ADVERTISEMENT

ಅವರು ಬರೆದಿದ್ದಕ್ಕಿಂತ ಹೇಳಿದ್ದೇ ಸೊಗಸು

ಪುತ್ರಿ ತಾರಿಣಿ ಚಿದಾನಂದ ಅವರ ಕಣ್ಣಲ್ಲಿ ಕುವೆಂಪು ಜ್ಞಾಪಕ ಚಿತ್ರಶಾಲೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2016, 20:20 IST
Last Updated 25 ಸೆಪ್ಟೆಂಬರ್ 2016, 20:20 IST
‘ಕುವೆಂಪು ಕಥನ ಕೌತುಕ’ ಕೃತಿ ಬಿಡುಗಡೆಗೊಳಿಸಿದ ದೇವೇಂದ್ರ ಬೆಳೆಯೂರು ಅವರು ಪ್ರತಿಯನ್ನು  ತಾರಿಣಿ ಚಿದಾನಂದ ಅವರಿಗೆ ನೀಡಿದರು. ನಾಗರಾಜ ಹೆಗಡೆ ಅಪಗಾಲ ಮತ್ತು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಇದ್ದರು –ಪ್ರಜಾವಾಣಿ ಚಿತ್ರ
‘ಕುವೆಂಪು ಕಥನ ಕೌತುಕ’ ಕೃತಿ ಬಿಡುಗಡೆಗೊಳಿಸಿದ ದೇವೇಂದ್ರ ಬೆಳೆಯೂರು ಅವರು ಪ್ರತಿಯನ್ನು ತಾರಿಣಿ ಚಿದಾನಂದ ಅವರಿಗೆ ನೀಡಿದರು. ನಾಗರಾಜ ಹೆಗಡೆ ಅಪಗಾಲ ಮತ್ತು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನೀನು ಮಲೆನಾಡಿನ ಚಿತ್ರಗಳನ್ನು ಮಾತಿನಲ್ಲಿ ಕಟ್ಟಿಕೊಟ್ಟ ಹಾಗೆ ಕೃತಿಯಲ್ಲಿ ಹೇಳಿಲ್ಲ’ ಎಂದು ಎ.ಆರ್. ಕೃಷ್ಣಶಾಸ್ತ್ರಿಯವರು ಅಪ್ಪನಿಗೆ ಹೇಳಿದ್ದರು. ನನಗೂ ಅವರ ‘ನೆನಪಿನ ದೋಣಿ’ ಓದಿದಾಗ ಹಾಗೆ ಅನ್ನಿಸಿತು’ ಎಂದು ಕುವೆಂಪು ಅವರ ಪುತ್ರಿ, ಲೇಖಕಿ ತಾರಿಣಿ ಚಿದಾನಂದ ಅವರು ನೆನಪಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಅಭಿನವ ಪ್ರಕಾಶನ ಮತ್ತು ಕನ್ನಡ ಜನಶಕ್ತಿ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ‘ಕುವೆಂಪು ಕಥನ ಕೌತುಕ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವೆಲ್ಲ ಒಟ್ಟಾಗಿ ಸೇರುತ್ತಿದ್ದಾಗ ಅಪ್ಪ ಕೆಲವು ನೆನಪುಗಳನ್ನು ಹೇಳುತ್ತಿದ್ದರು. ಅವರು ವಾಸವಾಗಿದ್ದ ಸಣ್ಣ ಕೊಠ ಡಿಯನ್ನು ಕೊಳಕಾಗಿ ಇಟ್ಟುಕೊಂಡಿದ್ದು, ರಾತ್ರಿ ತಿಗಣೆಗಳು ಬರುತ್ತಿದ್ದುದು, ಅದನ್ನು ಹಿಡಿದು ಕೊಲ್ಲುತ್ತಿದ್ದುದು... ಹೀಗೆ ಅವರು ಒಂದೊಂದಾಗಿ ಘಟನೆ ಹೇಳುತ್ತಿದ್ದರೆ ನಮಗೆ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತಿತ್ತು. ಆದರೆ ಅದನ್ನು ಕೃತಿಯಲ್ಲಿ ಓದಿದಾಗ ಅಷ್ಟು ಪರಿಣಾಮಕಾರಿ ಎನ್ನಿಸಲಿಲ್ಲ’ ಎಂದು ಹೇಳಿದರು.

‘ಅಪ್ಪ ‘ಮಲೆಗಳಲ್ಲಿ ಮದುಮಗಳು’ ಕೃತಿ ರಚಿಸುತ್ತಿದ್ದಾಗ ಒಮ್ಮೆ ಎಷ್ಟೊತ್ತಾದರೂ ಕಾಫಿಗೆ ಬಾರದಿದ್ದನ್ನು ಕಂಡು ಅಮ್ಮ, ‘ಏನು ಕಾಫಿಗೆ ಬರುವುದಿಲ್ಲವೆ?’ ಎಂದಾಗ ಅಪ್ಪ, ‘ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು. ಹಂಡೆ ಸದ್ದಾಗುತ್ತಿದೆ. ಆಮೇಲೆ ಬರುತ್ತೇನೆ’ ಎಂದಿದ್ದರು. ಅದಕ್ಕೆ ಅಮ್ಮ ‘ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು. ನೀವು ಬಂದು ಕಾಫಿ ಕುಡಿದು ಹೋಗಿ’ ಎಂದಿದ್ದರು’ ಎಂದು ನೆನಪು ಕೆದಕಿದರು.

