ADVERTISEMENT

ಹುಕ್ಕೇರಿ ರಸ್ತೆಯಲ್ಲೇ ಸಂತೆ, ವಾಹನ ಸವಾರರಿಗೆ ವ್ಯಥೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 9:35 IST
Last Updated 20 ಏಪ್ರಿಲ್ 2017, 9:35 IST
ಹುಕ್ಕೇರಿ ಪಟ್ಟಣದಲ್ಲಿ ಸೋಮವಾರಕ್ಕೊಮ್ಮೆ ನಡೆಯುವ ಸಂತೆಯ ದಿನ ಬಹುತೇಕ ಕಾಯಿಪಲ್ಲೆ (ತರಕಾರಿ) ವ್ಯಾಪಾರಸ್ಥರು ಸೇರಿದಂತೆ ಇತರರು ತಮ್ಮ ವಸ್ತುಗಳನ್ನು ರಸ್ತೆ ಮೇಲೆ ಇಟ್ಟು ಮಾರಾಟ ಮಾಡುವುದರಿಂದ ಪಾದಚಾರಿಗಳಿಗೆ ಮತ್ತು ಸಂಚಾರಕ್ಕೆ ತೊಂದರೆಯಾಗಿದೆ (ಎಡಚಿತ್ರ) ಸಂತೆಯ ದಿನ ಹಳೆ ಬಸ್ ನಿಲ್ದಾಣದ ಬಳಿ ಸಂಚಾರ ದಟ್ಟಣೆ ಉಂಟಾಗಿರುವುದು
ಹುಕ್ಕೇರಿ ಪಟ್ಟಣದಲ್ಲಿ ಸೋಮವಾರಕ್ಕೊಮ್ಮೆ ನಡೆಯುವ ಸಂತೆಯ ದಿನ ಬಹುತೇಕ ಕಾಯಿಪಲ್ಲೆ (ತರಕಾರಿ) ವ್ಯಾಪಾರಸ್ಥರು ಸೇರಿದಂತೆ ಇತರರು ತಮ್ಮ ವಸ್ತುಗಳನ್ನು ರಸ್ತೆ ಮೇಲೆ ಇಟ್ಟು ಮಾರಾಟ ಮಾಡುವುದರಿಂದ ಪಾದಚಾರಿಗಳಿಗೆ ಮತ್ತು ಸಂಚಾರಕ್ಕೆ ತೊಂದರೆಯಾಗಿದೆ (ಎಡಚಿತ್ರ) ಸಂತೆಯ ದಿನ ಹಳೆ ಬಸ್ ನಿಲ್ದಾಣದ ಬಳಿ ಸಂಚಾರ ದಟ್ಟಣೆ ಉಂಟಾಗಿರುವುದು   

ಹುಕ್ಕೇರಿ: ಪಟ್ಟಣದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆ ವಾರದಿಂದ ವಾರಕ್ಕೆ ಮತ್ತು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿ. ಆದರೆ ಸಂತೆ ಹೆಚ್ಚಾದಂತೆ ಜನರಿಗೆ ಕಿರಿಕಿರಿ ಹೆಚ್ಚಾಗುತ್ತಿರುವುದು ಕೂಡ ಅಲ್ಲಗಳೆಯುವಂತಿಲ್ಲ. ಹಾಗಾಗಿ ಇದಕ್ಕೆ ಜನರೇ ಹೇಳುವಂತೆ ‘ಚೋಟುದ್ದ ರಸ್ತೆ–ಗೇಣುದ್ದ ಸಂತೆ’ ಎಂದರೆ ತಪ್ಪಾಗಲಿಕ್ಕಿಲ್ಲ.

ಸೋಮವಾರ ಸಂತೆಯ ದಿನ. ಅಂದು ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಭಾಗದ ನೂರಾರು ಜನರು ಖರೀದಿಗೆ ಬರುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ  ಯಾವುದೇ ರಸ್ತೆ ತೆಗೆದುಕೊಂಡರೂ (ಉದಾ: ಬಬಲಾದಿ ಗಲ್ಲಿ, ಸಿಂಡಿಕೇಟ್ ಬ್ಯಾಂಕ್ ರೋಡ್, ಬಜಾರ್ ರಸ್ತೆ, ಹಳೇ ಮುನ್ಸಿಪಾಲ್ಟಿ ರಸ್ತೆ, ಹಳೆ ಬಸ್ ನಿಲ್ದಾಣ) ಇಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ ರಸ್ತೆ ಮೇಲೆ ಮಾರಾಟ ಮಾಡಬಹುದಾಗಿದೆ.

