ADVERTISEMENT

‘ಅಂಗವಿಕಲರಿಗೆ ₹ 6 ಲಕ್ಷದವರೆಗೆ ಉಚಿತ ಚಿಕಿತ್ಸೆ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 5:40 IST
Last Updated 8 ನವೆಂಬರ್ 2017, 5:40 IST

ಚಿಕ್ಕೋಡಿ: ‘ಐದು ವರ್ಷದೊಳಗಿನ ಕಿವುಡ ಮತ್ತು ಮೂಗ ಮಕ್ಕಳ ಶಸ್ತ್ರಕ್ರಿಯೆಗಾಗಿ ಕೇಂದ್ರ ಸರ್ಕಾರ ತಲಾ ₹ 6 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸುತ್ತಿದ್ದು, ಇದುವರೆಗೆ ಸುಮಾರು 900 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗೆ ಒಳಗಾದ ಮಕ್ಕಳು ಈಗ ಮಾತನಾಡುತ್ತಿದ್ದಾರೆ ಮತ್ತು ಮಾತನಾಡುವುದನ್ನು ಕೇಳಲೂ ಸಶಕ್ತರಾಗಿದ್ದಾರೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವ ಕೃಷ್ಣ ಪಾಲ್ ಗುರ್ಜರ್‌ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ₹ 77 ಲಕ್ಷ ಮೌಲ್ಯದಲ್ಲಿ 833 ಅಂಗವಿಕಲರಿಗೆ ಅಗತ್ಯ ಸಾಧನ ಸಲಕರಣೆ ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

‘ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಟಟ್ಟ ವಯೋವೃದ್ಧರಿಗೂ ಅಗತ್ಯ ಸೇವೆಗಳನ್ನು ಸರ್ಕಾರ ನೀಡುತ್ತಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 8 ಲಕ್ಷ ಅಂಗವಿಕಲರಿಗೆ ಅಗತ್ಯ ಸೇವೆಗಳನ್ನು ಒದಗಿಸಿದೆ’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ‘ ಅಂಗವಿಕಲರು ಸರ್ಕಾರದ ಸವಲತ್ತುಗಳನ್ನು ಪಡೆಯಲು ನಿಗದಿಪಡಿಸಿರುವ ಶೇ.40 ರಷ್ಟು ಅಂಗವೈಕಲ್ಯತೆಯ ಪ್ರಮಾಣವನ್ನು ಶೇ.10ಕ್ಕೆ ತಗ್ಗಿಸಬೇಕು ಮತ್ತು ವಾರ್ಷಿಕ ಆದಾಯದ ಮಿತಿಯನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಗಣೇಶ ಹುಕ್ಕೇರಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಆರತಿ ಮುಂಡೆ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಊರ್ಮಿಳಾ ಪಾಟೀಲ, ಉಪವಿಭಾಗಾಧಿಕಾರಿ ಗೀತಾ ಕೌಲಗಿ, ರವಿ ಮಿರ್ಜೆ, ನರೇಂದ್ರ ನೇರ್ಲೆಕರ, ಭರತೇಶ ಬನವಣೆ, ರಾಮಾ ಮಾನೆ ಇದ್ದರು. ಅಜಯ ಚೌಧರಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.