ADVERTISEMENT

ಬೆಳೆ ನಷ್ಟ ನಮೂದಿಗೆ ಹೊಸ ಸಾಫ್ಟ್‌ವೇರ್‌

ರಾಜ್ಯದ ಭೂಮಿ ನಿರ್ವಹಣಾ ಘಟಕವು ಹೊಸ ಸಾಫ್ಟ್‌ವೇರ್‌ ‘ಪರಿಹಾರ’

ಶ್ರೀಕಾಂತ ಕಲ್ಲಮ್ಮನವರ
Published 12 ಜನವರಿ 2017, 8:29 IST
Last Updated 12 ಜನವರಿ 2017, 8:29 IST
ಬೆಳಗಾವಿ: ಬರ ಅಥವಾ ಪ್ರವಾಹದಿಂದ ಉಂಟಾಗುವ ಬೆಳೆ ನಷ್ಟ ಕುರಿತಾದ ಮಾಹಿತಿಯನ್ನು ಅಪ್‌ಲೋಡ್‌ ಮಾಡಲು ರಾಜ್ಯದ ಭೂಮಿ ನಿರ್ವಹಣಾ ಘಟಕವು ಹೊಸ ಸಾಫ್ಟ್‌ವೇರ್‌ ‘ಪರಿಹಾರ’ ಅನ್ನು ಅಭಿವೃದ್ಧಿಪಡಿಸಿದೆ. ಬೆಳೆ ನಷ್ಟದ ಮಾಹಿತಿ ಇನ್ನು ಮುಂದೆ ನಿಖರವಾಗಿ ದೊರೆಯಲಿದೆ. 
 
 ಇದಕ್ಕಿಂತ ಮುಂಚೆ ನಷ್ಟದ ವಿವರವನ್ನು ಕಂದಾಯ ಅಧಿಕಾರಿಗಳು ಕೈಬರಹದಲ್ಲಿ ಸರ್ಕಾರಕ್ಕೆ ಕಳುಹಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಹಲವು ತಪ್ಪು ಮಾಹಿತಿ ರವಾನೆಯಾಗುತ್ತಿತ್ತು. ವಿಶೇಷವಾಗಿ ರೈತರ ಹೆಸರು, ಹೊಲದ ವಿವರ, ನಷ್ಟಕ್ಕೀಡಾದ ಪ್ರದೇಶದ ಮಾಹಿತಿ ಹಾಗೂ ರೈತರ ಬ್ಯಾಂಕ್‌ ಖಾತೆ ಸಂಖ್ಯೆ, ಪರಿಹಾರದ ಚೆಕ್‌ ಸಂಖ್ಯೆಯಲ್ಲಿ  ಏರುಪೇರಾಗುತ್ತಿತ್ತು. ಇದರಿಂದಾಗಿ ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರದ ಮೊತ್ತ ದೊರಕುತ್ತಿರಲಿಲ್ಲ. ಇವೆಲ್ಲ ದೋಷಗಳನ್ನು ಸರಿಪಡಿಸಲು ಹೊಸ ಸಾಫ್ಟ್‌ವೇರ್‌ ಸಹಾಯಕ್ಕೆ ಬರಲಿದೆ. 
 
ಡಾಟಾ ಬೇಸ್‌ ಸೃಷ್ಟಿ: ಪ್ರಕೃತಿ ವಿಕೋಪದಡಿ ರೈತರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ರೈತರ ಡಾಟಾ ಬೇಸ್‌ ಸೃಷ್ಟಿಸುವಂತೆ ಕೇಂದ್ರ ಸರ್ಕಾರವು ನವೆಂಬರ್‌ ತಿಂಗಳಿನಲ್ಲಿ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಇದರನ್ವಯ ರೈತರ ಡಾಟಾ ಬೇಸ್‌ ಸಿದ್ಧಪಡಿಸಿಕೊಳ್ಳಲು ‘ಪರಿಹಾರ’ ಸಾಫ್ಟ್‌ವೇರ್‌ ತಯಾರಿಸಲಾಗಿದೆ. 
 
‘ಭೂಮಿ’ ಜೊತೆ ಸಂಪರ್ಕ: ಕಂದಾಯ ದಾಖಲೆಗಳನ್ನು ನಿರ್ವಹಿಸುತ್ತಿರುವ ‘ಭೂಮಿ’ ಸಾಫ್ಟ್‌ವೇರ್‌ ಜೊತೆ ಇದನ್ನು ಸಂಪರ್ಕಿಸಲಾಗಿದೆ. ರೈತರ ಹೆಸರು, ಜಮೀನಿನ ವಿವರ, ಬೆಳೆಯ ವಿವರ, ಪ್ರದೇಶದ ವಿವರಗಳನ್ನು ಭೂಮಿ ಸಾಫ್ಟ್‌ವೇರ್‌ನಿಂದ ಪಡೆಯಲಾಗುತ್ತದೆ. 
 
