ADVERTISEMENT

ಆರು ಮಂದಿಯನ್ನು ನೆಲಕ್ಕುರುಳಿಸಿದ ಬೀದಿ ನಾಯಿಗಳು!

* ಎಂ.ಎಸ್.ರಾಮಯ್ಯ ಆಸ್ಪತ್ರೆ ಬಳಿ ಬೀದಿ ನಾಯಿಗಳ ಹಾವಳಿ * ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2017, 17:58 IST
Last Updated 16 ಆಗಸ್ಟ್ 2017, 17:58 IST
ಆರು ಮಂದಿಯನ್ನು ನೆಲಕ್ಕುರುಳಿಸಿದ ಬೀದಿ ನಾಯಿಗಳು!
ಆರು ಮಂದಿಯನ್ನು ನೆಲಕ್ಕುರುಳಿಸಿದ ಬೀದಿ ನಾಯಿಗಳು!   

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳು ಮತ್ತೊಮ್ಮೆ ತಮ್ಮ ಅಟ್ಡಹಾಸ ಮೆರೆದಿದ್ದು, ಎಂ.ಎಸ್.ರಾಮಯ್ಯ ಕಾಲೇಜು ಸುತ್ತಮುತ್ತಲ ಪ್ರದೇಶಗಳಲ್ಲೇ ಆರು ಮಂದಿಯ ಮೇಲೆ ದಾಳಿ ನಡೆಸಿವೆ.

ನಾಯಿಗಳು ದಾರಿಹೋಕರ ಮೇಲೆರಗುವ ದೃಶ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆ ದೃಶ್ಯಗಳು ವೈರಲ್ ಆಗಿವೆ.

‘ಒಂದು ತಿಂಗಳಿನಿಂದ ಈ ಭಾಗದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ದೂರು ಕೊಟ್ಟರೂ ಬಿಬಿಎಂಪಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಏನಾಯಿತು ಎಂದು ವಿಚಾರಿಸುವ ಕನಿಷ್ಠ ಸೌಜನ್ಯವೂ ಇಲ್ಲದ ಇಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ’ ಎಂದು ‌ಎಂ.ಎಸ್.ರಾಮಯ್ಯ ಕಾಲೇಜು ಸುತ್ತಮುತ್ತಲ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಂಗಳವಾರ ಬೆಳಿಗ್ಗೆ 6.30ರ ಸುಮಾರಿಗೆ 15ಕ್ಕೂ ಹೆಚ್ಚು ನಾಯಿಗಳು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಜ್ಯೋತಿ ಎಂಬುವರ ಮೇಲೆ ದಾಳಿ ನಡೆಸುತ್ತವೆ. ಇದರಿಂದ ಗಾಬರಿಗೊಂಡ ಜ್ಯೋತಿ, ಅವುಗಳನ್ನು ಓಡಿಸಿ ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ. ಈ ಹಂತದಲ್ಲಿ ಕೆಲ ನಾಯಿಗಳು ಓಡಿದರೆ, ಐದಾರು ನಾಯಿಗಳು ಬಟ್ಟೆ ಹಿಡಿದು ಎಳೆದಾಡುತ್ತವೆ. ಇದರಿಂದ ಅವರು ಕೆಳಗೆ ಬಿದ್ದಾಗ ಕಾಲಿಗೆ ಕಚ್ಚಿ ಓಡುತ್ತವೆ.. ಈ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜ್ಯೋತಿ ಅವರನ್ನು ಕಚ್ಚಿ ಗಾಯಗೊಳಿಸಿದ ಬಳಿಕವೂ ಅಲ್ಲೇ ಸುತ್ತಾಡಿಕೊಂಡಿದ್ದ ನಾಯಿಗಳು, ಬೈಕ್‌ನಲ್ಲಿ ಹೋಗುವವರನ್ನು ಅಟ್ಟಿಸಿಕೊಂಡು ದಾಳಿಗೆ ಯತ್ನಿಸಿವೆ.

