ADVERTISEMENT

ಅಧಿಕಾರಿಯ ಎತ್ತಂಗಡಿಗೆ ನಿರ್ಣಯ

ನಕಲಿ ಲೆಟರ್‌ಹೆಡ್‌ ಬಳಸಿದ ಅಪೀಲು ಸ್ಥಾಯಿ ಸಮಿತಿ ವಿರುದ್ಧ ದೂರು ಕೊಟ್ಟಿದ್ದೇ ‘ಮಹಾಪರಾಧ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:41 IST
Last Updated 26 ಮಾರ್ಚ್ 2015, 19:41 IST
ಬಿಬಿಎಂಪಿಯಲ್ಲಿ ಗುರುವಾರ ನಡೆದ ಮಾಸಿಕ ಸಭೆಯಲ್ಲಿ ಉಪಮೇಯರ್‌ ಕೆ.ರಂಗಣ್ಣ ಅವರೊಂದಿಗೆ ಕಾಂಗ್ರೆಸ್‌ ಸದಸ್ಯರು ವಾಗ್ವಾದ ನಡೆಸಿದರು  ಪ್ರಜಾವಾಣಿ ಚಿತ್ರ
ಬಿಬಿಎಂಪಿಯಲ್ಲಿ ಗುರುವಾರ ನಡೆದ ಮಾಸಿಕ ಸಭೆಯಲ್ಲಿ ಉಪಮೇಯರ್‌ ಕೆ.ರಂಗಣ್ಣ ಅವರೊಂದಿಗೆ ಕಾಂಗ್ರೆಸ್‌ ಸದಸ್ಯರು ವಾಗ್ವಾದ ನಡೆಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ನಕಲಿ ಲೆಟರ್‌ಹೆಡ್‌ ಬಳಸಿ ಆಯುಕ್ತರ ಸಹಿ ಹಾಕಿಸಿದ್ದ ಅಪೀಲು ಸ್ಥಾಯಿ ಸಮಿತಿಯ ವಿರುದ್ಧ ಬಿಎಂಟಿಎಫ್‌ಗೆ ದೂರು ನೀಡಿದ್ದ ಸಹಾಯಕ ಆಯುಕ್ತ (ಜಾಹೀರಾತು ವಿಭಾಗ) ಮಥಾಯ್‌ ಅವರ ವಿರುದ್ಧ ಬಿಬಿಎಂಪಿ ಸದಸ್ಯರು ಗುರುವಾರ  ಮುಗಿಬಿದ್ದರು.
ಜಾಹೀರಾತು ವಿಷಯದಲ್ಲಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದಾರೆ ಎಂಬ ಕಾರಣ ನೀಡಿ ಮಥಾಯ್‌ ಅವರನ್ನು ನಗರಾಭಿವೃದ್ಧಿ ಇಲಾಖೆಗೆ ವಾಪಸ್‌ ಕಳುಹಿಸಲು ಬಿಬಿಎಂಪಿ ಸಭೆಯಲ್ಲಿ ನಿರ್ಣಯಿಸಲಾಯಿತು.

ನಕಲಿ ಲೆಟರ್‌ಹೆಡ್‌ ‍ಪ್ರಕರಣ: ಬಿಜೆಪಿಯ ಎಸ್‌.ಹರೀಶ್ ವಿಷಯ ಪ್ರಸ್ತಾಪಿಸಿ, ‘ಅಪೀಲು ಸ್ಥಾಯಿ ಸಮಿತಿಯ ಅಧ್ಯಕ್ಷ ಟಿ.ವಿ. ಕೃಷ್ಣ ವಿರುದ್ಧ ಇಲ್ಲ ಸಲ್ಲದ ಆರೋಪ ಹೊರಿಸಿ ಸಹಾಯಕ ಆಯುಕ್ತರು ಬಿಎಂಟಿಎಫ್‌ನಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಆರೋಪಿಸಿದರು.
ಬಿಜೆಪಿಯ ಗಂಗಭೈರಯ್ಯ, ‘ಶಾಸಕರ ಮೇಲೆ ಪ್ರಕರಣ ದಾಖಲಿಸಲು ಸ್ಪೀಕರ್‌ ಅನುಮತಿ ಪಡೆಯಬೇಕು. ಬಿಬಿಎಂಪಿ ಸದಸ್ಯರ ಮೇಲೆ ‍ಪ್ರಕರಣ ದಾಖಲಿಸಲು ಸಭೆಯ ಅನುಮತಿ ಪಡೆಯಬೇಕು’ ಎಂದು ಗಮನ ಸೆಳೆದರು.

