ADVERTISEMENT

ಕೊಡಗು ಪ್ರವಾಹ: ಜೀವ ಕೈಲಿ ಹಿಡಿದು ಲಾರಿ ಓಡಿಸಿದೆ

ದಾರಿಯುದ್ದಕ್ಕೂ ಭೂಕುಸಿತ, ರಸ್ತೆ ಮೇಲೆ ಮಣ್ಣು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 11:28 IST
Last Updated 22 ಆಗಸ್ಟ್ 2018, 11:28 IST
ಲಾರಿ ಚಾಲಕ ಮುರಳಿ
ಲಾರಿ ಚಾಲಕ ಮುರಳಿ   

ದೊಡ್ಡಬಳ್ಳಾಪುರ: ‘ದಾರಿಯುದ್ದಕ್ಕೂ ರಸ್ತೆ ಮೇಲೆ ನೀರು ಹರೀತಿತ್ತು. ಜರಿದು ರಸ್ತೆ ಮೇಲೆ ಬಿದ್ದಿದ್ದ ಮಣ್ಣನ್ನುಜೆಸಿಬಿಗಳು ತೆರವುಗೊಳಿಸುತ್ತಿದ್ದವು. ರಸ್ತೆಮೇಲೆ ನಿಗಾಯಿಟ್ಟು ಲಾರಿ ಓಡಿಸ್ತಿದ್ದೆ. ಆದ್ರೆ ಎದೆಯಲ್ಲಿ ಮಾತ್ರ ಪುಕುಪುಕು ಭಯ...’

ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದ ಮುರಳಿ ನಗರದ ಶ್ರೀರಾಮ್ ಟ್ರಾನ್ಸ್‌ಪೋರ್ಟ್ಸ್‌ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಾರೆ. ಬೆಂಗಳೂರಿನಿಂದ ಮಡಿಕೇರಿಗೆ ಪರಿಹಾರ ಸಾಮಗ್ರಿಗಳನ್ನು ಹೊತ್ತೊಯ್ದಿದ್ದ ಸಂಸ್ಥೆಯ ಲಾರಿಯೊಂದರ ಸ್ಟೇರಿಂಗ್ ಹಿಡಿದಿದ್ದರು.ಮಡಿಕೇರಿ ಟ್ರಿಪ್‌ನ ಅನುಭವವನ್ನು ಅವರು ಹಂಚಿಕೊಂಡ ಬಗೆಯಿದು. ಅವರ ಮಾತುಗಳ ಸಂಗ್ರಹರೂಪ ಇಲ್ಲಿದೆ.

‘ಸಾರ್ವಜನಿಕರ ನೆರವಿನಿಂದ ನ್ಯೂಸ್‌ ಚಾನೆಲ್ ಸಂಗ್ರಹಿಸಿದ್ದ ಸಾಮಗ್ರಿಗಳನ್ನು ಮಡಿಕೇರಿಗೆ ತಲುಪಿಸಿ ಬರುವಂತೆ ಮಾಲೀಕರು ಸೂಚಿಸಿದರು. ಅದರಂತೆ ಶನಿವಾರ ರಾತ್ರಿ 9 ಗಂಟೆಗೆ ಯಶವಂತಪುರಕ್ಕೆ ಹೋದೆ. ಲಾರಿ ಲೋಡ್ ಆಗಿ ಹೊರಡುವ ಹೊತ್ತಿಗೆ 12 ದಾಟಿತ್ತು.

ADVERTISEMENT

‘ನನ್ನ ಲಾರಿಯ ಜೊತೆಗೆ ಪರಿಹಾರ ಸಾಮಗ್ರಿ ಹೊತ್ತ ಇನ್ನೂ ಮೂರ್ನಾಲ್ಕು ಲಾರಿಗಳು ಹೊರಟವು. ನಾವು ಶ್ರೀರಂಗಪಟ್ಟಣ, ಪಿರಿಯಾಪಟ್ಟಣ, ಕುಶಾಲನಗರ ಮಾರ್ಗವಾಗಿ ಮಡಿಕೇರಿ ತಲುಪಿದೆವು. ಘಾಟಿಯಲ್ಲಿ ರಸ್ತೆ ಸ್ಥಿತಿ ನೋಡಿ ನನಗೆ ಜೀವ ಬಾಯಿಗೆ ಬಂದಂತೆ ಆಗಿತ್ತು. ಅದೆಲ್ಲಾ ನಾನು ಗಾಡಿ ಓಡಿಸಿರೋ ಜಾಗಗಳೇ. ಆದರೆ ಈ ಸಲ ಮಾತ್ರ ನಾನು ಯಾವುದೋ ಗುರುತು–ಪರಿಚಯ ಇಲ್ಲದ ದೇಶದಲ್ಲಿ ಲಾರಿ ಓಡಿಸ್ತಾ ಇದೀನಿ ಅನಿಸಿಬಿಡ್ತು. ಈ ಟ್ರಿಪ್ ಮುಗಿಯಿತ್ತೋ, ಯಾವಾಗ ಹೆಂಡತಿ ಮುಖ ನೋಡ್ತೀನೋ ಅನಿಸ್ತಿಸ್ತು. ನನಗಿನ್ನೂ ಮದುವೆಯಾಗಿ ಆರು ತಿಂಗಳಾಗಿದೆ ಅಷ್ಟೇ.