ಸಂತೆ ಮಾಡಲು ಬಂದ ಜನರಿಗೆ ಇಲ್ಲಿ ಸಂಚರಿಸುವುದು ದುಸ್ತರವಾಗು ತ್ತಿದೆ. ಬಹುತೇಕ ವ್ಯಾಪಾರಸ್ಥರು ತಮ್ಮ ಎಲ್ಲ ಮಾಲನ್ನು ರಸ್ತೆ ಮೇಲೆ ಇರಿಸುವುದರಿಂದ ಜನರು ಕಾಯಿಪಲ್ಲೆ ತುಳಿದು ಹೋಗುವ ಸಾಧ್ಯತೆ. ಹಂದಿಗಳು ಮತ್ತು ದನಕರುಗಳು ಬಾಯಿ ಹಾಕಿ ತೆಗೆದುಕೊಂಡು ಹೋಗುವ ದೃಶ್ಯ ಸರ್ವೆ ಸಾಮಾನ್ಯ.

ADVERTISEMENT

‘ರಸ್ತೆಯ ಎರಡೂ ಬದಿ (ಸಾಧ್ಯವಿದ್ದಲ್ಲಿ ರಸ್ತೆ ಮಧ್ಯೆ ಕೂಡ) ತರಕಾರಿ ವ್ಯಾಪಾರ ನಡೆಯುತ್ತಿರುವು ದರಿಂದ ಸಂಚಾರ ದಟ್ಟಣೆ ವಾರದಿಂದ ವಾರಕ್ಕೆ ವಿಪರೀತವಾಗುತ್ತಿದೆ. ಬಸ್ ನಿಲ್ದಾಣದ ಬಳಿಯ ಬೈಪಾಸ್ ರಸ್ತೆಗೆ ಅಂಟಿಕೊಂಡು ಖಾಸಗಿ ವಾಹನಗಳ ನಿಲುಗಡೆ, ಅಲ್ಲಿಂದ ಟಿಎಂಸಿ ಕಡೆಗೆ ಹೋಗುವ ರಸ್ತೆ ಎರಡು ಬದಿಯಲ್ಲಿ ದ್ವಿಚಕ್ರ ವಾಹನಗಳ ಬೇಕಾಬಿಟ್ಟಿ ನಿಲುಗಡೆ ಜನರಿಗೆ ಅದರಲ್ಲೂ ವಿಶೇಷ ವಾಗಿ ವೃದ್ಧ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತುಂಬಾ ಕಿರಿಕಿರಿ ಆಗುತ್ತಿದೆ. ಏತನ್ಮಧ್ಯೆ ಟ್ರಾಫಿಕ್ ಜಾಮ್ ಕೂಡಾ ಆಗಿ ಜನರಿಗೆ ಮತ್ತು ಅಕ್ಕಪಕ್ಕದ ಅಂಗಡಿ ಯವರಿಗೆ ‘ವಾರದ ತಲೆ ನೋವು’ ಆಗುತ್ತಿದೆ’ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

‘ವ್ಯಾಪಾರ ಮಾಡುವುದು ತಪ್ಪಲ್ಲ. ಅದು ಜನರಿಗೆ ಅನಾನುಕೂಲ ಆಗದಂತೆ ಇರಬೇಕು’ ಎಂದು ಹಾರ್ಡವೇರ್ ವ್ಯಾಪಾರಸ್ಥ ಸಂಜು ಬಸ್ತವಾಡ ಹೇಳು ತ್ತಾರೆ. ಇದಕ್ಕೆ ಪರಿಹಾರ ಎಂದರೆ ರಸ್ತೆಯ ಒಂದು ಬದಿ ವ್ಯಾಪಾರಸ್ಥರು ವ್ಯವಹರಿ  ಸಬೇಕು ಎಂಬುದು ಅವರ ಅಭಿಪ್ರಾಯ.

ಪರಿಹಾರ: ಸಂಬಂಧಿಸಿದ ಇಲಾಖೆ ಯವರು ಮುಂಜಾಗ್ರತಾ ಕ್ರಮ ತೆಗೆದುಕೊಂಡು ವ್ಯಾಪಾರಸ್ಥರಿಗೂ ಅನ್ಯಾಯವಾಗದ ಹಾಗೆ ಮತ್ತು ಜನರಿಗೂ ಅನುಕೂಲವಾಗುವ ಹಾಗೆ ಕ್ರಮ ಜರುಗಿಸಬೇಕು ಎಂದು ಗಣೇಶ ನಗರ ನಿವಾಸಿ ಶಿವಾನಂದ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.‘ಟಿಎಂಸಿ ಅಧಿಕಾರಿಗಳು ರಸ್ತೆಯ ಎರಡೂ ಬದಿಗೆ ಮಾರ್ಕಿಂಗ್ ಮಾಡಿ ಅದರೊಳಗೆ ವ್ಯವಹರಿಸುವಂತೆ ವ್ಯಾಪಾರಸ್ಥರಿಗೆ ಸೂಚಿಸಬೇಕು ಮತ್ತು ಪೊಲೀಸರು ಎಲ್ಲಿ ಬೇಕಲ್ಲಿ ನಿಂತ ವಾಹನಗಳನ್ನು ತೆರವು ಮಾಡಿಸಬೇಕು’ ಎಂದು ಶಿವಾನಂದ ಹಿರೇಮಠ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.