ADVERTISEMENT

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 12:54 IST
Last Updated 6 ಮಾರ್ಚ್ 2017, 12:54 IST
ಚನ್ನಮ್ಮನ ಕಿತ್ತೂರು: ಸತತ ಬರಗಾಲದ ಹೊಡೆತಕ್ಕೆ ಸಿಕ್ಕು ತನ್ನೊಡಲು ಬರಿದು ಮಾಡಿಕೊಂಡು ನಿಂತಿರುವ ತಾಲ್ಲೂಕಿನ ಚಿಕ್ಕನಂದಿಹಳ್ಳಿಯ ಕೆರೆ ಹೂಳೆತ್ತುವ ಕಾಮಗಾರಿಗೆ ಸಂಸದ ಅನಂತಕುಮಾರ ಹೆಗಡೆ ಶುಕ್ರವಾರ ಚಾಲನೆ ನೀಡಿದರು.
 
ಅನಂತರ ಮಾತನಾಡಿದ ಅವರು, ‘ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ₹1700ಕೋಟಿ ಬಿಡುಗಡೆ ಮಾಡಿದೆ’ ಎಂದು ಮಾಹಿತಿ ನೀಡಿದರು.
‘ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸದ್ಬಳಕೆ ಆಗಬೇಕಾಗಿದೆ. ಅನಗತ್ಯವಾಗಿ ಹರಿದು ಹೋಗುವುದನ್ನು ತಪ್ಪಿಸಬೇಕು’ ಎಂದ ಅವರು ‘ರಾಜ್ಯದ ಪ್ರತಿ ರೈತರಿಗೆ ಹನಿ ನೀರಾವರಿ ಸೌಲಭ್ಯ ಒದಗಿಸುವ ಯೋಜನೆಯು ಕೇಂದ್ರ ಸರ್ಕಾರ ಮಟ್ಟದಲ್ಲಿ ರೂಪಿತವಾಗುತ್ತಿದೆ. ಅದಕ್ಕೆ ಗ್ರಾಮ ಪಂಚಾಯ್ತಿ ವತಿಯಿಂದ ಕ್ರಿಯಾ ಯೋಜನೆಯನ್ನು ರೈತರು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು’ ಎಂದು ಸೂಚಿಸಿದರು.
 
‘ಬೆಳೆಸಾಲ ಪಡೆದ ರೈತರಿಗೆ ಸಹಕಾರಿ ಸಂಘಗಳು ಹಾಗೂ ಬ್ಯಾಂಕ್‌ಗಳು ಮರು ಪಾವತಿಗಾಗಿ ಕಿರುಕುಳ ನೀಡುತ್ತಿದ್ದರೆ ನನ್ನ ಗಮನಕ್ಕೆ ತರಬೇಕು’ ಎಂದು ಅವರು ಕೋರಿದರು.
 
ಮಾಜಿ ಶಾಸಕ ಸುರೇಶ ಮಾರಿಹಾಳ ಮಾತನಾಡಿ ‘ಭೀಕರ ಬರದ ಪ್ರಹಾರಕ್ಕೆ ಸಿಕ್ಕು ರೈತರು ಕಂಗೆಟ್ಟು ಹೋಗಿದ್ದಾರೆ. ಇಂಥ ದುಃಸ್ಥಿತಿ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ’ ಎಂದು ದೂರಿದರು.
 
‘ಸಿದ್ಧರಾಮಯ್ಯ ಸರ್ಕಾರಕ್ಕೆ ಕಾಳಜಿ ಇದ್ದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದೂ ಅವರು ಒತ್ತಾಯಿಸಿದರು.
ಹನುಮಂತ ಕೊಟಬಾಗಿ ಮಾತ ನಾಡಿ ‘ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ಕೆರೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದ್ದು, ಸ್ವಂತ ವೆಚ್ಚದಲ್ಲಿ ಇನ್ನೂ 10ಕೆರೆಗಳ ಹೂಳೆತ್ತುವುದಾಗಿ’ ಘೋಷಿಸಿದರು.
 
ಜಿಲ್ಲಾ ಪಂಚಾಯ್ತಿ ಸದಸ್ಯೆ ಬಸವ್ವ ಕೋಲಕಾರ, ಬ್ಲಾಕ್ ಬಿಜೆಪಿ ಅಧ್ಯಕ್ಷ ಚಿನ್ನಪ್ಪ ಮುತ್ನಾಳ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ, ನಿಜಲಿಂಗಯ್ಯ ಹಿರೇಮಠ, ಶಿವಾನಂದ ಹನುಮಸಾಗರ, ಯಲ್ಲಪ್ಪ ಒಕ್ಕುಂದ, ದಿನೇಶ ವಾಳಸಂಗ, ಉಮಾಕಾಂತ ಭಾರತಿ,  ಸುರೇಶ ದೇವರಮನಿ, ಸಂದೀಪ ದೇಶಪಾಂಡೆ, ಅಪ್ಪಣ್ಣ ಮುಷ್ಠಗಿ ಹಾಜರಿದ್ದರು.
 
* ಬರದ ದವಡೆಗೆ ಸಿಕ್ಕು ನಲಗುತ್ತಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು. ಅವರ ಸಂಪೂರ್ಣ ಸಾಲ ಮನ್ನಾ ಮಾಡಬೇಕು
ಸುರೇಶ ಮಾರಿಹಾಳ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.