‘ಮಡಿಕೇರಿಗೆ ಹೋದ ತಕ್ಷಣ, ‘ಸಾರ್ ಬೇಗ ಅನ್‌ಲೋಡ್ ಮಾಡಿಸಿ, ವಾಪಸ್ ಹೋಗಬೇಕು’ ಅಂತ ಕೇಳಿದೆ. ಅವರು ಕಷ್ಟಪಟ್ಟು ಅನ್‌ಲೋಡ್ ಮಾಡಿಸಿದ್ರು. ಅಕ್ಕಿ, ಬೇಳೆ, ಸಕ್ಕರೆ, ಬಿಸ್ಕೀಟ್, ಕೇಕ್, ಬನ್, ಬಟ್ಟೆ, ಡಯಾಪರ್‌, ಬೆಡ್‌ಶೀಟ್‌, ಚಾಪೆಗಳೆಲ್ಲಾ ನನ್ನ ಲಾರಿಯಲ್ಲಿತ್ತು. ಜನರ ಕಷ್ಟ ನೋಡಿ ನಂಗೆ ಅಳುಬಂದಂಗೆ ಆಗಿಬಿಡ್ತು. ಅನ್‌ಲೋಡ್ ಮಾಡೋಕೆ ಬಲವಂತ ಮಾಡಬಾರದಿತ್ತು ಅನಿಸ್ತು. ಸುಮ್ಮನೆ ಒಂದು ಕಡೆಗೆ ಹೋಗಿ ನಿಂತುಕೊಂಡೆ. ಅದೇನ್ ಸಾರ್ ಅಲ್ಲಿ, ಎಳೇ ಮಕ್ಕಳನ್ನು ಕಂಕುಳಿಗೆ ಹಾಕಿಕೊಂಡ ತಾಯಂದಿರು, ವಯಸ್ಸಾಗಿರೋ ಅಜ್ಜ–ಅಜ್ಜಿಯರು ನೋಡಿದಾಗ ಕರುಳು ಚುರುಕ್ ಅನಿಸ್ತು. ಅಯ್ಯಪ್ಪ, ಆ ಛಳೀಲಿ ಅದ್ಹೇಗೆ ಇರ್ತಾರೋ ಅನಿಸ್ತು.

‘ನಮ್ಮೂರ ಕಡೆ ಮಳೆ ಬಾರದೆ ಬಿತ್ತಿದ ಬೆಳೆಗಳು ಒಣಗಿ ಹೋಗ್ತಾವೆ. ಬರಗಾಲ ಅಂದ್ರೆ ಏನು ಅಂತ ನನಗೆ ಗೊತ್ತು. ಆದರೆ ಮಳೆ ಬಂದೂ ಹೀಗೆಲ್ಲಾ ಅಂತ ಗೊತ್ತಿರಲಿಲ್ಲ. ಏನು ಮಳೆ ಸಾರ್ ಅದು. ಎದುರಿಗೆ ಇರೋ ಗಾಡಿಗಳು ಕಾಣಿಸ್ತಾನೇ ಇರ್ಲಿಲ್ಲ. ಅಬ್ಬಾ, ನಮ್ಮೂರಿನ ಜನರು ಕನಸಲ್ಲೂ ಆ ಮಳೆನ ಊಹಿಸೋಕೆ ಆಗಲ್ಲ ಬಿಡಿ. ಮಳೆಯ ಬಿರುಸು ನೋಡಿ ಮತ್ತೆ ನನಗೆ ಭಯ ಜಾಸ್ತಿ ಆಯ್ತು. ವಾಪಸ್ ಬರೋ ದಾರೀಲಿ ಮತ್ತೆ ಗುಡ್ಡ ಜರಿದು, ಮಣ್ಣು ಬಿದ್ದುಬಿಟ್ರೆ? ನಾನು ಊರು ಮುಟ್ಟೋಕೆ ಎಷ್ಟು ದಿನ ಆಗುತ್ತೋ ಅಂತ ಹೆದರಿಕೆ ಆಯ್ತು.

‘ಮಳೆ ಹೊಡೆತಕ್ಕೆ ಹೆಡ್‌ಲೈಟ್ ಸ್ವಿಚ್ ಸುಟ್ಟುಹೋಗಿತ್ತು. ರಾತ್ರಿ ಹೊತ್ತು ಗಾಡಿ ಓಡಿಸೋಕೆ ಆಗ್ತಾ ಇರ್ಲಿಲ್ಲ. ಅದಕ್ಕೆ ಸೋಮವಾರ ಬೆಳಿಗ್ಗೆ ಮಡಿಕೇರಿ ಬಿಟ್ಟು ಕುಶಾಲನಗರ ದಾಟಿಕೊಂಡೆ. ವಿಪರೀತ ಸುಸ್ತು ಆದಂಗೆ ಆಗಿತ್ತು, ಮಲಗಿಬಿಟ್ಟೆ. ಮಾರನೇ ದಿನ ಗಾಡಿ ತಗೊಂಡು ದೊಡ್ಡಬಳ್ಳಾಪುರಕ್ಕೆ ಬಂದೆ. ಇಲ್ಲಿ ನಮ್ಮ ಊರಿನವರಿಗೆ ಅಲ್ಲಿನ ಪರಿಸ್ಥಿತಿ ಹೇಳಿದೆ. ಒಂದಿಷ್ಟು ಸಹಾಯ ಮಾಡಬೇಕು ಅಂತ ಮಾತಾಡಿಕೊಳ್ತಿದ್ದಾರೆ. ಅಂಥ ಪರಿಸ್ಥಿತಿ ಯಾರಿಗೂ ಬರಬಾರದು...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.