ವಿರೋಧ ಪಕ್ಷದ ನಾಯಕ ಬಿ.ಎನ್‌.ಮಂಜುನಾಥ ರೆಡ್ಡಿ ಮಾತನಾಡಿ, ‘ಚುನಾಯಿತ ಸದಸ್ಯನ ಮೇಲೆ ಪ್ರಕರಣ ದಾಖಲಿಸಿದ್ದು ತಪ್ಪು. ನಾನು ಎಂಬ ಅಹಂಕಾರದಿಂದ ಅಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ. ಕೃಷ್ಣ ಅವರ ಮೇಲೆ ಪ್ರಕರಣ ದಾಖಲಿಸುವಾಗ ಮೇಯರ್ ಅಥವಾ ಆಯುಕ್ತರ ಗಮನಕ್ಕೆ ತಂದಿದ್ದರಾ’ ಎಂದು ಪ್ರಶ್ನಿಸಿದರು.

ಬಿಜೆಪಿಯ ಎ.ಎಚ್.ಬಸವರಾಜು, ‘ನಾನು ಸಚಿವ ಅಂಬರೀಷ್‌ ಅವರನ್ನೂ ಬಿಟ್ಟಿಲ್ಲ. ನೀವು ಕೇವಲ ಪಾಲಿಕೆ ಸದಸ್ಯರು’‍ ಎಂಬುದಾಗಿ ಮಥಾಯ್‌ ಧಮ್ಕಿ ಹಾಕಿದ್ದಾರೆ’ ಎಂದು ಆರೋಪಿಸಿದರು. ‘ಅಂಬರೀಷ್‌ ವಿರುದ್ಧ ಕೇವಲವಾಗಿ ಮಾತನಾಡಿರುವ ಅಧಿಕಾರಿಗೆ ಛೀಮಾರಿ ಹಾಕಿ ಅಮಾನತು ಮಾಡಬೇಕು’ ಎಂದು ಮಂಜುನಾಥ ರೆಡ್ಡಿ ಆಗ್ರಹಿಸಿದರು. ‘ಅಂಬರೀಷ್‌ ಅವರ ವಿರುದ್ಧ ನಾನು  ಹೇಳಿಕೆ ನೀಡಿಲ್ಲ. ಅವರ ಜತೆಗೆ ಸೌಹಾರ್ದ ಸಂಬಂಧ ಹೊಂದಿದ್ದೇನೆ’ ಎಂದು ಮಥಾಯ್‌ ಸ್ಪಷ್ಟನೆ ನೀಡಿದರು.

ತಪ್ಪು ಮಾಹಿತಿ ಆರೋಪ: ‘ಜಾಹೀರಾತು ನಿಷೇಧ ಮಾಡಿದ ಬಳಿಕವೂ ಅನಧಿಕೃತ ಜಾಹೀರಾತು ಫಲಕಗಳಿಗೆ ಅನುಮತಿ ನೀಡಲಾಗಿದೆ. ನಗರದಲ್ಲಿ 844 ಅನಧಿಕೃತ ಫಲಕಗಳು ಎಂದು ಹೇಳಿ ಮಥಾಯ್‌ ಅವರು ಮುಖ್ಯಮಂತ್ರಿ ಅವರ ದಾರಿ ತಪ್ಪಿಸಿದ್ದಾರೆ. ಇವತ್ತು ಮುಖ್ಯಮಂತ್ರಿ ಅವರು 1074 ಅನಧಿಕೃತ ಫಲಕಗಳು ಇವೆ ಎಂಬ ಉತ್ತರ ನೀಡಿದ್ದಾರೆ. ಇಂತಹ ಅಧಿಕಾರಿ ನಮಗೆ ಬೇಡ. ಅವರ ಮೇಲೆ ವಂಚನೆ ಪ್ರಕರಣ ದಾಖಲಿಸಬೇಕು’ ಎಂದು ಎಸ್‌.ಹರೀಶ್‌ ಆಗ್ರಹಿಸಿದರು.

‘ಕೇಂದ್ರ ಕಚೇರಿಯವರೇ ₹ 130 ಕೋಟಿ ಜಾಹೀರಾತು ಆದಾಯ ವಸೂಲಿ ಮಾಡುವುದು ಬಾಕಿ ಇದೆ. ಈ ವರ್ಷ ₹ 35 ಕೋಟಿ ಜಾಹೀರಾತು ಆದಾಯ ಬಂದಿದೆ ಎಂಬ ಉತ್ತರವನ್ನೂ ಕೊಟ್ಟಿದ್ದಾರೆ. ಬನ್ನೇರುಘಟ್ಟ ರಸ್ತೆ, ಓಕಳಿಪುರ ಮತ್ತಿತರ ಕಡೆಗಳಲ್ಲಿ ಜಾಹೀರಾತು ಫಲಕಗಳಿಗೆ ಅನುಮತಿ ನೀಡಲಾಗಿದೆ’ ಎಂದು ಆರೋಪಿಸಿದರು. ಜತೆಗೆ ಸಹಾಯಕ ಆಯುಕ್ತರ ಸಹಿ ಇರುವ ಕಡತವೊಂದನ್ನು ಪ್ರದರ್ಶಿಸಿದರು.

ಮಥಾಯ್‌ ಪ್ರತಿಕ್ರಿಯಿಸಿ, ‘ಎಲ್ಲ ಜಾಹೀರಾತು ವಿಷಯಗಳನ್ನು ವಲಯ ಮಟ್ಟದಲ್ಲಿ ಜಂಟಿ ಆಯುಕ್ತರು ನಿರ್ವಹಿಸಬೇಕು ಎಂದು 2007ರಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಅವರ ಕಚೇರಿಯಿಂದ ಕಳುಹಿಸಿದ ಇಮೇಲ್ ಮಾಹಿತಿ ಸಂಗ್ರಹಿಸಿ ಮುಖ್ಯಮಂತ್ರಿ ಅವರಿಗೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಆಯುಕ್ತರ ಅಸಮಾಧಾನ: ಆಯುಕ್ತ ಎಂ. ಲಕ್ಷ್ಮಿನಾರಾಯಣ ಉತ್ತರಿಸಿ, ‘ಬಿಬಿಎಂಪಿಯ ನಾಲ್ಕು ಜಾಹೀರಾತು ಫಲಕಗಳಿಗೆ ಅನುಮತಿ ಕೊಡುವಂತೆ ಕನ್ನಡ ಹೋರಾಟಗಾರರೊಬ್ಬರು ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿ ಅನುಮತಿ ನೀಡಲಾಗಿದೆ. ಬಿಬಿಎಂಪಿ ಸಭೆ ಹತ್ತಿರ ಬರುತ್ತಿದ್ದು, ಎಲ್ಲ ಸದಸ್ಯರು ನನ್ನ ಮೇಲೆ ಮುಗಿ ಬೀಳುತ್ತಾರೆ ಎಂದು ಹೇಳಿ ಸಹಾಯಕ ಆಯುಕ್ತರು 2–3 ಬಾರಿ ನನ್ನ ಬಳಿಗೆ ಬಂದಿದ್ದರು’ ಎಂದು ನೆನಪಿಸಿದರು.

