀರಿದ ಕಲೆಯಾಗಿದೆ. ಪ್ರತಿಯೊಬ್ಬ ಮನುಷ್ಯನ ಮಾನಸಿಕ ಶಕ್ತಿಯನ್ನು ಹಿಗ್ಗಿಸುವಲ್ಲಿ ಇಡಿ ವಿಶ್ವದಲ್ಲಿಯೇ ಸಂಗೀತ ಮೊದಲ ಸ್ಥಾನ ಪಡೆದುಕೊಂಡಿದೆ. ಇಂತಹ ಸಂಗೀತ ಕಲೆಯನ್ನು ಪೋಷಕರು ಎಲ್ಲಾ ಮಕ್ಕಳಿಗೂ ಕಲಿಸಬೇಕು’ ಎಂದು ತಿಳಿಸಿದರು.

ಗಾಯಕ ನಾಸಿರ್ ಖಾನ್ ಮಾತನಾಡಿ, ‘ಇಂದಿನ ಮಕ್ಕಳಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ಜಾನಪದ ಗೀತೆಗಳ ಬಗ್ಗೆ ಅರಿವು ಮೂಡಿಸಲು ಸಂಗೀತ ಶಾಲೆ ಪ್ರಾರಂಭಿಸಲಾಗಿದೆ. ಇಂದು ಶಾಲಾ ಮಕ್ಕಳಿಗೆ ನಾಡಗೀತೆ ಮತ್ತು ರೈತ ಗೀತೆಗಳನ್ನು ಹೇಳಲು ಬರುತ್ತಿಲ್ಲ. ಆದ್ದರಿಂದ ಪ್ರತಿ ತಿಂಗಳು ಒಂದು ಖಾಸಗಿ ಶಾಲೆ ಮತ್ತು ಒಂದು ಸರ್ಕಾರಿ ಶಾಲೆಯ ಹತ್ತು ಮಕ್ಕಳನ್ನು ಆಯ್ಕೆ ಮಾಡಿ ರೈತ ಗೀತೆ ಮತ್ತು ನಾಡಗೀತೆಗಳ ತರಬೇತಿ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಚ್.ಎಸ್. ರೂಪೇಶ್ ಕುಮಾರ್‌, ಗಾಯಕಿ ರಮಣಿ, ರಿಧಿ, ಸವಿತ, ಐಶ್ವರ್ಯ ತಮ್ಮ ಗಾಯನದ ಮೂಲಕ ಪ್ರೇಕ್ಷಕರ ಮನ ಸೆಳೆದರು. ವಿದ್ಯಾರ್ಥಿನಿ ಧನುಶ್ರೀ, ಸಿ.ಪ್ರೀತಿ ಪ್ರಾರ್ಥಿಸಿದರು.

*
ಅನೇಕರು ಕಿರುಚುವುದನ್ನು ಸಂಗೀತ ಎಂದು ತಿಳಿದುಕೊಂಡಿದ್ದಾರೆ. ಶ್ರುತಿ, ಲಯ, ತಾಳ ಇದ್ದರೆ ಮಾತ್ರ ಅದು ಸಂಗೀತ ಎನಿಸಿಕೊಳ್ಳುತ್ತದೆ.
-ಶಿವಾಜಿರಾವ್‌,
ಸಂಗೀತ ವಿದ್ವಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT