ADVERTISEMENT

ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ: ಮಾವು ಕಳಚಿ ಧರೆಗೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 10:29 IST
Last Updated 6 ಏಪ್ರಿಲ್ 2017, 10:29 IST

ವಿಜಯಪುರ: ತಾಲ್ಲೂಕಿನಲ್ಲಿ ಹವಾಮಾನ ವೈಪರಿತ್ಯದಿಂದ ಹೆಚ್ಚುತ್ತಿರುವ ತಾಪಮಾನ ಮಾವು ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಕಟಾವು ಹಂತದಲ್ಲಿರುವ ಮಾವು ಅಧಿಕ ಉಷ್ಣಾಂಶದಿಂದಾಗಿ ಮರಗಳಿಂದ ಕಳಚಿ ಧರೆಗುರುಳುತ್ತಿದ್ದು ಬೆಳೆಗಾರರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆನ್ನುವಂತಾಗಿದೆ.

ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದಿದ್ದು ತಾಲ್ಲೂಕಿನಲ್ಲಿ ಈ ವರ್ಷವೂ ಮಾವು ನಿರೀಕ್ಷಿತ ಪ್ರಮಾಣದಲ್ಲಿ ಫಸಲು ನೀಡಿಲ್ಲ.  ಅಲ್ಪಸ್ವಲ್ಪ ಬಂದಿರುವ ಫಸಲನ್ನು ಕಾಪಾಡಿಕೊಳ್ಳಲು ಮಾವು ಬೆಳೆಗಾರರು ಸಿದ್ಧತೆಯಲ್ಲಿ ತೊಡಗಿರುವಾಗಲೇ ಹಲವು ದಿನಗಳಿಂದ ತಾರಕಕ್ಕೇರುತ್ತಿರುವ ಬಿಸಿಲಿನ ತಾಪದಿಂದಾಗಿ ಅಪಾರ ಪ್ರಮಾಣದ ಮಾವು ಧರೆಗುರುಳಿ ಬೆಳೆಗಾರರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ರೈತರು ಬೆಳೆಯುವಂತಹ ತರಹೇವಾರಿ ಮಾವು ದೇಶದ ಮೂಲೆ ಮೂಲೆಗೂ ತಲುಪುತ್ತದೆ.  ಅಲ್ಲದೆ ಹೊರದೇಶಗಳಲ್ಲೂ ಉತ್ತಮ ಬೇಡಿಕೆ ಇದೆ. ಆದರೆ ಹವಾಮಾನ ವೈಪರೀತ್ಯದ ಪೆಡಂಭೂತ ಗುಣಮಟ್ಟದ ಮಾವು ಬೆಳೆಯಲು ಬೆಳೆಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜೊತೆಗೆ ಹೆಚ್ಚುತ್ತಿರುವ ಕೀಟಬಾಧೆ ಮಾವು ಬೆಳೆಗಾರರನ್ನು ಕಂಗಾಲಾಗಿಸಿವೆ.