‘ಅನಧಿಕೃತ ಜಾಹೀರಾತು ಫಲಕಗಳ  ಬಗ್ಗೆ ಜಂಟಿ ಆಯುಕ್ತರು ಸ್ಪಷ್ಟ ಮಾಹಿತಿ ನೀಡಿಲ್ಲ. ನಗರದಲ್ಲಿ 3 ಸಾವಿರ ಅಧಿಕೃತ ಹಾಗೂ 1074 ಅನಧಿಕೃತ ಫಲಕಗಳು ಇವೆ ಎಂದು ಮುಖ್ಯಮಂತ್ರಿಗೆ ಮಾಹಿತಿ ನೀಡಲಾಗಿದೆ. ಜಾಹೀರಾತುಗಳಿಂದ ₹ 18ರಿಂದ ₹ 32 ಕೋಟಿ ಆದಾಯ ಬರಬಹುದು ಎಂಬ ಉತ್ತರ ನೀಡಲಾಗಿದೆ. ಅಧಿಕಾರಿಗಳು ಪ್ರಯತ್ನಿಸಿದರೆ ₹ 50 ಕೋಟಿ ಆದಾಯ ಬರುತ್ತದೆ. ಆದರೆ, ಪ್ರಯತ್ನ ಮಾಡುತ್ತಿಲ್ಲ’ ಎಂದರು. ಬಳಿಕ ಮಥಾಯ್‌ ಅವರನ್ನು ನಗರಾಭಿವೃದ್ಧಿ ಇಲಾಖೆಗೆ ವಾಪಸ್‌ ಕಳುಹಿಸಲು ನಿರ್ಣಯಿಸಲಾಯಿತು.

ಮುಖ್ಯ ಲೆಕ್ಕಾಧಿಕಾರಿ ವಿರುದ್ಧ ಕ್ರಮಕ್ಕೆ ಪಟ್ಟು
ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್ ಅವರು ಸಭೆಯ ನಿರ್ಣಯವನ್ನು ಓದಲು ಮುಂದಾದರು.   ಆಗ ವಿರೋಧ ಪಕ್ಷದ ನಾಯಕ ಮಂಜುನಾಥ ರೆಡ್ಡಿ ಮಾತನಾಡಿ, ‘ಗುತ್ತಿಗೆದಾರರಿಗೆ ವಿಶೇಷ ಹಣ ಬಿಡುಗಡೆ ಪತ್ರಗಳನ್ನು (ಎಲ್‌ಒಸಿ) ನೀಡಿರುವ ಮುಖ್ಯ ಲೆಕ್ಕಾಧಿಕಾರಿ ಕನಕರಾಜು ಹಾಗೂ ಸಹಾಯಕ ನಾರಾಯಣಸ್ವಾಮಿ ಅವರನ್ನೂ ವಾಪಸ್‌ ಕಳುಹಿಸಲು ನಿರ್ಣಯ ತೆಗೆದುಕೊಳ್ಳಬೇಕು’ ಎಂದು ಪಟ್ಟು ಹಿಡಿದರು.

‘ಒಂದು ಕಣ್ಣಿಗೆ ಸುಣ್ಣ ಹಾಗೂ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸಲಾಗುತ್ತಿದೆ’ ಎಂದು ಜೆಡಿಎಸ್‌ ನಾಯಕ ಪ್ರಕಾಶ್‌ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಮೇಯರ್‌ ಪೀಠದ ಎದುರು ಧರಣಿ ಆರಂಭಿಸಿದರು. ‘ನಿನ್ನೆ ಸಭೆಯಲ್ಲಿ ಗಲಾಟೆ ನಡೆಸಿದ್ದೀರಿ. ಬಳಿಕ ಅದೇ ಅಧಿಕಾರಿಯ ಬಳಿ ₹30 ಲಕ್ಷದ ಚೆಕ್‌ಗೆ ಸಹಿ ಹಾಕಿಸಿಕೊಂಡಿದ್ದೀರಿ’ ಎಂದು ಮೇಯರ್‌ ಶಾಂತಕುಮಾರಿ ಅವರು ಕಾಂಗ್ರೆಸ್‌ನ ರಿಜ್ವಾನ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮೇಯರ್‌ ಹಾಗೂ ರಿಜ್ವಾನ್  ನಡುವೆ ಬಿರುಸಿನ ವಾಗ್ವಾದ ನಡೆಯಿತು. ‘ಮಹಿಳಾ ಮೇಯರ್‌ಗೆ ಅವಮಾನ ಮಾಡಲಾಗುತ್ತಿದೆ’ ಎಂದು ಬಿಜೆಪಿಯ ಕೃಷ್ಣಪ್ಪ ಹಾಗೂ ಡಾ.ರಾಜು ಆರೋಪಿಸಿದರು. ಮೇಯರ್‌ಗೆ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಸದಸ್ಯರು ಮೇಯರ್  ಪೀಠದ ಎದುರು ಧರಣಿ ನಡೆಸಿದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ಪರ–ವಿರೋಧ ಘೋಷಣೆಗಳನ್ನು ಕೂಗಿದರು. ಗದ್ದಲದ ನಡುವೆಯೇ ಹಲವು ವಿಷಯಗಳಿಗೆ ಅನುಮೋದನೆ ನೀಡಲಾಯಿತು.

