ADVERTISEMENT

ಬಸ್‌ ನಿಲ್ದಾಣ 3 ತಿಂಗಳಲ್ಲಿ ಪೂರ್ಣ

₹ 3.95 ಕೋಟಿ ವೆಚ್ಚದಲ್ಲಿ ಅಥಣಿ ಪಟ್ಟಣದಲ್ಲಿ ನಿರ್ಮಾಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 6:05 IST
Last Updated 23 ಏಪ್ರಿಲ್ 2018, 6:05 IST

ಅಥಣಿ: ಪಟ್ಟಣದಲ್ಲಿ ನಿರ್ಮಿಸಲಾಗುತ್ತಿರುವ ಸಾರಿಗೆ ಬಸ್‌ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದೆ.

ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲ್ಲೂಕಾಗಿರುವ ಅಥಣಿಯಲ್ಲಿ ನಿತ್ಯ ನೂರಾರು ಬಸ್‌ಗಳು ಓಡಾಡುತ್ತವೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಸೇತುವೆಯಾದ ಈ ನಿಲ್ದಾಣಕ್ಕೆ ನಿತ್ಯ ನೂರಾರು ಮಂದಿ ಬರುತ್ತಾರೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ, ಮುಂದಿನ ಹಲವು ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ನಿಲ್ದಾಣವನ್ನು ದೊಡ್ಡದಾಗಿ ನಿರ್ಮಿಸಲಾಗುತ್ತಿದೆ. ಈಗಿರುವ ಬಸ್‌ ನಿಲ್ದಾಣದಲ್ಲಿ ಸೌಲಭ್ಯಗಳ ಕೊರತೆ ಇರುವುದನ್ನು ಹೋಗಲಾಡಿಸಲು ಈ ಕ್ರಮ ವಹಿಸಲಾಗಿದೆ.

ಹೊಸ ಬಸ್‌ ನಿಲ್ದಾಣ ನಿರ್ಮಿಸಬೇಕು ಎನ್ನುವುದು ಈ ಭಾಗದ ಜನರ ಬಹುವರ್ಷಗಳ ಬೇಡಿಕೆಯಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ, ಅನುದಾನ ಒದಗಿಸಿದೆ. ಹೋದ ವರ್ಷ ಸೆಪ್ಟೆಂಬರ್ ಮೊದಲ ವಾರ ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ. ಬೆಂಗಳೂರಿನ ಮಾರುತಿ ಕಂಪನಿ ಗುತ್ತಿಗೆ ಪಡೆದಿದೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಎಲ್ಲವೂ ನಿರೀಕ್ಷೆಯಂತೆಯೇ ನಡೆದಲ್ಲಿ, ಗಡುವಿಗಿಂತಲೂ ಮುಂಚಿತವಾಗಿಯೇ ನಿಲ್ದಾಣ ಸಿದ್ಧಗೊಳ್ಳುವ ಸಾಧ್ಯತೆ ಇದೆ.

ADVERTISEMENT

ಏನೇನು ನಿರ್ಮಾಣ?: 15000 ಚ.ಅಡಿ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ₹ 3.95 ಕೋಟಿ ವೆಚ್ಚ ಮಾಡಲಾಗುತ್ತಿದೆ. ಏಕಕಾಲಕ್ಕೆ 20 ಬಸ್‌ಗಳನ್ನು ನಿಲುಗಡೆ ಮಾಡುವುದಕ್ಕೆ ಅಂಕಣಗಳ ವ್ಯವಸ್ಥೆ ಮಾಡಲಾಗುವುದು. ನಾಲ್ಕು ಮಳಿಗೆಗಳು, ಹೋಟೆಲ್‌ಗೆ ಜಾಗ, ವ್ಯವಸ್ಥಾಪಕ ಕೊಠಡಿ ಮತ್ತು ನಿಯಂತ್ರಣ ಕೊಠಡಿಯನ್ನು ಹೊಂದಿರಲಿದೆ. ಪ್ರಯಾಣಿಕರಿಗೆ ಅಗತ್ಯವಾಗುವ ಎಲ್ಲ ಮೂಲಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಥಣಿ ಮಾರ್ಗವಾಗಿ ಜಮಖಂಡಿ, ಬಾಗಲಕೋಟೆ, ವಿಜಯಪುರ, ಮೀರಜ್‌, ಚಿಕ್ಕೋಡಿ, ಬೆಳಗಾವಿ, ಹುಬ್ಬಳ್ಳಿ ಕಡೆಗಳಿಗೆ ನಿತ್ಯ 600ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ.

‘ಪಟ್ಟಣದಲ್ಲಿ ಹೊಸ ಬಸ್‌ ನಿಲ್ದಾಣದ ನಿರ್ಮಾಣ ಅತ್ಯಗತ್ಯವಾಗಿತ್ತು. ಹಲವು ವರ್ಷಗಳಿಂದಲೂ ಇತ್ತ ಯಾರೂ ಗಮನಹರಿಸಿರಲಿಲ್ಲ. ಈಚೆಗೆ ಈ ಕೆಲಸ ಆರಂಭವಾಗಿದೆ. ಬೇಗ ಕಾಮಗಾರಿ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ನಿವಾಸಿ ನಿಶಾಂತ ದಳವಾಯಿ ಹೇಳಿದರು.

‌‘ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಪ್ರಯಾಣಿಕರಿಗೆ ಅಗತ್ಯವಾದ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಡಿಪೊ ವ್ಯವಸ್ಥಾಪಕ ಎ. ಕಿರಣ್‌ ಪ್ರತಿಕ್ರಿಯಿಸಿದರು.

ಪರಶುರಾಮ ನಂದೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.