‘ಅದಾದ ಅರ್ಧ ಗಂಟೆಯ ನಂತರ ಕಾಫಿ  ಕುಡಿಯಲು ಬಂದ ಅಪ್ಪನಿಗೆ ಅಮ್ಮ, ‘ಚಿನ್ನಮ್ಮ ತಪ್ಪಿಸಿಕೊಂಡು ಹೋದಳೆ’ ಎಂದು ಕೇಳಿದರು. ಅದಕ್ಕೆ ಅವರು ‘ಹ್ಞೂಂ ಅವಳು ಕ್ಷೇಮವಾಗಿ ಹುಲಿಕಲ್ಲು ನೆತ್ತಿ ಹತ್ತಿದಳು’ ಎಂದು ಉತ್ತರಿಸಿದ್ದರು. ಹೀಗೆ ಮನೆಯಲ್ಲಿ ಅಪ್ಪ ಬರೆದ ಎಲ್ಲಾ ಕೃತಿಗಳ ಬಗ್ಗೆ ಮಾತುಕತೆ ನಡೆಯುತ್ತಿತ್ತು’ ಎಂದು ತಾರಣಿ ಹೇಳಿದಾಗ ಸಭಾಂಗದಲ್ಲಿ ನಗುವಿನ ಸದ್ದು ಆವರಿಸಿತ್ತು.

ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಚಿಂತಕ ದೇವೇಂದ್ರ ಬೆಳೆಯೂರು, ‘ವಿಮರ್ಶಕ ತನ್ನ ಹೊಳಹುಗಳನ್ನು, ಓದುಗ ಕಾಣದ ನೋಟಗಳನ್ನು ಒದಗಿಸುತ್ತಾನೆ ಮತ್ತು ಆ ಮೂಲಕ ಪುನಃ ಓದುವಿಕೆಗೆ, ಚಿಂತನೆಗೆ ಹಚ್ಚಿಸುತ್ತಾನೆ’ ಎಂದು ಅಭಿಪ್ರಾಯಪಟ್ಟರು.

‘ಒಬ್ಬ ವಿಮರ್ಶಕ ಕೃತಿಯ ಬಗ್ಗೆ ಹೇಳುತ್ತಾ ನಮ್ಮ ಸಂಸ್ಕೃತಿ ಮತ್ತು ಬದುಕಿನ ಒಟ್ಟು ನೋಟವನ್ನು ಪ್ರಸ್ತುತ ಪಡಿಸುತ್ತಾನೆ. ಅದಷ್ಟೇ ಅಲ್ಲದೆ ಬದು ಕನ್ನು ಅರ್ಥೈಸಲು ಸಹ ಪ್ರಯತ್ನಿಸು ತ್ತಿರುತ್ತಾರೆ. ಹಾಗಾಗಿ ವಿಮರ್ಶಕ ಕವಿಯಷ್ಟೇ ಶ್ರೇಷ್ಠ’ ಎಂದರು.

‘ಸಾಹಿತ್ಯ ರಸಾಸ್ವಾದವನ್ನು ಬೇರೆ ಬೇರೆ ರೀತಿಯಲ್ಲಿ ಗ್ರಹಿಸಲು ಓದುಗನಿಗೆ ಅವಕಾಶ ನೀಡದೆ ಒಂದು ಸಾಹಿತ್ಯ ಸ್ವಾದ ಒಂದು ಚೌಕಟ್ಟಿನಲ್ಲಿಯೇ ಇರಬೇಕು ಎಂದು ಈಗಿನ ಶೈಕ್ಷಣಿಕ ಪದ್ಧತಿಗಳು ಒತ್ತಡ ಹೇರುತ್ತಿವೆ’ ಎಂದು  ಆರೋಪಿಸಿದರು.

‘ಬಹುಮುಖಿ ಮತ್ತು ಏಕಮುಖಿ ಸ್ವರೂಪದ ಬಗ್ಗೆ ಕುವೆಂಪು ಅವರಿಗೆ ಸ್ಪಷ್ಟತೆ ಇತ್ತು. ಬಹುಮುಖಿಯಾಗಿದ್ದು ಕೆಲವೊಂದು ವಿಚಾರದಲ್ಲಿ ಏಕಮುಖಿ ಯಾಗಬೇಕಾದ ಮತ್ತು ಏಕಮುಖಿಯಾಗಿದ್ದಾಗ ಬಹುಮುಖಿಯ ಅಸ್ಮಿತೆ ಕಾಪಾಡಿಕೊಳ್ಳುವ ಅವಶ್ಯಕತೆ ಇದೆ. ಅದನ್ನು ಈಗಿನವರು ತಿಳಿಯಬೇಕು’ ಎಂದರು.

ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ‘ಒಬ್ಬ ಲೇಖಕನ ಕಥೆ, ಕಾದಂಬರಿ, ಕವಿತೆ ಎಲ್ಲವನ್ನು ಬಿಡಿ ಬಿಡಿಯಾಗಿ ಕಾಣುವ ಪ್ರಕ್ರಿಯೆ ನಮ್ಮಲ್ಲಿದೆ. ಆದರೆ ಅದು ತಪ್ಪು. ಒಬ್ಬ ಲೇಖಕನ ಎಲ್ಲಾ ಕೃತಿಗಳನ್ನು ಒಟ್ಟಾರೆಯಾಗಿ ನೋಡಿದಾಗ ಮಾತ್ರ ಲೇಖಕನನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯ’ ಎಂದು ಹೇಳಿದರು.

ಕವಿ ನಾಗರಾಜ ಹೆಗಡೆ ಅಪಗಾಲ ಅವರು ‘ಕುವೆಂಪು ಕಥನ ಕೌತುಕ’ ಕೃತಿಯನ್ನು ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.