ADVERTISEMENT

ಅತ್ಯಾಚಾರ: ಇಬ್ಬರಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:42 IST
Last Updated 5 ಅಕ್ಟೋಬರ್ 2015, 20:42 IST

ಬೆಂಗಳೂರು: ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 38 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ನಾಗೇಶ ಮತ್ತು ರಾಘವೇಂದ್ರ ಎಂಬ ತಪ್ಪಿತಸ್ಥರಿಗೆ ನಗರದ ಎರಡನೇ ಹೆಚ್ಚುವರಿ ನಗರ  ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಅ.1ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ ರೆಡ್ಡಿ ಅವರು ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹ 1.05 ಲಕ್ಷ ದಂಡ ವಿಧಿಸಿ ಆದೇಶಿಸಿದರು. ಸಂತ್ರಸ್ತೆ ಪರ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಿ.ಪಿ.ಅಶೋಕ್‌ ತಳವಾರ್‌ ಅವರು ವಾದ ಮಂಡಿಸಿದ್ದರು.

ಘಟನೆ ವಿವರ: ಮೂಲತಃ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯ ಮಹಿಳೆ, ನಾಯಂಡಹಳ್ಳಿಯ ತೋಟದ ರಸ್ತೆಯಲ್ಲಿ ವಾಸವಾಗಿದ್ದರು. ಅವರು 2011ರ ಜುಲೈ 30ರಂದು ಕೆ.ಎಂ.ದೊಡ್ಡಿಗೆ ಹೋಗಿದ್ದರು. ಅಲ್ಲಿಂದ ಜುಲೈ 31ರಂದು ನಾಯಂಡಹಳ್ಳಿಗೆ ವಾಪಸ್‌ ಬಂದರು.  ರಾತ್ರಿ 11.30ರ ಸುಮಾರಿಗೆ  ಬಸ್‌ ನಿಲ್ದಾಣದಿಂದ, ತೋಟದ ರಸ್ತೆ ಮಾರ್ಗವಾಗಿ ಮನೆಗೆ ನಡೆದು ಹೋಗುತ್ತಿದ್ದರು.

ಈ ವೇಳೆ ನಾಗೇಶ ಮಹಿಳೆಯನ್ನು ಅಡ್ಡಗಟ್ಟಿ, ನಂತರ ರಾಘವೇಂದ್ರನನ್ನು ಅಲ್ಲಿಗೆ ಕರೆಸಿಕೊಂಡಿದ್ದಾನೆ. ಅವರು ಮಹಿಳೆಯನ್ನು ಅಲ್ಲಿನ ಸಮೀಪ ಪ್ಲಾಸ್ಟಿಕ್‌ ಕಾರ್ಖಾನೆ ಬಳಿ ಕರೆದೊಯ್ದು, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಪ್ರಕರಣದ ಬಾಲಾರೋಪಿಯಾಗಿದ್ದ ಮಧುಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡಿದ್ದಾರೆ. ಬಳಿಕ ಮಧು ಸಹ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ.

ನಂತರ ಮೂವರು, ಮಹಿಳೆ ಬಳಿ ಇದ್ದ ₹ 4,500 ನಗದು,  ತಾಳಿ, ಕಿವಿ ಓಲೆ–ಜುಮುಕಿ ಮತ್ತು ಮೊಬೈಲ್‌  ಕಿತ್ತುಕೊಂಡು ಪರಾರಿಯಾಗಿದ್ದರು.

ಇದಾದ ಬಳಿಕ ಮಹಿಳೆ ರಾತ್ರಿ 1.30ರ ಸುಮಾರಿಗೆ ಮನೆಗೆ ಹೋಗಿದ್ದರು.  ನಂತರ ಸ್ಥಳೀಯರ ನೆರವಿನಿಂದ 2011ರ ಆಗಸ್ಟ್‌ 1ರಂದು ಚಂದ್ರಾ ಲೇಔಟ್‌ ಠಾಣೆಗೆ ದೂರು ನೀಡಿದ್ದರು.

ಮುಖ್ಯಾಂಶಗಳು
* 2011ರ ಜುಲೈನಲ್ಲಿ ನಡೆದ ಘಟನೆ

* ತಪ್ಪಿತಸ್ಥರಿಗೆ ₹1.05 ಲಕ್ಷ ದಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT