ADVERTISEMENT

ಗೋಕಾಕ–ಫಾಲ್ಸ್‌ ಸಂಪರ್ಕ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ: ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:16 IST
Last Updated 8 ಜುಲೈ 2017, 7:16 IST

ಗೋಕಾಕ: ಕೇವಲ ಮೂರು ದಿನಗಳಲ್ಲಿ ಬೃಹದಾಕಾರದ ಬಂಡೆಗಳನ್ನು ಕೊರೆದು ಬಾದಾಮಿ–ಗೊಡಚಿನಮಲ್ಕಿ  ರಾಜ್ಯ ಹೆದ್ದಾರಿಯ ಭಾಗವಾಗಿರುವ ಗೋಕಾಕ ಮತ್ತು ಗೋಕಾಕ–ಫಾಲ್ಸ್‌ ನಡುವಿನ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೊಂಡಿದ್ದ ಲೋಕೋಪಯೋಗಿ ಇಲಾಖೆ ಒಂದು ವಾರದ ಅವಧಿ ಕಳೆದರೂ ನಿಧಾನ ಗತಿಯ ಕಾಮಗಾರಿಯಿಂದಾಗಿ ಈ ಮಾರ್ಗದಲ್ಲಿ ರಸ್ತೆ ಸಂಚಾರ ಇನ್ನೂವರೆಗೆ ಪುನರಾರಂಭಗೊಂಡಿಲ್ಲ.

ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯ್ತಿ ಸದಸ್ಯರಾದ ತುಕಾರಾಮ ಕಾಗಲ ಮತ್ತು ಮಡ್ಡೆಪ್ಪ ತೋಳಿನವರ ಅವರು, ಕಾಮಗಾರಿಯನ್ನು ಅತಿ ಶೀಘ್ರವೇ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕಾಮಗಾರಿ ವಿಳಂಬದಿಂದ ಗೋಕಾಕ– ಮಿಲ್ಸ್‌ ಕಾರ್ಮಿಕರು, ಗೋಕಾಕ–ಫಾಲ್ಸ್‌ನಲ್ಲಿರುವ ಫೋರ್ಬ್ಸ್‌ ಶಾಲೆ ವಿದ್ಯಾರ್ಥಿಗಳು, ನಿತ್ಯವೂ ಗೋಕಾಕ ರೋಡ್‌ ರೈಲ್ವೆ ನಿಲ್ದಾಣದ ಮೂಲಕ ಸಾಗುವ ರೈಲು ಪ್ರಯಾಣಿಕರು, ಅದೇ ಮಾರ್ಗವಾಗಿ ಮಾಣಿಕವಾಡಿ, ಮರಡೀಮಠ, ಕೊಣ್ಣೂರ, ಗೊಡಚಿನಮಲ್ಕಿ, ಪಾಶ್ಚಾರಪೂರ, ಸಾವಳಗಿ, ಘೋಡಗೇರಿ, ಹಿಡಕಲ್‌ ಡ್ಯಾಂ ಮೊದಲಾದ ಊರುಗಳಿಗೆ ತೆರಳುವ ಪ್ರಯಾಣಿಕರು ಸುತ್ತು ಬಳಸಿ ಸಾಗುವ ಅರಭಾವಿ, ಶಿಂಧಿಕುರಬೇಟ–ಕ್ರಾಸ್‌, ಧೂಪದಾಳ ಮಾರ್ಗವಾಗಿ ಪ್ರಯಾಣಿಸಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ.

ADVERTISEMENT

ಇದು ಸಾರ್ವಜನಿಕರು ಎದುರಿಸುತ್ತಿರುವ ತೊಳಲಾಟವಾದರೆ, ಇನ್ನು ಕಾಮಗಾರಿ ಗುತ್ತಿಗೆದಾರರ ಸಮಸ್ಯೆ ವಿಭಿನ್ನ. ಕಾಮಗಾರಿ ಪೂರೈಸಲು ಬಳಸಿರುವ ಯಂತ್ರೋಪಕರಣಗಳ ವೈಫಲ್ಯತೆ ಮತ್ತು ಅಪಾಯದ ಅಂಚಿನಲ್ಲಿದ್ದುಕೊಂಡು ಕೆಲಸ ನಿರ್ವಹಿಸಬಲ್ಲ ಅನುಭವಿ ಕಾರ್ಮಿಕರ ಕೊರತೆ.

ಈ ಉಭಯ ಬಗೆಯ ಅಡೆ–ತಡೆಗಳನ್ನು ಮೀರಿ ಎಲ್ಲ ರೀತಿಯ ಅನಾನುಕೂಲತೆಗಳ ನಡುವೆ ಕಾಮಗಾರಿ ಪೂರ್ಣಗೊಳ್ಳುವುದನ್ನೇ ಎದುರುನೋಡುತ್ತಿರುವ ಪ್ರವಾಸಿಗರು ಕೇವಲ 6 ಕಿ.ಮೀ. ಅಂತದಲ್ಲಿರುವ ಗೋಕಾಕ–ಜಲಪಾತ ವೀಕ್ಷಣೆಗೆ 18 ಕಿ.ಮೀ. ದೂರವನ್ನು ಸುತ್ತು ಬಳಸುವ ಮಾರ್ಗದಲ್ಲಿ ಸಾಗಿ ವೀಕ್ಷಿಸುವ  ಅನಿವಾರ್ಯತೆ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.