ADVERTISEMENT

ಉದ್ಯಮಿಗಳಿಗೆ ಅನಗತ್ಯ ತೊಂದರೆ ಸಲ್ಲ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 6:19 IST
Last Updated 14 ಸೆಪ್ಟೆಂಬರ್ 2017, 6:19 IST

ಬೆಳಗಾವಿ: ಕೈಗಾರಿಕೋದ್ಯಮಗಳಿಗೆ ಅನಗತ್ಯ ತೊಂದರೆ ನೀಡಬಾರದು ಎಂದು ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ ಅಧಿಕಾರಿಗಳಿಗೆ ಸೂಚಿಸಿದರು. ಬುಧವಾರ ನಡೆದ ಜಿಲ್ಲಾಮಟ್ಟದ ಏಕಗವಾಕ್ಷಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಉದ್ಯಮಿಗಳಿಗೆ ಕಿರುಕುಳ, ತೊಂದರೆ ನೀಡಿದರೆ ಮುಂದಿನ ದಿನಗಳಲ್ಲಿ ನಗರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಯಾರೂ ಮುಂದೆ ಬರುವುದಿಲ್ಲ. ಇದರಿಂದ ಉದ್ಯೋಗ ಸೃಷ್ಟಿಸುವುದಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು. ಅಲೆದಾಡಿಸದೇ, ಸರ್ಕಾರದ ಸೌಲಭ್ಯವನ್ನು ಸಮರ್ಪಕವಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

‘ಉದ್ಯಮಿಗಳು ಸರ್ಕಾರದಿಂದ ಪಡೆದ ಜಾಗವನ್ನು ನಿಗದಿತ ಉದ್ದೇಶಕ್ಕೆ ಮಾತ್ರವೇ ಬಳಸಬೇಕು. ಅನ್ಯ ಉದ್ದೇಶಕ್ಕೆ ಬಳಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಉದ್ಯಮಿಗಳ ಒತ್ತಾಯ: ‘ಉದ್ಯಮ ಬಾಗ್‌ನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಕೂಡಲೇ ಅವುಗಳಿಗೆ ಪರಿಹಾರ ಒದಗಿಸಬೇಕು’ ಎಂದು ಕೋರಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

‘3ನೇ ರೈಲ್ವೆ ಗೇಟ್‌ನಿಂದ ಪೀರನವಾಡಿವರೆಗೆ ಲೋಕೋಪಯೋಗಿ ಇಲಾಖೆ ನಿರ್ಮಿಸಿದ ರಸ್ತೆ ಆರು ತಿಂಗಳಲ್ಲಿಯೇ ಹಾಳಾಗಿದೆ. ಹೊಂಡ, ಗುಂಡಿಗಳಿಂದಲೇ ತುಂಬಿ ಹೋಗಿದೆ. ಅಪಘಾತಗಳು ಹೆಚ್ಚಾಗುತ್ತಿವೆ. ಈ ಕಳಪೆ ಗುಣಮಟ್ಟದ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿದರು.

‘ಈ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ರಸ್ತೆಬದಿ ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ. ಅತಿಕ್ರಮಣ  ತೆರವುಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ  ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.

‘3ನೇ ರೈಲ್ವೆ ಗೇಟ್‌ನಿಂದ ಪೀರನವಾಡಿ ರಸ್ತೆಯ ನಡುವೆ ಮದ್ಯ ಮಾರಾಟದ ಅಂಗಡಿಗಳಿಗೆ ಅಬಕಾರಿ ಇಲಾಖೆ ಅನುಮತಿ ನೀಡಿದೆ. ಈ ಅಂಗಡಿಗಳಲ್ಲಿ ಮಾರಾಟಕ್ಕೆ ಮಾತ್ರ ಅನುಮತಿ ಇದ್ದರೂ, ಅಲ್ಲಿಯೇ ಸೇವಿಸುವುದಕ್ಕೂ ಅವಕಾಶ ಕೊಡುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಬೇಕು’ ಎಂದು ಕೋರಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ಎಂ. ಸಿದ್ದಣ್ಣ, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಉಮೇಶ ಶರ್ಮಾ, ಉಪಾಧ್ಯಕ್ಷ ರೋಹನ್ ಜುವಳಿ, ಗೌರವ ಕಾರ್ಯದರ್ಶಿ ಶ್ರೀಧರ ಉಪ್ಪಿನ್, ಸದಸ್ಯರಾದ ಅಶೋಕ ಕೋಳಿ, ವೆಂಕಟೇಶ ಸರ್ನೋಬತ್‌, ಬಸವರಾಜ ಜವಳಿ, ಸಿ.ಸಿ. ಹೊಂಡದಕಟ್ಟಿ, ಹೊನಗಾ ಕೈಗಾರಿಕೆಗಳ ಸಂಘದ ಅದ್ಯಕ್ಷ ಜಿ.ಬಿ. ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.