ADVERTISEMENT

ಕಾಂಗ್ರೆಸ್‌ ಟಿಕೆಟ್‌ ಸಿಗದಿದ್ದರೆ ಪಕ್ಷದ ದುಡಿಮೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 9:35 IST
Last Updated 7 ಫೆಬ್ರುವರಿ 2018, 9:35 IST

ದೊಡ್ಡಬಳ್ಳಾಪುರ: ‘ನಾನು ದೇವನಹಳ್ಳಿ ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ನೀಡಿದರೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಅದರೂ ಹೈ ಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು ಬೇರೆಯರಿಗೆ ಟಿಕೆಟ್ ನೀಡಿದರೆ ಪಕ್ಷ ಕಟ್ಟುವ ಕೆಲಸವನ್ನು ಮುಂದುವರೆಸುತ್ತೇನೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಹೇಳಿದರು. ತಾಲ್ಲೂಕಿನ ಮೆಳೇಕೋಟೆ ಗ್ರಾಮದ ಪೋಸ್ಟ್ ರಾಜಣ್ಣನವರ ಮನೆಯಲ್ಲಿ ಹೂಡಿದ್ದ ಗ್ರಾಮ ವಾಸ್ತವ್ಯದಲ್ಲಿ ಮಾತನಾಡಿದರು.

‘40 ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿ ವಹಿಸಿಕೊಂಡು ರಾಜ್ಯವ್ಯಾಪಿಯಾಗಿ ಪಕ್ಷವನ್ನು ಕಟ್ಟುವ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ. ಶಾಸಕನಾಗಿ ಒಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದಲ್ಲಿ ನನ್ನದೇ ಆದ ದೂರದೃಷ್ಟಿಯನ್ನು ಹೊಂದಿದ್ದು,   ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಮಾಡುವುದು ನನ್ನ ಕನಸಾಗಿದೆ’ ಎಂದರು.

‘ಶಾಸಕ ಸ್ಥಾನಕ್ಕೆ ಇನ್ನೇನು ಬಿ ಫಾರಂ ಸಿಕ್ಕಿದೆ ಎನ್ನುವಂತೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ನಮ್ಮದೆ ಪಕ್ಷದ ನಾಯಕರು ಮೂಗು ಮುರಿಯುತ್ತಿದ್ದಾರೆ. ಆದರೆ ಪಕ್ಷವನ್ನು ಕಟ್ಟುವ ಹಂತದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಕಾರ್ಯಕರ್ತರ, ಮುಖಂಡರ ಸಂಪರ್ಕ ಸಾಧಿಸುವ ಮೂಲಕ ಆಯಾ ಪ್ರದೇಶದ ಸಮಸ್ಯೆಗಳನ್ನು ಅವಲೋಕನ ಮಾಡುವಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಈ ಮೂಲಕ ಪಕ್ಷವನ್ನು ಕಟ್ಟುವಲ್ಲಿ ಶ್ರಮ ವಹಿಸುತ್ತಿದ್ದೇನೆ’ ಎಂದರು.

ADVERTISEMENT

ಮೋದಿ ವಿರುದ್ಧ ವಾಗ್ದಾಳಿ: ಪ್ರಧಾನ ಮಂತ್ರಿ ಮೋದಿ 70 ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿರುವ ಅಭಿವೃದ್ಧಿ ಪಥದ ದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಅಲ್ಲದೆ ಇದುವರೆಗೂ ಹೊರ ದೇಶಗಳಲ್ಲಿ ಸುಳ್ಳುಗಳನ್ನು ಹೇಳಿಕೊಂಡು ಪ್ರವಾಸ ಮಾಡುತ್ತಿದ್ದವರು ಈಗ ದೇಶದ ಒಳಗೆ ಸುಳ್ಳು ಹೇಳಲು ಇಳಿದಿದ್ದಾರೆ ಎಂದು ಟೀಕಿಸಿದರು.

ಮೆಳೇಕೋಟೆ ಗ್ರಾಮದ ಪೋಸ್ಟ್ ರಾಜಣ್ಣ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯಕ್ಕೂ ಮುನ್ನ ಪಕ್ಷದ ಸಂಘಟನೆ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದರು.

ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಮುಖಂಡ ಬುವನಹಳ್ಳಿ ಮುನಿರಾಜು, ಸಿ.ಕೆ.ರಾಮಚಂದ್ರಪ್ಪ, ಕೆ.ಶ್ರೀನಿವಾಸಮೂರ್ತಿ, ಎಂ.ಎಸ್.ಜಗನ್ನಾಥ್, ತೂಬಗೆರೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎಂ.ಜಿ.ಜಗನ್ನಾಥ್, ಪ್ರಧಾನ ಕಾರ್ಯದರ್ಶಿ ಎನ್.ಆಂಜಿನಪ್ಪ, ವಿಜಯಪುರ ಬ್ಲಾಕ್ ಉಪಾಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಕಾಂತರಾಜು, ಎಂಪಿಸಿಎಸ್ ಅಧ್ಯಕ್ಷ ಎಂ.ಎನ್.ನಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಸತೀಶ್, ಹೆಗ್ಗಡಿಹಳ್ಳಿ ಗ್ರಾಮದ ಮುಖಂಡರಾದ ನರಸಿಂಹಯ್ಯ, ಎ.ಹನುಮಂತಯ್ಯ, ಚೊಕ್ಕರೆಡ್ಡಿ, ವಜ್ರಮುನಿ, ಚಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.