ADVERTISEMENT

ಅಂಧ ಸಾಧಕಿ ಅಶ್ವಿನಿ ಅಂಗಡಿಗೆ ಪ್ರೇರಣಾ ಪ್ರಶಸ್ತಿ

ಜೊಲ್ಲೆ ಉದ್ಯೋಗ ಸಮೂಹದಿಂದ ₹ 50 ಸಾವಿರ ಧನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:28 IST
Last Updated 28 ಡಿಸೆಂಬರ್ 2016, 5:28 IST

ಚಿಕ್ಕೋಡಿ:  ಬೆಂಗಳೂರಿನ ಬೆಳಕು ಅಕಾ ಡೆಮಿ ಅಂಧ ಮಕ್ಕಳ ವಸತಿ ಶಾಲೆಯ ರೂವಾರಿ, ಅಂಧರ ಬಾಳಿನ ಬೆಳಕು ಅಶ್ವಿನಿ ಅಂಗಡಿ ಅವರಿಗೆ ತಾಲ್ಲೂಕಿನ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯು ಇದೇ 28 ರಂದು 2016ನೇ ಸಾಲಿನ ‘ಪ್ರೇರಣಾ ಪ್ರಶಸ್ತಿ‘ಯನ್ನು ನೀಡಿ ಗೌರವಿಸಲಿದೆ.

ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಪ್ರೇರಣಾ ಶಕ್ತಿ ಜ್ಯೋತಿಪ್ರಸಾದ ಜೊಲ್ಲೆ ಅವರ 24ನೇ ಜನ್ಮ ದಿನಾಚರಣೆ ಪ್ರಯುಕ್ತ ನನದಿಯ ಶಿವಶಂಕರ ಜೊಲ್ಲೆ ಪಬ್ಲಿಕ್‌ ಶಾಲೆ ಆವರಣದಲ್ಲಿ ಹಮ್ಮಿ ಕೊಂಡಿರುವ ಪ್ರೇರಣಾ ಉತ್ಸವದ ಕೊನೆ ದಿನವಾದ ಬುಧವಾರ ಅಶ್ವಿನಿ ಅಂಗಡಿ ಅವರಿಗೆ ₹ 50 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸ್ಮರಣಿಕೆ ನೀಡಿ ಗೌರವಿಸಲಿದೆ.

ಮೂಲತಃ ಬಳ್ಳಾರಿ ಜಿಲ್ಲೆಯ ಚೆಲ್ಲಗುರ್ಕಿಯ ವೇದಾವತಿ ಮತ್ತು ಪ್ರಕಾಶ ದಂಪತಿ ಪುತ್ರಿ ಅಶ್ವಿನಿ ಹುಟ್ಟಿ ನಿಂದಲೂ ದೃಷ್ಟಿದೋಷ ಉಳ್ಳವರು.  ಬಿ.ಎ.ಪದವೀಧರೆಯಾಗಿ ಐಟಿ ಕಂಪೆನಿ ಯಲ್ಲಿ ಉದ್ಯೋಗ ದೊರೆತರೂ ತನ್ನಂತೆ ಇರುವ ಸಾವಿರಾರು ಜನರ ಅಂಗವಿಕಲ ರಿಗೆ ಸರ್ಕಾರದಿಂದ ನ್ಯಾಯಯುತವಾಗಿ ಸಿಗಬೇಕಾದ ಹಕ್ಕುಗಳನ್ನು ಪಡೆದು ಕೊಳ್ಳಲು ಹೋರಾಟ ನಡೆಸಿದರು.

ವಿಶ್ವಸಂಸ್ಥೆಯು ಜುಲೈ 12ರಂದು ಆಚರಿಸುವ ಮಲಾಲಾ ದಿನದಂದು ಅಶ್ವಿನಿ ಅವರಿಗೆ ಯುವ ಶೌರ್ಯ ಪ್ರಶಸ್ತಿ ಪುರಸ್ಕಾರ (ಯೂತ್ ಕರೇಜ್  ಅವಾರ್ಡ ಫಾರ್ ಎಜ್ಯುಕೇಶನ್‌) ನೀಡಿ ಗೌರವಿಸಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖುದ್ದು ಮಲಾಲಾ ಮಾತನಾಡಿ, ಅಶ್ವಿನಿ ಅಂಗಡಿ ಸಾಧನೆಯನ್ನು ಪ್ರಶಂಸಿಸುತ್ತಾ, ‘ಈ ದಿನ ಮಲಾಲಾ ದಿನವಾಗದೇ ಅಶ್ವಿನಿ ದಿನ ವಾಗಿದ್ದರೆ ಅರ್ಥಪೂರ್ಣವಾಗಿರುತ್ತಿತ್ತು’ ಎಂದು ಬಣ್ಣಿಸಿದ್ದರು.

ಇಂಗ್ಲೆಂಡ್‌ನ  ಲಿಯೋನಾರ್ಡೊ ಚೆಶೈರ್ ಅಂಗವಿಕಲ ಸಂಸ್ಥೆಯೊಂದಿಗೆ ಅಂಗವಿಕಲರ ಸೇವಾ ಕಾರ್ಯವನ್ನು ಪ್ರಾರಂಭಿಸಿದ ಅಶ್ವಿನಿ  ಅಂಧರಿಗಾಗಿಯೇ ವಿಶೇಷ ಸಾಪ್ಟವೇರ್‌ವೊಂದನ್ನು ಅಭಿ ವೃದ್ಧಿಪಡಿಸಿದ್ದಾರೆ.  ಲಿಯೋನಾರ್ಡೊ ಚೆಶೈರ್ ಡಿಸೇಬಿಲಿಟಿ ಯಂಗ್ ವಾಯ್ಸಸ್  ಏಪ್ರೀಲ್ 1, 2014 ರಿಂದ ಮಾರ್ಚ್‌ 3,1 2015ರವರೆಗೆ ಅಶ್ವಿನಿ ಅಂಗಡಿ ಯವರನ್ನು ವಿಶ್ವದ ಯುವ ರಾಯಭಾರಿ ಯನ್ನಾಗಿ ಆಯ್ಕೆ ಮಾಡಿತ್ತು. 

ದುಬೈನಲ್ಲಿ 2014ರಲ್ಲಿ ನಡೆದ ಅಂತರರಾಷ್ಟ್ರೀಯ ವಿದ್ಯಾ ಕೌಶಲ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿ ಯಾಗಿ ಭಾಗವಹಿಸಿದ್ದ ಅಶ್ವಿನಿ                ಅಂಗವಿಕಲ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಕುರಿತು ಬೆಳಕು ಚೆಲ್ಲಿ ಮಾತನಾಡಿದ್ದಾರೆ. ಬ್ರಿಟನ್‌ನ ಮಹಾರಾಣಿ ಕ್ವೀನ್‌ ಎಲಿಜಾಬೆತ್‌ ಅವರಿಂದ ‘ಕ್ವೀನ್ ಯಂಗ್‌ ಲೀಡರ್‌ ಅವಾರ್ಡ್‌’ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

ಹುಟ್ಟು ದೃಷ್ಟಿ ಕಳೆದುಕೊಂಡಿದ್ದರೂ ತನ್ನ ಪ್ರತಿಯೊಂದು ಹೆಜ್ಜೆಯಲ್ಲಿಯೂ  ವಿಶ್ವ ಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಅಶ್ವಿನಿ ಕನಸಿನ ಕಲ್ಪನೆಯ ಯೋಜನೆ ಅಂಗವಿಕಲ ಮಕ್ಕಳ ಉಚಿತ ವಸತಿ ಶಾಲೆ ಬಹುವರ್ಷದ ಕನಸಾಗಿದ್ದು, ಬೆಂಗಳೂರಿನಲ್ಲಿ ಬೆಳಕು ಅಕಾಡೆಮಿ ಆಶ್ರಯದಲ್ಲಿ ಪ್ರಾರಂಭವಾದ ಅಂಧ ಮಕ್ಕಳ ವಸತಿ ಶಾಲೆ  ಶಿಸ್ತುಬದ್ಧವಾಗಿ ಮುನ್ನಡೆಯುತ್ತಿದೆ.

ಅಂಧ ವಿದ್ಯಾರ್ಥಿಗಳು  ಬ್ರೈಲ್ ಲಿಪಿ ಮೂಲಕ ಅಕ್ಷರ ಜ್ಞಾನ ಕಲಿತು ಜೊತೆಗೆ ಅಂಗ್ಲ ಭಾಷೆಯಲ್ಲಿ ಮಾತನಾಡಲು, ಬರೆಯಲು ಕಲಿಯುತ್ತಿದ್ದಾರೆ. ಕಂಪ್ಯೂಟರ್‌ನಲ್ಲಿ ಟೈಪ್ ಮಾಡಲು ಶಕ್ತರಾಗಿದ್ದಾರೆ. ಜಗತ್ತಿನ ಯಾವುದೇ ಭಾಗಕ್ಕೆ ಹೋದರೂ ಸ್ವಸಾಮರ್ಥ್ಯದಿಂದ ವ್ಯವಹರಿಸಲು ಎಳೆಯ ವಯಸ್ಸಿನಿಂದಲೇ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.