12 ಬಿಜೆಪಿ ಸದಸ್ಯರ ರಾಜೀನಾಮೆ
ಬೆಂಗಳೂರು: ಬೆಂಗಳೂರು ಮಹಾನಗರ ಯೋಜನಾ ಸಮಿತಿಯ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಅವರು ಏಳು ತಿಂಗಳಿಂದ ಒಂದು ಸಭೆಯನ್ನೂ ನಡೆಸಿಲ್ಲ ಎಂದು ಆರೋಪಿಸಿ  ಸಮಿತಿಗೆ ಬಿಜೆಪಿಯ 12 ಬಿಬಿಎಂಪಿ ಸದಸ್ಯರು ಗುರುವಾರ ರಾಜೀನಾಮೆ ನೀಡಿದರು. ಬಿಜೆಪಿಯ ಸಿ.ಕೆ.ರಾಮಮೂರ್ತಿ ಮಾತನಾಡಿ, ‘ಏಳು ತಿಂಗಳ ಹಿಂದೆ 20 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಮುಖ್ಯಮಂತ್ರಿ ಅವರು ಈವರೆಗೆ ಸಭೆಯನ್ನೇ ನಡೆಸಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇವೆ’ ಎಂದು ಘೋಷಿಸಿದರು.

ಬಿಜೆಪಿಯ ಪಿ.ಎನ್‌.ಸದಾಶಿವ, ‘ಹೈಕೋರ್ಟ್ ನಿರ್ದೇಶನದ ಪ್ರಕಾರ ಸಮಿತಿ ರಚಿಸಲಾಗಿತ್ತು. ಸಭೆ ನಡೆಸದ ಕಾರಣ ಯೋಜನೆ ರೂಪಿಸಲು ಸಾಧ್ಯವಾಗಿಲ್ಲ. ನೀಲನಕ್ಷೆ ರೂಪಿಸದೆ ನಾವೆಲ್ಲ ನಿರುದ್ಯೋಗಿಗಳಾಗಿದ್ದೇವೆ’ ಎಂದು ಅಳಲು ತೋಡಿಕೊಂಡರು.
ವಿರೋಧ ಪಕ್ಷದ ನಾಯಕ ಮಂಜುನಾಥ ರೆಡ್ಡಿ ಮಾತನಾಡಿ, ಪ್ರಚಾರಕ್ಕಾಗಿ ಬಿಜೆಪಿ ಸದಸ್ಯರು ರಾಜೀನಾಮೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಎಂ.ಕೆ.ಗುಣಶೇಖರ್‌, ‘ಮುಖ್ಯಮಂತ್ರಿ ಅವರು ಸದ್ಯದಲ್ಲೇ ಸಭೆ ನಡೆಸಲಿದ್ದಾರೆ. ಈಗ ರಾಜೀನಾಮೆ ನೀಡಬೇಡಿ’ ಎಂದು ಮನವಿ ಮಾಡಿದರು. ‘ನೀವು ಸರ್ಕಾರದ ಏಜೆಂಟಾ’ ಎಂದು ಬಿಜೆಪಿಯ ಗಂಗಭೈರಯ್ಯ ಕೆಣಕಿದರು. ಆಗ ಸಭೆಯಲ್ಲಿ ಗದ್ದಲ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT