ADVERTISEMENT

‘ರೈತಪರ ಕಾಳಜಿ ಇಲ್ಲದ ಕೆಟ್ಟ ಸರ್ಕಾರ’

ಚನ್ನಮ್ಮನ ಕಿತ್ತೂರಿನಲ್ಲಿ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ಪ್ರತ್ಯೇಕ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:32 IST
Last Updated 11 ಮಾರ್ಚ್ 2017, 11:32 IST
ಚನ್ನಮ್ಮನ ಕಿತ್ತೂರು: ‘ಬರಗಾಲ, ಬೆಳೆನಾಶ, ಸಾಲದ ಶೂಲ ಕುತ್ತಿಗೆಗೆ ಬಂದು ನಿಸ್ಸಾಹಾಯಕನಾಗಿ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ಅವರ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ತೋರಿಸುತ್ತಿಲ್ಲ’ ಎಂದು ಮಾಜಿ ಶಾಸಕ ಸುರೇಶ ಮಾರಿಹಾಳ ದೂರಿದರು.
 
ಬಿಜೆಪಿ ಪರವಾಗಿ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.
 
‘ರೈತರು ಮತ್ತು ದೀನ ದಲಿತರ ಹೆಸರು ಹೇಳಿಕೊಂಡು ಅಧಿಕಾರ ಹಿಡಿದ ಕಾಂಗ್ರೆಸ್‌ ಸರ್ಕಾರ ರೈತರ ಆತ್ಮಹತ್ಯೆ ಬಗ್ಗೆ ಕನಿಕರ ತೋರಿಸದೆ ಹುಡುಗಾಟಿಕೆ ಮಾತುಗಳನ್ನು ಆಡುತ್ತಿದೆ. ಈ ಸರ್ಕಾರದ ದುಷ್ಟ ವರ್ತನೆಯು ರೈತ ಪರ ಕಾಳಜಿ ಎಷ್ಟಿದೆ ಎಂಬುದಕ್ಕೆ ಸಾಕ್ಷಿಯೊದಗಿಸುತ್ತದೆ’ ಎಂದು ತರಾಟೆಗೆ ತೆಗೆದು ಕೊಂಡರು.
 
‘ಅನ್ನದಾತ ಹೊಲದಲ್ಲಿ ಬೆಳೆ ಬೆಳೆಯದಿದ್ದರೆ ಆಸ್ತಿ, ಚಿನ್ನ, ಹಣ ತಿಂದು ಬದುಕುವುದು ಸಾಧ್ಯವಿಲ್ಲ. ಭ್ರಷ್ಟಾಚಾರ ದಲ್ಲಿ ಮುಳುಗಿರುವ, ರೈತನ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಈ ಸರ್ಕಾರ ನಮಗೆ ಬೇಡ’ ಎಂದು ಗುಡುಗಿದ ಅವರು, ‘ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ರೈತರ ಸಾಲಮನ್ನಾ ಮಾಡುವವರೆಗೆ ಹೋರಾಟ ಮುಂದು ವರಿಯುತ್ತದೆ’ ಎಂದು ಘೋಷಿಸಿದರು.
 
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಮಾತನಾಡಿ ‘ಜಿಲ್ಲೆ ಅನೇಕ ಕಡೆಗೆ ನೀರಿನ ಹಾಹಾಕಾರವಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಕಾಡುತ್ತಿದೆ. ಬೆಳೆ ಬೆಳೆಯಲು ಸಾಲ ಮಾಡಿ ಸತತ ಬರ ಆವರಿಸಿದ್ದರಿಂದ ರೈತ ನರಳುವಂತಾ ಗಿದ್ದು, ರೈತನ ತೊಂದರೆ ಮನಗಂಡು ಬರುವ ಬಜೆಟ್‌ನಲ್ಲಿ ಸಾಲಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.
 
ಬಿಜೆಪಿ ಮಂಡಳ ಅಧ್ಯಕ್ಷ ಚಿನ್ನಪ್ಪ ಮುತ್ನಾಳ, ಜಿಲ್ಲಾ ಪಂಚಾಯ್ತಿ ಸದಸ್ಯೆಯ ರಾದ ಲಾವಣ್ಯ ಶಿಲೇದಾರ, ಬಸವ್ವ ಕೋಲಕಾರ, ಮುಖಂಡ ಹನುಮಂತ ಕೊಟಬಾಗಿ, ಸರಸ್ವತಿ ಹೈಬತ್ತಿ, ಯಲ್ಲಪ್ಪ ವಕ್ಕುಂದ, ದಿನೇಶ ವಳಸಂಗ, ಶಿವಾನಂದ ಜಕಾತಿ, ಶಿವಾನಂದ ಹನುಮಸಾಗರ, ಬಸನಗೌಡ ಪಾಟೀಲ ಇತರರು ಇದ್ದರು.
 
ಜೆಡಿಎಸ್ ಪ್ರತಿಭಟನೆ
ಸತತ ಮೂರು ವರ್ಷಗಳ ಬರಗಾಲ ಪ್ರಹಾರಕ್ಕೆ ಸಿಕ್ಕು ಸಂಕಷ್ಟ ಪರಿಸ್ಥಿತಿಯಲ್ಲಿ ಬೆಂದು ಹೋಗುತ್ತಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಜಾತ್ಯತೀತ ಜನತಾ ದಳ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಸರ್ಕಾರವನ್ನು ಒತ್ತಾಯಿಸಿದರು.
 
ಗುರುವಾರ ಪ್ರತಿಭಟನಾಕಾರರ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಿದರೆ ನಾನೂ ಮಾಡುತ್ತೇನೆಂದು ಪ್ರಧಾನಿ ಮೋದಿ ಕಡೆಗೆ ಬೊಟ್ಟು ತೋರಿಸು ವುದನ್ನು ಸಿದ್ಧರಾಮಯ್ಯ ಬಿಡಬೇಕು. ಸಾಲಮನ್ನಾ ಜೊತೆಗೆ ಬೆಳೆ ವಿಮೆ ಪರಿಹಾರ, ಕಬ್ಬಿನ ಬಾಕಿ ದುಡ್ಡು ಕೊಡಿಸ ಬೇಕು ಎಂದು ಮಾಡಲಗಿ ಅವರು ಸಲಹೆ ನೀಡಿದರು.
 
ಜೆಡಿಎಸ್‌ ಪಕ್ಷದ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಮೇಘಾ ಕುಂದರಗಿ, ಅಧ್ಯಕ್ಷ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಸಿದ್ರಾಮಗೌಡ ಪಾಟೀಲ, ಶಿವನಸಿಂಗ್ ಮೊಕಾಶಿ, ಬಿಷ್ಟಪ್ಪ ಶಿಂಧೆ, ಶಿವಾನಂದ ಸಂಜೀವಗೋಳ, ಬಸವರಾಜ ಅವರಾದಿ, ಶ್ರೀಶೈಲ್ ಪಡಗಲ್, ಮಹಾಂತೇಶ ದೊಡಮನಿ, ಕಸ್ತೂರಿ ಪರವಣ್ಣವರ, ಭಾಗ್ಯಶ್ರೀ ದೇವನಾಯ್ಕರ್, ಪಾರೀಶ್ ದೇಗಲೊಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಕಾರ್ಯಕರ್ತರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.