ADVERTISEMENT

‘ಬರ ಪರಿಸ್ಥಿತಿ ಸಮರ್ಪಕ ನಿರ್ವಹಿಸಿ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 6:10 IST
Last Updated 19 ಏಪ್ರಿಲ್ 2017, 6:10 IST

ಬೆಳಗಾವಿ: ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಕುಡಿಯುವ ನೀರು ಪೂರೈಕೆ, ಜನರಿಗೆ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಜತೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ಅವರು, ‘ಎಷ್ಟೇ ಜನ ಉದ್ಯೋಗ ಕೇಳಿದರೂ ಉದ್ಯೋಗ ಖಾತ್ರಿ ಯೋಜನೆಯಡಿ ಒದಗಿಸಬೇಕು’ ಎಂದು ತಿಳಿಸಿದರು.

‘ಸದ್ಯಕ್ಕೆ ಜಿಲ್ಲೆಯ 59 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. 24 ಮೇವು ಬ್ಯಾಂಕ್‌ ಮತ್ತು 5 ಗೋಶಾಲೆಗಳನ್ನು ಆರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ತಿಳಿಸಿದರು.‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕೂಲಿಕಾರ್ಮಿಕರ ಮಕ್ಕಳಿಗೆ ನೆರಳು, ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಬೇಕು’ ಎಂದು ಮುಖ್ಯಮಂತ್ರಿ ತಾಕೀತು ಮಾಡಿದರು.

2 ದಿನಗಳಲ್ಲಿ ಆರಂಭಿಸಿ: ‘ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ಕುಡಿಯುವ ನೀರು ಹಾಗೂ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಕಲ್ಪಿಸ ಬೇಕು. ಮುಖ್ಯಮಂತ್ರಿ ಅವರ ಆಶಯದಂತೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ್ಮಿಕರ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು 2 ದಿನಗಳಲ್ಲಿ ಆರಂಭಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ನಿರ್ದೇಶನ ನೀಡಿದರು.

ADVERTISEMENT

ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದ ಡಿ.ಸಿ ಜಯರಾಮ್, ಜಿಲ್ಲಾಡಳಿತದ ಬಳಿ ₹ 11 ಕೋಟಿ ಲಭ್ಯವಿದೆ. ನೀರು ಪೂರೈಕೆ, ಮೇವು ಖರೀದಿ ಹಾಗೂ ಇತರೆ ತುರ್ತು ಕೆಲಸಗಳಿಗೆ ಹಣದ ಕೊರತೆ ಇಲ್ಲ’ ಎಂದು ಹೇಳಿದರು.‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಅಂದಾಜು ಒಂದು ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ. ಈ ತಿಂಗಳು, ಮೇ ಹಾಗೂ ಜೂನ್‌ನಲ್ಲಿ ಒಟ್ಟು 19 ಲಕ್ಷ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ಕಲ್ಪಿಸಲಾಗುವುದು. ಪ್ರತಿದಿನ 15ರಿಂದ 20 ಸಾವಿರ ಮಾನವದಿನಗಳನ್ನು ಸೃಜಿಸುವ ಮೂಲಕ ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್‌. ರಾಮಚಂದ್ರನ್‌ ತಿಳಿಸಿದರು.

22 ಕಾಮಗಾರಿ: ‘ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹೆಚ್ಚು ಮಾನವ ದಿನಗಳನ್ನು ಸೃಜಿಸುವ ಗುರಿ ಇಟ್ಟುಕೊಳ್ಳಬೇಕು’ ಎಂದು ಸಿಎಂ ಸೂಚಿಸಿದರು.
‘ಕೆರೆ ಸಂಜೀವಿನಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 19 ಕಾಮಗಾರಿಗಳ ಗುರಿ ನೀಡಲಾಗಿದೆ. ಕಳೆದ ಸಾಲಿನಲ್ಲಿ ಬಾಕಿ ಇರುವ ಮೂರು ಕಾಮಗಾರಿ ಸೇರಿ ಒಟ್ಟು 22 ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗಿದೆ’ ಎಂದು ತಿಳಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೃಷಿ ಸಚಿವ ಕೃಷ್ಣ ಭೈರೇಗೌಡ, ಪಶುಸಂಗೋಪನೆ ಇಲಾಖೆ ಸಚಿವ ಎ. ಮಂಜು, ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಬೆಂಗಳೂರಿನಲ್ಲಿ ಭಾಗವಹಿಸಿದ್ದರು.ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಜೆ. ಪಾಟೀಲ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಎ.ಪಿ. ಚಂದ್ರಶೇಖರ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಾಸುದೇವ ರಾಯ್ಕರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.