ADVERTISEMENT

‘ರವದಿ ಮರು ಬಳಕೆ ಮಾಡಿ ಫಲವತ್ತತೆ ವೃದ್ಧಿ’

ಕಲ್ಲೋಳಿ: ಬಸವೇಶ್ವರ ಸೌಹಾರ್ದ ಮಹಾವಿದ್ಯಾಲಯ ಹಾಗೂ ಕೃಷಿಕ ಸಮಾಜದಿಂದ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:31 IST
Last Updated 8 ಫೆಬ್ರುವರಿ 2017, 9:31 IST

ಕಲ್ಲೋಳಿ (ಮೂಡಲಗಿ): ‘ಕಬ್ಬಿನ ರವದಿಯನ್ನು ಪುಡಿ ಮಾಡಿ ಮಣ್ಣಿನಲ್ಲಿ ಸೇರಿಸುವುದರಿಂದ ಮಣ್ಣಿನ ತಾಪಮಾನ ಏರುಪೇರಾಗದೆ ತೇವಾಂಶ ಆವಿಯಾಗು­ವು­ದನ್ನು ತಡೆದು ಬೆಳೆಗೆ ಪುಷ್ಟಿ ನೀಡುತ್ತದೆ’ ಎಂದು ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎ.ಡಿ. ಸವದತ್ತಿ ಹೇಳಿದರು.

ಇಲ್ಲಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಭಾಭವನದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ತಾಲ್ಲೂಕು ಘಟಕ, ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕೆ ಮಹಾ­ವಿದ್ಯಾಲಯ ಹಾಗೂ ಕೃಷಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಬ್ಬಿನ ರವದಿಯ ಸದ್ಬಳಕೆ ಹಾಗೂ ಅರಿಷಿಣ ಕೊಯ್ಲೋತ್ತರ ತಂತ್ರಜ್ಞಾನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಅದರಿಂದಾಗಿ ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳ ಚಟುವಟಿಕೆ ಮತ್ತು ರೈತಮಿತ್ರ ಕೀಟಗಳ ಅಭಿವೃದ್ಧಿಯಾಗುವುದು’ ಎಂದರು.

‘ಕಬ್ಬಿನ ರವದಿಯ ಬಳಕೆಯಿಂದ ಮಣ್ಣಿನ ಕೊಚ್ಚಣೆ ತಡೆಯುವುದು, ನೀರು ಇಂಗುವಿಕೆ ಪ್ರಮಾಣ ಅಧಿಕವಾಗಿ ಮಣ್ಣಿನ ಫಲವತ್ತತೆ ಅಧಿಕವಾಗಿ ರೈತರಿಗೆ ಉತ್ತಮ ಇಳುವರಿ ದೊರೆಯುತ್ತದೆ’ ಎಂದು ಹೇಳಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ಕರ್ನಾಟಕ ಪ್ರದೇಶ ಕೃಷಿ ಸಮಾಜದ ರಾಜ್ಯ ಪ್ರತಿನಿಧಿ ಬಾಳಪ್ಪ ಬ. ಬೆಳಕೂಡ, ‘ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ತಡೆಯುವುದಕ್ಕೆ ರೈತರು ಕಬ್ಬಿನ ರವದಿಯನ್ನು ಸುಡುವುದನ್ನು ನಿಲ್ಲಿಸಿ, ಅದನ್ನು ಮಣ್ಣಿನ ಫಲವತ್ತತೆಗೆ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಕೃಷಿ ಅಧಿಕಾರಿ ಪೀರಜಾದೆ ಮಾತನಾಡಿ, ‘ರೈತರು ಸಾವಯವ ಕೃಷಿಗೆ ಹೆಚ್ಚು ಗಮನ ನೀಡಬೇಕು. ಎರೆಹುಳು ತೊಟ್ಟಿ ನಿರ್ಮಾಣ, ಬಯೋಡೈಜೆಸ್ಟರ್‌ ನಿರ್ಮಾಣಗಳಿಗೆ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ರೈತರು ಬಳಸಿಕೊಳ್ಳಬೇಕು’ ಎಂದರು.

ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾ­ವಿದ್ಯಾಲಯದ ಡೀನ್‌ ಎಂ.ಎಸ್. ಕುಲ­ಕರ್ಣಿ, ಅರಿಷಿಣ ಕೊಯ್ಲೋತ್ತರ ತಂತ್ರ­ಜ್ಞಾನ ಕುರಿತು ಮಾತನಾಡಿ ರೈತರ ಸಹಕಾರದೊಂದಿಗೆ ಗೋಕಾಕದ ಎಪಿ­ಎಂಸಿ­ಯಲ್ಲಿ ಅರಿಷಿಣ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.

ಹಾವೇರಿಯ ಸಂಬಾರ ಮಂಡಳಿ ಉಪನಿರ್ದೇಶಕ ಟಿ. ಹರೀಶ ಅರಿಷಿಣ ಕೃಷಿಗೆ ಸಂಬಾರ ಮಂಡಳಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾತನಾಡಿದರು.

ಕೃಷಿ ವಿಜ್ಞಾನಿಗಳಾದ ಡಾ. ಎಂ.ಎಚ್. ತಟಗಾರ, ‘ಅರಿಷಿಣ ಬೆಳೆಗೆ ತಗಲುವು ಕೀಟಗಳ ಹೋತೋಟಿ ಕ್ರಮ’ ರೋಗ ಬಾಧೆಗಳ ಹತೋಟಿ ಕುರಿತು ಡಾ. ಸುಮಂಗಲಾ ಕೌಲಗಿ ಹಾಗೂ ಡಾ. ಡಿ. ಶ್ರೀಕಂಠ ಪ್ರಸಾದ ‘ಅರಿಷಿಣ ಬೆಳೆಯ ತಂತ್ರಜ್ಞಾನ’ ಬಗ್ಗೆ ಮಾತನಾಡಿದರು.

ಕೃಷಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಗದಾಡಿ, ಉಪಾಧ್ಯಕ್ಷ ಅವಪ್ಪ ಬಿ. ಪೂಜೇರಿ, ಕಾರ್ಯದರ್ಶಿ ರಾಮಚಂದ್ರ ಪತ್ತಾರ, ಚಂದ್ರಶೇಖರ ಹೊಟ್ಟಿಹೊಳಿ ಹಾಗೂ ಪದಾಧಿಕಾರಿಗಳು, ಕೃಷಿ ತಜ್ಞರು ಭಾಗವಹಿಸಿದ್ದರು.

*
ಅರಿಷಿಣ ಬೆಳೆಯ ಕೊಯ್ಲೋತ್ತರಕ್ಕೆ ಬೇಕಾದ ಮಿಶ್ರಣ ಯಂತ್ರ, ಪಾಲಿಷ್‌ ಯಂತ್ರ ಸಂಬಾರ ಮಂಡಳಿಯಿಂದ ರೈತರಿಗೆ ದೊರೆಯುವಂತಾಗಬೇಕು.
-ಬಿ.ಬಿ. ಬೆಳಕೂಡ,
ಪ್ರದೇಶ ಕೃಷಿ ಸಮಾಜದ ರಾಜ್ಯ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT