ADVERTISEMENT

ಸುವರ್ಣ ವಿಧಾನಸೌಧಕ್ಕೆ ಪಾದಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 5:41 IST
Last Updated 13 ನವೆಂಬರ್ 2017, 5:41 IST
ಖಾನಾಪುರ ತಾಲ್ಲೂಕು ನಂದಗಡದಿಂದ ಭಾನುವಾರ ಆರಂಭವಾದ ರೈತರ ಪಾದಯಾತ್ರೆಗೆ ಕೋಡಿಹಳ್ಳಿ ಚಂದ್ರಶೇಖರ ಚಾಲನೆ ನೀಡಿದರು
ಖಾನಾಪುರ ತಾಲ್ಲೂಕು ನಂದಗಡದಿಂದ ಭಾನುವಾರ ಆರಂಭವಾದ ರೈತರ ಪಾದಯಾತ್ರೆಗೆ ಕೋಡಿಹಳ್ಳಿ ಚಂದ್ರಶೇಖರ ಚಾಲನೆ ನೀಡಿದರು   

ಖಾನಾಪುರ: ಸರ್ಕಾರಗಳು ರೈತರನ್ನು ನಿರಂತರ ಶೋಷಣೆ ಮಾಡುತ್ತಿರುವುದನ್ನು ಖಂಡಿಸಿ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ನಂದಗಡದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಮಾಧಿ ಸ್ಥಳದಿಂದ ಬೆಳಗಾವಿಯ ಸುವರ್ಣ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ನಂದಗಡ ಗ್ರಾಮದಲ್ಲಿ ಕೃಷಿಕ ಸಮಾಜ, ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರು ಪಡೆದ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಕಬ್ಬಿಗೆ ಎಸ್ಎಪಿ ದರ ನಿಗದಿಪಡಿಸಬೇಕು, ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಬಿಲ್‌ ಕೊಡಿಸಬೇಕು, ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು, ಬೆಂಬಲ ಬೆಲೆ ಘೋಷಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ’ ಎಂದರು.

ADVERTISEMENT

‘ಯಾತ್ರೆಯು ಚಾಪಗಾವಿ, ಕೊಡಚವಾಡ ಮೂಲಕ ಸಂಚರಿಸಿ ಪಾರಿಶ್ವಾಡದಲ್ಲಿ ವಾಸ್ತವ್ಯ ಹೂಡಲಿದೆ. ಸೋಮವಾರ ಬೆಳಿಗ್ಗೆ ಪಾರಿಶ್ವಾಡದಿಂದ ಹೊರಟು ಕೆ.ಕೆ. ಕೊಪ್ಪ ಮೂಲಕ ಸುವರ್ಣ ವಿಧಾನಸೌಧ ತಲುಪಲಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವವರೆಗೂ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಮುಂದುವರೆಯಲಿದೆ’ ಎಂದರು.

ಕೃಷಿಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಯಮಕನಮರಡಿ, ಮುಖಂಡರಾದ ರಾಘವೇಂದ್ರ ನಾಯ್ಕ, ಗುರುಲಿಂಗಯ್ಯ ಪೂಜೇರ, ಲಿಂಗರಾಜ ಪಾಟೀಲ, ಶಂಕರ ಸೋನೊಳ್ಳಿ, ಮಲ್ಲಿಕಾರ್ಜುನ ವಾಲಿ, ಮಹಾದೇವ ಸಾಗರೇಕರ, ವಾಸು ತಿಪ್ಪಣ್ಣವರ, ಯಲ್ಲಪ್ಪ ಚನ್ನಾಪುರ, ಗಂಗಪ್ಪ ಹೇರೆಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.