ADVERTISEMENT

ಮಹಿಳಾ ಸೈನಿಕರಿಗೆ ಪುರಸ್ಕಾರ ನೀಡಿ

ಬೆಳವಡಿ ಮಲ್ಲಮ್ಮ ಉತ್ಸವ ಸಮಾರೋಪದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 7:19 IST
Last Updated 3 ಮಾರ್ಚ್ 2017, 7:19 IST

ಬೈಲಹೊಂಗಲ: ‘ದೇಶದ ರಕ್ಷಣೆಗೆ ತಮ್ಮ ಪ್ರಾಣ ಪಣಕ್ಕಿಟ್ಟಿರುವ ಮಹಿಳಾ ಸೈನಿಕರನ್ನು ಗುರುತಿಸಿ ವೀರರಾಣಿ ಬೆಳವಡಿ ಮಲ್ಲಮ್ಮನ ಹೆಸರಿನಲ್ಲಿ ಪುರಸ್ಕಾರ ನೀಡಬೇಕು’ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.

ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ರಾತ್ರಿ ನಡೆದ ಬೆಳವಡಿ ಮಲ್ಲಮ್ಮನ ಉತ್ಸವದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ನಾಡಿನಾದ್ಯಂತ ವೀರವನಿತೆ ಬೆಳವಡಿ ಮಲ್ಲಮ್ಮನನ್ನು ತಾಯಿಯಂತೆ ಗೌರವಿಸಿ, ಪೂಜಿಸಿ ದೇಶಾಭಿಮಾನ ಮೆರೆಯಬೇಕು. ಮಲ್ಲಮ್ಮ ದೇಶದ ಹೆಮ್ಮೆಯ ಪ್ರತೀಕವಾಗಿದ್ದು, ವೀರರಾಣಿ ಕಿತ್ತೂರು ಚನ್ನಮ್ಮನಿಗೆ ಸಿಕ್ಕಷ್ಟೆ ಮಹತ್ವ, ಗೌರವಾದರಗಳು ಬೆಳವಡಿ ಮಲ್ಲಮ್ಮನಿಗೂ ನೀಡಬೇಕು.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮನ ಹೆಸರಿಟ್ಟು ಗೌರವ ಸೂಚಿಸಬೇಕು. ಮಲ್ಲಮ್ಮನ ಇತಿಹಾಸವನ್ನು ತಿರುಚುವ ದುಸ್ಸಾಹಸಕ್ಕೆ ಯಾರು ಮುಂದಾಗ ಬಾರದು. ಮಲ್ಲಮ್ಮನ ಕುರಿತು ಸಮಗ್ರ ಸಂಶೋಧನೆ ನಡೆಸಿ ಮಲ್ಲಮ್ಮನ ಭವ್ಯ ಇತಿಹಾಸದ ಚರಿತ್ರೆಯನ್ನು ವಿಶ್ವಾದ್ಯಂತ ಪರಿಚಯಿಸಬೇಕು’ ಎಂದರು.

ಧಾರವಾಡ ಹಿರಿಯ ಸಾಹಿತಿ ಸುಕನ್ಯಾ ಸಮಾರೋಪ ನುಡಿಗಳನ್ನಾಡಿ, ‘ಮಲ್ಲಮ್ಮನ ಹೆಸರು ಅಜರಾಮರ ವಾಗುವಂತೆ ಮಾಡಲು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗಬೇಕು. ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳವಡಿ ಮಹಿಳಾ ಸೇನೆ ಕಟ್ಟಿ ಮಹಿಳೆಯರಲ್ಲಿ ಕೆಚ್ಚು ತುಂಬಿದ ಕೀರ್ತಿ ಮಲ್ಲಮ್ಮಳದ್ದಾಗಿದೆ.

ಉತ್ಸವದಲ್ಲಿ ಕೇವಲ ಮೆರವಣಿಗೆ, ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೀಮಿತಗೊಳ್ಳದೆ ಮಲ್ಲಮ್ಮನ ಶೌರ್ಯ, ಸಾಹಸ, ಜೀವನ ಚರಿತ್ರೆ ಕುರಿತು ವಿಚಾರ ಸಂಕಿರಣ ನಡೆಸಿ ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯ ಮಾಡಿಕೊಡುವ ಜವಾಬ್ದಾರಿ ಸರ್ಕಾರ, ಜನಪ್ರತಿನಿಧಿ, ಅಧಿಕಾರಿಗಳದ್ದಾಗಿದೆ’ ಎಂದರು.

ಶಾಸಕ ಡಾ.ವಿಶ್ವನಾಥ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬೆಳಗಾವಿ, ಬೈಲಹೊಂಗಲ ಬಸ್ ನಿಲ್ದಾಣಕ್ಕೆ ಮಲ್ಲಮ್ಮನ ಹೆಸರಿಡಲು ರಾಜ್ಯ ಸರ್ಕಾರ ಮೇಲೆ ಈಗಾಗಲೇ ಒತ್ತಡ ಹೇರಲಾಗಿದೆ. ಯುವಕರು ವೀರರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು’ ಎಂದರು.

ಜಿಲ್ಲಾಧಿಕಾರಿ ಎನ್. ಜಯರಾಮ್, ಜಿಲ್ಲಾ ಪಂಚಾಯ್ತಿ ಸದಸ್ಯ ಈರಣ್ಣ ಕರೀಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಈರವ್ವ ತಳವಾರ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅಮೃತಾ ಕಕ್ಕಯ್ಯನವರ ಇದ್ದರು.

ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು. ಅನುಷಾ, ಮಹಾಂತೇಶ ಉಪ್ಪಿನ ನಿರೂಪಿಸಿದರು. ತಹಶೀಲ್ದಾರ್ ಪ್ರಕಾಶ ಗಾಯಕವಾಡ ವಂದಿಸಿದರು. ಸಮಾರೋಪಕ್ಕೆ ಬರಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಡಿ.ಬಿ. ಇನಾಮದಾರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.