ADVERTISEMENT

‘ಹೊಲಗಳಲ್ಲಿ ವಿದ್ಯುತ್‌ ತಂತಿಗೆ ಅವಕಾಶ ಇಲ್ಲ’

ಡಿವೈಎಸ್‌ಪಿ ಕಚೇರಿಯಲ್ಲಿ ರೈತರ ಒಕ್ಕೊರಲ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 8:56 IST
Last Updated 20 ಮಾರ್ಚ್ 2017, 8:56 IST

ದೊಡ್ಡಬಳ್ಳಾಪುರ: ಹೈಟೆನ್ಶನ್‌ ವಿದ್ಯುತ್‌ ತಂತಿ ಹಾದು ಹೋಗುವ ರೈತರ ಭೂಮಿಯನ್ನು ಸರ್ವೇ ನಡೆಸಿ ಸೂಕ್ತ ಪರಿಹಾರ ನೀಡುವುದಾಗಿ ಉಪವಿಭಾಗಾಧಿಕಾರಿ ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲ.

ಹೀಗಾಗಿ ಯಾವುದೇ ಕಾರಣಕ್ಕೂ ಪವರ್‌ಗ್ರಿಡ್‌ ಕಂಪೆನಿಯವರು ರೈತರ ಹೊಲಗಳಲ್ಲಿ ವಿದ್ಯುತ್‌ ತಂತಿ ಹಾಕಲು ಅವಕಾಶ ನೀಡುವುದಿಲ್ಲ ಎಂದು ಭಾನುವಾರ ಸಂಜೆ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

ಡಿವೈಎಸ್‌ಪಿ ವೈ.ನಾಗರಾಜ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ರೈತ ಮುಖಂಡ ಹಾಗೂ ವಕೀಲ ಕಡತನಮಲೆ ಸತೀಶ್‌ ಮಾತನಾಡಿ, ವಿದ್ಯುತ್‌ ತಂತಿ ಹಾದುವ ಹೋಗುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿದ ನಂತರ ಕಾಮಗಾರಿ ಪ್ರಾರಂಭಿಸಬೇಕು.

ಈ ಬಗ್ಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತವಾಗದ ಕಾರಣ ರೈತರ ಭೂಮಿ ಇಲ್ಲದ ಕಡೆಗಳಲ್ಲಿ ಮಾತ್ರ ಕಾಮಗಾರಿ ನಡೆಸಿ. ಬಜೆಟ್‌ ನಂತರ ರೈತರ ಸಭೆ ಕರೆದು ಸೂಕ್ತ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ಹೀಗಿದ್ದರೂ  ಪವರ್‌ಗ್ರಿಡ್‌ ಅಧಿಕಾರಿಗಳು 2015ರಲ್ಲಿ ಆಗಿರುವ ಆದೇಶವನ್ನು ಪೊಲೀಸರಿಗೆ ಹಾಗೂ ಜಿಲ್ಲಾಧಿಕಾರಿಗೆ ನೀಡಿ ಅಧಿಕಾರಿಗಳನ್ನು ದಾರಿತಪ್ಪಿಸಲು ಹೊರಟಿದ್ದಾರೆ ಎಂದರು.

2015ರ ಆದೇಶಕ್ಕೆ ರಾಜ್ಯ ಹೈಕೋರ್ಟ್‌ ಈಗಾಗಲೇ ತಡೆಯಾಜ್ಞೆ ನೀಡಿದೆ. ಇದರಿಂದ ಬಲವಂತಾಗಿ ರೈತರ ಭೂಮಿಯಲ್ಲಿ ವಿದ್ಯುತ್‌ ತಂತಿ ಹಾಕಿದರೆ ಹೈಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಘನೆಯಾಗಲಿದೆ.

ಸೂಕ್ತ ಪರಿಹಾರ, ಹಾಗೂ ಭೂಮಿ ಸ್ವಾಧೀನಪಡಿಸಿಕೊಳ್ಳದ ಹೊರತು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಕುಮಾರ್‌, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಸನ್ನ, ಮುಖಂಡರಾದ ಮುತ್ತೇಗೌಡ, ಕೆ.ಸುಲೋಚನಮ್ಮ, ಸತೀಶ್‌, ಕಾಡನೂರು ಮೂರ್ತಿ, ವಿರೂಪಾಕ್ಷ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.