ADVERTISEMENT

ತೋಟಗಾರಿಕೆ ಇಲಾಖೆಯ ಮಾಹಿತಿಯ ಪ್ರಕಾರ ತಾಲ್ಲೂಕಿನಲ್ಲಿ 280 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಮೂರು ಹಂತಗಳಲ್ಲಿ ಮಾವು ಬೆಳೆದಿದೆ. ಕೃಷಿ ಪ್ರಧಾನ ತಾಲ್ಲೂಕಿನಲ್ಲಿ ಅಂತರ್ಜಲ ದಿನೇ ದಿನೇ ಪಾತಾಳಕ್ಕೆ ಕುಸಿದು ಕೊಳವೆಬಾವಿಗಳು ಕೈ ಕೊಡುತ್ತಿರುವುದರಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದೆ ನೂರಾರು ರೈತರು ತಮ್ಮ ಹೊಲ, ಗದ್ದೆಗಳನ್ನು ಬೀಡು ಬಿಟ್ಟು ವಾರ್ಷಿಕವಾಗಿ ಆದಾಯ ತಂದುಕೊಡುವ ಮಾವು, ಗೋಡಂಬಿ ಮತ್ತಿತರ ಬೆಳೆಗಳನ್ನು ಇಟ್ಟು ಪೋಷಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ನಿರಂತರ ಬರಗಾಲದಿಂದ ವರ್ಷದಿಂದ ವರ್ಷಕ್ಕೆ ಮಾವಿನ ಫಸಲು ಸಾಕಷ್ಟು ಕುಂಠಿತವಾಗುತ್ತಿದೆ. ತೇವಾಂಶದ ಕೊರತೆಯಿಂದ ಮರಗಳು ಒಣಗುತ್ತಿರುವುದರಿಂದ ಗುಣಮಟ್ಟದ ಮಾವು ಬೆಳೆಯುವುದು ಕಷ್ಟವಾಗಿದೆ. ಇದರಿಂದ ಮಾವು ಬೆಳೆಗಾರರ ಆರೇಳು ತಿಂಗಳ ಪರಿಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸದ್ಯ ಉಷ್ಣಾಂಶ ಹೆಚ್ಚಳದಿಂದ ತಡವಾಗಿ ಬಿಟ್ಟಿರುವ ಹೂ ಕಾಯಿಗಳು ಮರಗಳಲ್ಲಿಯೇ ಕಮರಿ ಹೋಗುತ್ತಿವೆ.  ಪ್ರತಿವರ್ಷ ಏಪ್ರಿಲ್ ಅಂತ್ಯ ಅಥವಾ ಮೇ ತಿಂಗಳಿನಲ್ಲಿ ಆರಂಭಗೊಳ್ಳುತ್ತಿದ್ದ ಮಾವು ಸುಗ್ಗಿ ಈ ವರ್ಷ ಏಪ್ರಿಲ್ ತಿಂಗಳ ಆರಂಭದಲ್ಲಿಯೇ ಶುಭಾರಂಭ ಮಾಡಿದೆ. ಕಟಾವಿಗೆ ಬಂದಿರುವ ಮಾವಿನ ತೋಪುಗಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಿರುವ  ಬೆಳೆಗಾರರು ಕಟಾವಿಗೆ ಅಗತ್ಯ ಸಿದ್ಧತೆ ನಡೆಸಿದ್ದಾರೆ.

ಕಾರ್ಮಿಕರಿಗೆ ಮಾವು ಸುಗ್ಗಿ ಒಂದಿಷ್ಟು ಕೆಲಸ ಒದಗಿಸಲಿದ್ದು ಜೂನ್ ಹಾಗೂ ಜುಲೈ ತಿಂಗಳವರೆಗೂ ಮಾವು ಸುಗ್ಗಿ ಇರುತ್ತಿತ್ತು. ಈ ಬಾರಿ ಸೆಪ್ಟೆಂಬರ್ ತಿಂಗಳವರೆಗೂ ಇರಲಿದೆ.

ಉಷ್ಣಾಂಶ ಹೆಚ್ಚಾಗಿರುವ ಕಾರಣ ಮರಗಳಲ್ಲಿರುವ ಅಲ್ಪಸ್ವಲ್ಪ ಮಾವಿನ ಕಾಯಿಗಳು ಮರಗಳಿಂದ ಉದುರುತ್ತಿವೆ. ‘ನಾವು ಹೂವಿನ ಸಮಯದಲ್ಲೆ ವ್ಯಾಪಾರ ಮಾಡಿಕೊಟ್ಟು ಹಣ ತಗೊಂಡಿದ್ದೇವೆ. ಈಗ ವ್ಯಾಪಾರಸ್ಥರು ಹಣ ವಾಪಸ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.  ಏನು ಮಾಡಬೇಕು ಅನ್ನೋದು ಗೊತ್ತಾಗುತ್ತಿಲ್ಲ’ಎಂದು ಮಾವು ಬೆಳೆಗಾರ ನಂಜಪ್ಪ ಹೇಳುತ್ತಾರೆ.

**

ತಾಲ್ಲೂಕಿನಲ್ಲಿ ಶೇ 40 ರಷ್ಟು ಮಾವಿನ ಬೆಳೆ ನಷ್ಟವಾಗಿದೆ. ‘ಕೆಲ್ಟಾರ್ ಅಥವಾ ಪ್ಲಾಮಾಪಿಕ್ಸ್’ ಔಷಧಿಗಳನ್ನು ಸಿಂಪಡಣೆ ಮಾಡಿದರೆ ಉದುರುವುದು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ.
–ಮಂಜುನಾಥ್, ಸಹಾಯಕ ನಿರ್ದೇಶಕರು, ತೋಟಗಾರಿಕೆ ದೇವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.