ಬೆಳೆ ನಷ್ಟ ಸಮೀಕ್ಷೆ ನಡೆಸುವ ಗ್ರಾಮ ಲೆಕ್ಕಾಧಿಕಾರಿಯು ಕೇವಲ ನಷ್ಟದ ವಿವರವನ್ನು ಮಾತ್ರ ಈ ಸಾಫ್ಟ್‌ವೇರ್‌ನಲ್ಲಿ ಅಳವಡಿಸುತ್ತಾರೆ. ಇನ್ನುಳಿದ ಎಲ್ಲ ವಿವರಗಳು ಭೂಮಿ ಸಾಫ್ಟ್‌ವೇರ್‌ನಲ್ಲಿ ಮೊದಲೇ ಅಪ್‌ಲೋಡ್‌ ಆಗಿರುತ್ತದೆ. ಇದರಿಂದಾಗಿ ಬೆಳೆ ಬದಲಾಯಿಸುವ ಅಥವಾ ಹೆಚ್ಚಿನ ಪ್ರದೇಶ ನಮೂದು ಮಾಡುವುದು ತಪ್ಪಲಿದೆ. 
ತ್ವರಿತ ವಿತರಣೆ: ರೈತರ ಬ್ಯಾಂಕ್‌ ಖಾತೆಗಳು ಆಧಾರ್‌ ಜೊತೆ ಲಿಂಕ್‌ ಆಗಿರುವುದನ್ನು ಸಾಫ್ಟ್‌ವೇರ್‌ನಲ್ಲಿ ನಮೂದಿಸಲಾಗಿರುತ್ತದೆ. ಪರಿಹಾರದ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ ತಕ್ಷಣ ಹಣವು ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ತಲುಪಲಿದೆ. ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆ ಮಾಡುವುದು ಹಾಗೂ ಅಲ್ಲಿಂದ ರೈತರಿಗೆ ಚೆಕ್‌ ವಿತರಣೆ ಮಾಡುವುದು ಎಲ್ಲವೂ ತಪ್ಪಲಿದೆ.   
 
ಬ್ಯಾಂಕ್‌ ಖಾತೆಗೆ ಹಣ ವರ್ಗಾ ವಣೆಯಾದ ತಕ್ಷಣ ರೈತರ ಮೊಬೈಲ್‌ ಸಂದೇಶ ರವಾನೆಯಾಗುತ್ತದೆ. 
 
ತಪ್ಪಲಿದೆ ಪ್ರತಿಸಲ ನಮೂದಿಸುವುದು: 
ರೈತರ ಡಾಟಾಬೇಸ್‌ ಸೃಷ್ಟಿಸುವು ದರಿಂದ ಪ್ರತಿವರ್ಷ ಹಾಗೂ ಪ್ರತಿ ಅವಧಿಯಲ್ಲಿ ರೈತರ ಜಮೀನಿನ ವಿವರ ಪಡೆಯುವುದು ತಪ್ಪಲಿದೆ. ಕೇವಲ ಆ ವರ್ಷದಲ್ಲಿ ಬೆಳೆದ ಬೆಳೆಯ ಹೆಸರು ಹಾಗೂ ಎಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎನ್ನುವುದನ್ನು ಸೇರ್ಪಡಿಸಿದರೆ ಸಾಕು. ಇದರಿಂದ ಅಧಿಕಾರಿಗಳ ಶ್ರಮವೂ ಉಳಿತಾಯವಾಗುತ್ತದೆ. 
 
***
15 ದಿನಗಳಿಂದ ಅಪ್‌ಲೋಡ್
ಹೊಸದಾಗಿ ಸಿದ್ಧಪಡಿಸ ಲಾಗಿರುವ ‘ಪರಿಹಾರ’ ಸಾಫ್ಟ್‌ ವೇರ್‌ದಲ್ಲಿಯೇ ಬೆಳೆ ನಷ್ಟದ ವಿವರವನ್ನು ಅಪ್‌ಲೋಡ್‌ ಮಾಡುತ್ತಿದ್ದೇವೆ. ಕಳೆದ 15 ದಿನಗಳಿಂದ ಅಪ್‌ಲೋಡ್‌ ಮಾಡುತ್ತಿದ್ದೇವೆ. ಬೆಳೆ ನಷ್ಟದ ನಿಖರ ಮಾಹಿತಿ ಸಂಗ್ರಹಿಸಲು ಹಾಗೂ ರೈತರಿಗೆ ತ್ವರಿತವಾಗಿ ಪರಿಹಾರದ ಹಣ ತಲುಪಿಸಲು ಸಾಫ್ಟ್‌ವೇರ್‌ ಸಹಕಾರಿಯಾಗಲಿದೆ’ ಎಂದು ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.