ADVERTISEMENT

‘ಜಿಲ್ಲೆಯಲ್ಲಿ ಎ.ಟಿ.ಎಂ.ಯಂತ್ರ ಸುರಕ್ಷಿತ’

​ಪ್ರಜಾವಾಣಿ ವಾರ್ತೆ
Published 18 ಮೇ 2017, 7:07 IST
Last Updated 18 ಮೇ 2017, 7:07 IST

ಬೆಳಗಾವಿ: ಕುತಂತ್ರಾಂಶ (ವೈರಸ್‌) ದಾಳಿ ಆಗಬಾರದು ಎನ್ನುವ ಕಾರಣದಿಂದ ಜಿಲ್ಲೆಯ ಎಲ್ಲ 558 ಎಟಿಎಂ ಮೆಷಿನ್‌ ಗಳನ್ನು ಅಪ್‌ಡೇಟ್‌ ಮಾಡಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಇದುವರೆಗೆ ಯಾವುದೇ ಎಟಿಎಂ ಮೇಲೆ ವೈರಸ್‌ ದಾಳಿಯಾಗಿಲ್ಲ ಎಂದು ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಬಿ. ನಾಗರಾಜ ಹೇಳಿದರು.

ಕಳೆದ ಎರಡು ದಿನಗಳಿಂದ ಜಿಲ್ಲೆಯ ಬಹುತೇಕ ಎಟಿಎಂಗಳು ಸ್ಥಗಿತ ಗೊಂಡಿವೆ. ಇದರಿಂದ ಆತಂಕಗೊಂಡ ಸಾರ್ವಜನಿಕರು, ಬ್ಯಾಂಕ್‌ ಸಿಬ್ಬಂದಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಹಣದ ಸುರಕ್ಷತೆಯ ಬಗ್ಗೆಯೂ ಪ್ರಶ್ನಿಸುತ್ತಿದ್ದಾರೆ.

ಇವೆಲ್ಲ ಸಂದೇಹಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ವನ್ನಾಕ್ರೈ ಎನ್ನುವ ವೈರಸ್‌ ಕೆಲವು ಎಟಿಎಂ ಹಾಗೂ ಕಂಪ್ಯೂಟರ್‌ಗಳ ಮೇಲೆ ದಾಳಿ ಮಾಡಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಮುನ್ನೆಚ್ಚರಿಕೆಯಾಗಿ ಈಗ ಎಲ್ಲೆಡೆ ಕಂಪ್ಯೂಟರ್‌ ಹಾಗೂ ಎಟಿಎಂ ವ್ಯವಸ್ಥೆ ಯನ್ನು ಅಪ್‌ಡೇಟ್‌ ಮಾಡಲಾಗುತ್ತಿದೆ. ಈ ಕಾರಣದಿಂದ ಕೆಲವು ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಎಲ್ಲ ಎಟಿಎಂಗಳು ಬಂದ್‌ ಆಗಲಿವೆ ಎಂಬ ವದಂತಿಗಳನ್ನು ಯಾರೂ ನಂಬ ಬಾರದು. ಗ್ರಾಹಕರಿಗೆ ಸುಲಭವಾಗಿ ಹಾಗೂ ದಿನದ 24 ಗಂಟೆಯೂ ನಗದು ಸಿಗುವಂತೆ ಮಾಡಲು ಎಟಿಎಂ ಕೇಂದ್ರ ಗಳನ್ನು ತೆರೆಯಲಾಗಿದೆ. ಎಟಿಎಂ ಸೇವೆ ಎಂದಿನಂತೆ ಮುಂದುವರಿಯಲಿದೆ’ ಎಂದು ಹೇಳಿದರು.

ಜನರ ಪರದಾಟ: ‘ಕಳೆದ ವರ್ಷದ ನವೆಂಬರ್‌ 8ರ ನಂತರ ಕೇಂದ್ರ ಸರ್ಕಾರವು ₹500 ಹಾಗೂ ₹1,000 ಮುಖಬೆಲೆಯ ನೋಟುಗಳ ಚಲಾವಣೆ ಬಂದ್‌ ಮಾಡಿದ ನಂತರ ನಗದು ವ್ಯವಹಾರ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ವಿವಿಧ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ನಗದು ರಹಿತ ವಹಿವಾಟಿಗೆ ಒತ್ತು ನೀಡುತ್ತಿವೆ. ಹೀಗಾಗಿ ಎಟಿಎಂ ಗಳಲ್ಲಿ ಕಡಿಮೆ ನಗದು ಹಾಕಲಾಗುತ್ತಿದೆ. ನಾವೆಲ್ಲ ಹಣ ಸಿಗದೇ ಪರದಾಡು ತ್ತಿದ್ದೇವೆ’ ಎಂದು ಮಾಳಮಾರುತಿ ನಿವಾಸಿ ಮಹಾಂತೇಶ ಪಾಟೀಲ ಹೇಳಿದರು.

**

ಜಿಲ್ಲೆಯ ಎಟಿಎಂ ಸಾಫ್ಟವೇರ್‌ ಇಂದಿನವರೆಗೆ ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಎಲ್ಲಿಯೂ ವೈರಸ್‌ ದಾಳಿಯಾಗಿಲ್ಲ
-ಬಿ. ನಾಗರಾಜ್,
ಜಿಲ್ಲಾ ಲೀಡ್‌ ಬ್ಯಾಂಕ್‌ ಮ್ಯಾನೇಜರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.