ADVERTISEMENT

ಯಮಕನಮರಡಿಯಿಂದಲೇ ಸತೀಶ ಸ್ಪರ್ಧೆ!

ಶ್ರೀಕಾಂತ ಕಲ್ಲಮ್ಮನವರ
Published 23 ಡಿಸೆಂಬರ್ 2017, 8:45 IST
Last Updated 23 ಡಿಸೆಂಬರ್ 2017, 8:45 IST
ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯಲ್ಲಿ ಶುಕ್ರವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ಭಾಗವಹಿಸಿದ್ದರು
ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯಲ್ಲಿ ಶುಕ್ರವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ಭಾಗವಹಿಸಿದ್ದರು   

ಯಮಕನಮರಡಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಮಕನಮರಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಸತೀಶ ಜಾರಕಿಹೊಳಿ ಪುನಃ ಕಣಕ್ಕಿಳಿಯುವುದು ಬಹುತೇಕ ಖಾತರಿಯಾದಂತಾಗಿದೆ. ಇಲ್ಲಿ ಶುಕ್ರವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹೋದರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಆಡಿದ ಮಾತುಗಳು ಇದಕ್ಕೆ ಇಂಬು ನೀಡುವಂತಿವೆ.

ಅಧ್ಯಕ್ಷೀಯ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವ ಸತೀಶ ಜಾರಕಿಹೊಳಿ ಅವರಿಗೆ ಈ ಸಲವೂ ಮತ ನೀಡಿ. ಅವರನ್ನು ಗೆಲ್ಲಿಸಿಕೊಡಿ’ ಎಂದು ಕರೆನೀಡಿದರು.

‘ಸತೀಶ ಜಾರಕಿಹೊಳಿ ಅವರು ಒಬ್ಬ ಪ್ರಭಾವಿ ರಾಜಕಾರಣಿ, ಕೇವಲ ಬೆಳಗಾವಿಯಲ್ಲಿ ಅಲ್ಲ, ಇಡೀ ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ರಾಷ್ಟ್ರಮಟ್ಟದವರೆಗೆ ಬೆಳೆದಿದ್ದಾರೆ. ಅವರು ಈಗ ಎಐಸಿಸಿ ಕಾರ್ಯದರ್ಶಿಯಾಗಿದ್ದಾರೆ. ಈ ಮಟ್ಟಕ್ಕೆ ಬೆಳೆಯಲು ನನಗೂ ಸಾಧ್ಯವಾಗಿರಲಿಲ್ಲ’ ಎಂದು ಪ್ರಶಂಸಿಸಿದರು.

ADVERTISEMENT

‘ಮುಂಬರುವ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಗೆಲ್ಲಿಸಬೇಕಾಗಿದೆ. ಅದಕ್ಕಾಗಿ ಸತೀಶ ರಾಜ್ಯದಾದ್ಯಂತ ಪ್ರವಾಸ ಮಾಡಬೇಕಾಗುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ಕಳೆಯಲು ಅವರಿಗೆ ಸಾಧ್ಯವಾಗದು. ಅವರನ್ನು ಗೆಲ್ಲಿಸಿಕೊಡುವುದು ನಿಮ್ಮ ಜವಾಬ್ದಾರಿ’ ಎಂದು ಸಭಿಕರನ್ನು ಉದ್ದೇಶಿಸಿ ಹೇಳಿದರು. ನೂರಾರು ಜನ ಸಭಿಕರು ಕೈಎತ್ತಿ ಸಹಮತ ವ್ಯಕ್ತಪಡಿಸಿದರು.

ಇದಕ್ಕೂ ಮುಂಚೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ, ‘ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕಾಗಿದೆ. ಸಹೋದರ ಸತೀಶ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಪಕ್ಷ ಸಂಘಟನೆಗಾಗಿ ನಾನೇ ಒಂದು ಹೆಜ್ಜೆ ಹಿಂದೆ ಸರಿದು ಸಹಕರಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಹಾಗೂ ರಮೇಶ ಅವರ ಮಾತುಗಳನ್ನು ಆಧಾರವಾಗಿಟ್ಟುಕೊಂಡು ನೋಡಿದರೆ ಸತೀಶ ಅವರಿಗೆ ಯಮಕನಮರಡಿ ಟಿಕೆಟ್‌ ಖಚಿತ ಎನ್ನಬಹುದಾಗಿದೆ.

ಇತ್ತೀಚೆಗೆ ತಮ್ಮ ಇನ್ನೊಬ್ಬ ಸಹೋದರ ಲಖನ್‌ ಜಾರಕಿಹೊಳಿ ಅವರನ್ನು ಚುನಾವಣಾ ರಾಜಕೀಯಕ್ಕೆ ತರಬೇಕೆಂದು ರಮೇಶ ಬಯಸಿದ್ದರು. ಯಮಕನಮರಡಿ ಕ್ಷೇತ್ರವನ್ನು ಲಖನ್‌ ಅವರಿಗೆ ಬಿಟ್ಟುಕೊಡಬೇಕು ಹಾಗೂ ರಾಯಚೂರು ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಸತೀಶ ಅವರನ್ನು ಕೋರಿದ್ದರು. ಇದಕ್ಕೆ ಸತೀಶ ಸುತಾರಾಂ ಒಪ್ಪಿರಲಿಲ್ಲ. ಯಾವುದೇ ಕಾರಣಕ್ಕೂ ಯಮಕನಮರಡಿ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು.

ಇದೇ ವಿಷಯವಾಗಿ ರಮೇಶ ಹಾಗೂ ಸತೀಶ ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದು ಕೆಪಿಸಿಸಿ ವರಿಷ್ಠರವರೆಗೂ ತಲುಪಿತ್ತು. ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ಹೊಂದಿದ್ದ ಇವರಿಬ್ಬರೂ ಸಹೋದರರನ್ನು ಸಮಾಧಾನ ಪಡಿಸಲು ವರಿಷ್ಠರು ಹೆಣಗಾಡಿದರು. ಕೊನೆಗೆ ಜಿಲ್ಲಾ ಘಟಕವನ್ನು ವಿಭಜಿಸಿ ಬೆಳಗಾವಿ ಘಟಕವನ್ನು ರಮೇಶ ಅವರಿಗೆ ಹಾಗೂ ಚಿಕ್ಕೋಡಿ ಘಟಕವನ್ನು ಸತೀಶ ಅವರ ಆಪ್ತ ಚಿಂಗಳೆ ಅವರಿಗೆ ವಹಿಸಿದ್ದರು.

ಇದೀಗ, ಮುಂದಿನ ಸಲವೂ ಯಮಕನಮರಡಿಯಿಂದ ಸತೀಶ ಅವರೇ ಕಣಕ್ಕಿಳಿಯಲಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹೋದರರ ನಡುವೆ ಉಂಟಾಗಿದ್ದ ಅಂತರವನ್ನು ಶಮನಗೊಳಿಸಲು ಯತ್ನಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ಯತ್ನ ಎಷ್ಟು ಸಫಲವಾಗಿದೆ ಎನ್ನುವುದನ್ನು ಚುನಾವಣೆಯ ಫಲಿತಾಂಶ ತೋರಿಸಿಕೊಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.