ADVERTISEMENT

ಆಟಗಾರರೊಂದಿಗೆ ಮಕ್ಕಳ ಖುಷಿಯ ಕ್ಷಣ

ಸ್ಮೈಲ್‌ ಫೌಂಡೇಷನ್‌ನ ‘ಮಿಷನ್‌ ಎಜುಕೇಷನ್‌’ ಅಭಿಯಾನಕ್ಕೆ ಬಿಎಫ್‌ಸಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 19:31 IST
Last Updated 19 ಸೆಪ್ಟೆಂಬರ್ 2014, 19:31 IST

ಬೆಂಗಳೂರು: ಬಡ ಹಾಗೂ ಅಸ­ಹಾಯಕ ಮಕ್ಕಳಿಗೆ ಶಿಕ್ಷಣ ನೀಡಲು ಸ್ವಯಂ ಸೇವಾ ಸಂಸ್ಥೆ ಸ್ಮೈಲ್‌ ಫೌಂಡೇ­ಷನ್‌ ನಡೆಸುತ್ತಿರುವ ‘ಮಿಷನ್‌ ಎಜು­ಕೇಷನ್‌’ ಆಂದೋಲನಕ್ಕೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಬೆಂಬಲ ಪ್ರಕಟಿಸಿದೆ.

ಈ ಆಂದೋಲನದ ಅಂಗವಾಗಿ ಬಿಎಫ್‌ಸಿ ತಂಡದ ಆಟಗಾರರು ಅಶೋಕ­ನಗರದ ಫುಟ್‌ಬಾಲ್‌ ಕ್ರೀಡಾಂಗಣ­ದಲ್ಲಿ ಶುಕ್ರವಾರ ಫೌಂಡೇಷನ್‌ನ ವಿದ್ಯಾರ್ಥಿಗಳೊಂದಿಗೆ ಫುಟ್‌ಬಾಲ್‌ ಆಡುವ ಮೂಲಕ ತಮ್ಮ ಬೆಂಬಲ ಸೂಚಿಸಿದರು. ಅಲ್ಲದೇ ಮಕ್ಕ­ಳಿಗೆ ಫುಟ್‌ಬಾಲ್‌ ಆಟದ ಕೌಶಲ ಹೇಳಿಕೊಟ್ಟರು.

‘ಫುಟ್‌ಬಾಲ್‌ ಆಟದಲ್ಲಿ ಗೆಲ್ಲಲು ಗೋಲು ಗಳಿಸಬೇಕು. ಹಾಗೇ ಜೀವನ­ದಲ್ಲಿ ಗೆಲ್ಲಲು ಒಂದು ಗುರಿ ಇರಬೇಕು. ಆ ಗುರಿ ಸಾಧಿಸಲು ಶಿಕ್ಷಣ ನೀಡಬೇಕು. ಪ್ರತಿ ಮಗು ಶಾಲೆ ಹೋಗಬೇಕು. ಅದಕ್ಕಾಗಿ ಸಮಾಜ ಆ ಮಗುವಿಗೆ ಸಹಾಯ ಮಾಡಬೇಕು. ಸ್ಮೈಲ್‌ ಫೌಂಡೇಷನ್‌ ಈಗ ಕೈಗೆತ್ತಿಕೊಂಡಿರುವ ‘ಮಿಷನ್‌ ಎಜುಕೇಷನ್‌’ ಆಂದೋಲನ ಉತ್ತಮ ಯೋಜನೆ’ ಎಂದು ಬಿಎಫ್‌ಸಿ ತಂಡದ ಮುಖ್ಯ ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ತಿಳಿಸಿದರು.

ಎಕ್ಸಲೆಂಟ್‌ ಇಂಗ್ಲಿಷ್‌ ಸ್ಕೂಲ್‌ನ 12 ಮಕ್ಕಳು ಬಿಎಫ್‌ಸಿ ಆಟಗಾರರೊಂದಿಗೆ ಸಂವಾದ ನಡೆಸಿದರು. ‘ಮೊದಲು ಶಿಕ್ಷಣ. ಆಮೇಲೆ ಆಟ’ ಎಂದು ಆಟಗಾರರು ಮಕ್ಕಳಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಮಿಡ್‌ಫೀಲ್ಡರ್‌ ಡರೆನ್‌ ಕಾಲ್ಡಿರಾ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.

ಫೌಂಡೇಷನ್‌ನ ಮುಖ್ಯ ಕಾರ್ಯ­ನಿರ್ವಾಹಕ ವಿಕ್ರಂ ಸಿಂಗ್‌ ವರ್ಮ, ‘ಬಡತನ, ಅಜ್ಞಾನ ಮತ್ತು ಸಂಕಷ್ಟ­ದಿಂದ ಹೊರಬರಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಬಡಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಫೌಂಡೇ­ಷನ್‌ನ ಪ್ರಮುಖ ಉದ್ದೇಶ. ಈಗ ಫುಟ್‌ಬಾಲ್‌ ತಂಡವು ಈ ಆಂದೋ­ಲನದಲ್ಲಿ ಕೈಜೋಡಿಸು­ತ್ತಿರುವುದು ಸಂತೋಷದ ವಿಚಾರ’ ಎಂದರು.

ದೇಶದಾದ್ಯಂತ 19 ಸಾವಿರ ಮಕ್ಕಳಿಗೆ ನೀಡಲಾಗುತ್ತಿರುವ ಶಿಕ್ಷಣ­ವನ್ನು ಮುಂದುವರಿಸಿಕೊಂಡು ಹೋಗುವ ಗುರಿಯನ್ನು ಹೊಂದ­ಲಾಗಿದೆ. ಕರ್ನಾಟಕದಲ್ಲಿ 2700 ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

‘ನನ್ನ ತಂದೆ ಫಯಾಜ್‌ ಪಾಷಾ ಲಾರಿ ಚಾಲಕ. ನಾನು ಎಕ್ಸಲೆಂಟ್‌ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಓದುತ್ತಿದ್ದೇನೆ. ಫುಟ್‌ಬಾಲ್‌ ಆಟವೆಂದರೆ ನನಗೆ ತುಂಬಾ ಇಷ್ಟ. ಆಟಗಾರರೊಂದಿಗೆ ಮಾತನಾಡಲು ಸಿಕ್ಕಿದ ಅವಕಾಶ ಸಂತೋಷ ಉಂಟು ಮಾಡಿದೆ. ಇದು ಸಾಧ್ಯವಾಗಿದ್ದು ಸ್ಮೈಲ್‌ ಫೌಂಡೇ­ಷನ್‌ನಿಂದ’ ಎಂದು ಬಿಸ್ಮಿಲ್ಲಾನಗರದ ಎಫ್‌.ಮುಸ್ಕಾನ್‌ ನುಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.