ADVERTISEMENT

ಚುರುಕುಗೊಂಡ ಕೃಷಿ ಚಟುವಟಿಕೆ

ಸವದತ್ತಿ ತಾಲ್ಲೂಕಿನಲ್ಲಿ ಒಂದು ತಿಂಗಳಲ್ಲಿ ಮೂರು ಬಾರಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 9:09 IST
Last Updated 26 ಮೇ 2018, 9:09 IST
ಸವದತ್ತಿಯ ಹೊಸವಾಳ ಭಾಗದ ರೈತ ಸಹದೇವ ಸಂಗಪ್ಪನ್ನವರ ಶುಕ್ರವಾರ ಉಳ್ಳಾಗಡ್ಡಿ ಬಿತ್ತನೆ ಮಾಡಲು ಪ್ರಾರಂಭಿಸಿದರು
ಸವದತ್ತಿಯ ಹೊಸವಾಳ ಭಾಗದ ರೈತ ಸಹದೇವ ಸಂಗಪ್ಪನ್ನವರ ಶುಕ್ರವಾರ ಉಳ್ಳಾಗಡ್ಡಿ ಬಿತ್ತನೆ ಮಾಡಲು ಪ್ರಾರಂಭಿಸಿದರು   

ಸವದತ್ತಿ: ಒಂದು ತಿಂಗಳಲ್ಲಿ ಮೂರು ಸಲ ಉತ್ತಮವಾದ ಮಳೆ ಆಗಿದ್ದು, ತಾಲ್ಲೂಕಿನ ಬಹುತೇಕ ಕೃಷಿ ಭೂಮಿ ಹಸಿಯಾಗಿದೆ. ರೈತ ಬಾಂಧವರು ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಕೆಲವರು ಬಿತ್ತನೆಗೆ ಮುಂದಾಗಿದ್ದಾರೆ.

ಕಳೆದ ಆರು ವರ್ಷಗಳಿಂದ ಮುನಿಸಿಕೊಂಡ ಮಳೆರಾಯ, ಈ ವರ್ಷ ಆಗಾಗ ಆಗಮಿಸುವುದರ ಜೊತೆಗೆ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಮೇತ ಆರ್ಭಟಿಸಿದ್ದು, ಹೊಲಗಳಲ್ಲಿನ ಗಿಡಗಳು ಧರೆಗುರುಳಿವೆ. ಒಡ್ಡುಗಳು ಒಡೆದಿವೆ. ರೈತರು ಮಳೆಯಿಂದ ಸಂತಸಗೊಂಡಿದ್ದಾರೆ.

ಬಿತ್ತನೆ ಆರಂಭಿಸಿರುವ ಹೊಸವಾಳ ರೈತ ಸಹದೇವ ಸಂಗಪ್ಪನವರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕಳೆದ ಬಾರಿ ಉಳ್ಳಾಗಡ್ಡಿಯಿಂದ ಲಾಭ ಬರಲಿಲ್ಲ. ಈ ಬಾರಿ ಉತ್ತಮ ಮಳೆ ಆಗುವ ಲಕ್ಷಣಗಳಿದ್ದು, ಉಳ್ಳಾಗಡ್ಡಿ ಬಿತ್ತನೆ ಮಾಡುತ್ತಿದ್ದೇನೆ. ಉತ್ತಮ ಫಸಲು ಬರುವುದರ ಜೊತೆಗೆ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತದೆ’ ಎಂದರು.

ADVERTISEMENT

‘ಮಳೆಗಾಲ ಆರಂಭವಾಗಿದೆ. ಸರ್ಕಾರ ರೈತರಿಗೆ ಕೊಡಬೇಕಾದ ಸವಲತ್ತುಗಳನ್ನು ಆದಷ್ಟು ಬೇಗ ಕೊಡಬೇಕು. ಜೊತೆಗೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಔಷಧಗಳನ್ನು ಸಕಾಲಕ್ಕೆ ದೊರಕುವಂತೆ ಮಾಡುವುದು ಅವಶ್ಯ’ ಎಂದು ಗೊರವಕೊಳ್ಳದ ರೈತ ಕಿರಣ ಇನಾಮದಾರ ಮನವಿ ಮಾಡಿದರು.

ಸೋಮವಾರದಿಂದ ಬಿತ್ತನೆ ಬೀಜ ವಿತರಣೆ: ಸಹಾಯಕ ಕೃಷಿ ನಿರ್ದೇಶಕ ಎಲ್‌.ಎಸ್‌. ಹೊಸಮನಿ ಅವರನ್ನು ದೂರವಾಣಿ ಮೂಲಕ ಮಾತನಾಡಿಸಿ, ‘ಸದ್ಯ ಬಿತ್ತನೆಯ ಬೀಜಗಳು ಅಗತ್ಯ ಇವೆ. ವಿತರಣೆಗೆ ಸವದತ್ತಿಯ
ರೈತ ಸಂಪರ್ಕ ಕೇಂದ್ರದಲ್ಲಿ ಹಾಗೂ ಇತರೆ ಎರಡು ಕಡೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದ ಹೋಬಳಿ ಮಟ್ಟದಲ್ಲಿ ಬೀಜ ವಿತರಣೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಕಳೆದ ಐದು ವರ್ಷಗಳಿಂದ ಬರಗಾಲದ ಕಹಿ ಅನುಭವಿಸಿದ ರೈತರಿಗೆ ಈ ವರ್ಷ ಮಳೆಯಾಗುತ್ತಿದ್ದು ಕೊಡಲೆ ಬಿತ್ತನೆ ಬೀಜ, ಅಗತ್ಯವಿರುವ ಗೊಬ್ಬರ, ಔಷಧಿ ಕೃಷಿ ಇಲಾಖೆ ವಿತರಿಸಬೇಕು ಎಂದು ಇಲ್ಲಿನ ರೈತರ ಒತ್ತಾಯವಾಗಿದೆ.

ಸದಾಶಿವ ಮಿರಜಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.