ಬೆಳಿಗ್ಗೆ 7.06ಕ್ಕೆ ಅದೇ ರಸ್ತೆಯಲ್ಲಿ ನಡೆದು ಬಂದ ಮತ್ತೊಬ್ಬ ವ್ಯಕ್ತಿಯ ಮೇಲೂ ಎರಗಿದ ನಾಯಿಗಳು, ಅವರನ್ನೂ ಕೆಳಗೆ ಬೀಳಿಸಿ ಕಚ್ಚಲು ಯತ್ನಿಸಿವೆ. ಈ ಹಂತದಲ್ಲಿ ತಪ್ಪಿಸಿಕೊಂಡ ಅವರು, ಕಲ್ಲು ತೂರಿ ಅವುಗಳನ್ನು ಓಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಜ್ಯೋತಿ, ‘ಸೋಮವಾರ ಸಂಜೆ ನನ್ನ ಅಕ್ಕನನ್ನು ಕಚ್ಚಿದ್ದ ಅವೇ ನಾಯಿಗಳು, ಮರುದಿನ ಬೆಳಿಗ್ಗೆ ನನ್ನ ಮೇಲೂ ದಾಳಿ ನಡೆಸಿದವು. ಎಲ್ಲ ದಿಕ್ಕುಗಳಿಂದಲೂ ಹಿಂಡು ಹಿಂಡಾಗಿ ಬಂದು ಮೈಮೇಲೆ ಎರಗಿದವು. ಹೀಗಾಗಿ, ಯಾವ ರೀತಿಯಲ್ಲೂ ಅವುಗಳಿಂದ ತಪ್ಪಿಸಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಬಲಗಾಲಿಗೆ ಒಂದು ನಾಯಿ ಕಚ್ಚಿದ್ದು, ಚಿಕಿತ್ಸೆ ಪಡೆದಿದ್ದೇನೆ' ಎಂದು ದುಃಖತಪ್ತರಾದರು.

‘40ಕ್ಕೂ ಹೆಚ್ಚು ನಾಯಿಗಳ ಹಿಂಡು ಈ ಪ್ರದೇಶದಲ್ಲಿ ಸದಾ ಓಡಾಡಿಕೊಂಡಿರುತ್ತವೆ. ನಾವು ರಕ್ಷಣೆಗೆ ಕೋಲು ಅಥವಾ ದೊಣ್ಣೆ ಹಿಡಿದುಕೊಂಡೇ ಮನೆಯಿಂದ ಹೊರ ಹೋಗಬೇಕಾಗಿದೆ. ಸೋಮವಾರ ಸಂಜೆಯಿಂದ ಆರು ಮಂದಿಯ ಮೇಲೆ ದಾಳಿ ನಡೆಸಿವೆ’ ಎಂದು ಸ್ಥಳೀಯ ನಿವಾಸಿ ಸರವಣ ಹೇಳಿದರು.

ಹೆಚ್ಚುವರಿ ಕ್ರಮಕ್ಕೆ ನಾನಾ ಅಡ್ಡಿ
‘ಬೀದಿ ನಾಯಿಗಳನ್ನು ಕರೆದೊಯ್ದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುಲಾಗುತ್ತಿದೆ. ಮೂರ್ನಾಲ್ಕು ದಿನಗಳ ಆರೈಕೆ ಬಳಿಕ ಮತ್ತೆ ಅದೇ ಪ್ರದೇಶಕ್ಕೆ ಅವುಗಳನ್ನು ಬಿಡುಲಾಗುತ್ತಿದೆ. ಇಷ್ಟು ಬಿಟ್ಟು ಪಾಲಿಕೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದುವರಿದು, ಏನಾದರೂ ಹೆಚ್ಚುವರಿ ಮುಂಜಾಗ್ರತೆ ತೋರಲು ಹೋದರೆ ಪ್ರಾಣಿ ದಯಾ ಸಂಘದ ಸದಸ್ಯರು ಪಾಲಿಕೆಯನ್ನೇ ದೂರುತ್ತಾರೆ’ ಎಂದು ಮೇಯರ್ ಜಿ.ಪದ್ಮಾವತಿ ಹೇಳಿದರು.

ಕಿವಿ ಕತ್ತರಿಸಿದ ನಾಯಿಯೇ ಇಲ್ಲ:
‘ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳ ಕಿವಿಗಳನ್ನು ಇಂಗ್ಲಿಷ್‌ನ ‘ವಿ’ ಆಕಾರದಲ್ಲಿ ಕತ್ತರಿಸಬೇಕು ಎಂಬುದು ನಿಯಮ. ಆದರೆ, ನಗರದ ಯಾವುದೇ ಬಡಾವಣೆಯಲ್ಲಿ ಸುತ್ತಾಡಿದರೂ ಹೀಗೆ ಕಿವಿ ಕತ್ತರಿಸಿಕೊಂಡ ನಾಯಿಗಳು ಸಿಗುವುದಿಲ್ಲ. ಹೀಗಿರುವಾಗ, ಪಾಲಿಕೆ ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸುತ್ತಿದೆ ಎಂಬುದನ್ನು ನಂಬುವುದಾದರೂ ಹೇಗೆ’ ಎಂದು ಬಿಇಎಲ್ ವೃತ್ತದ ಹಿರಿಯ ನಾಗರಿಕ ಸದಾಶಿವಯ್ಯ ಪ್ರಶ್ನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.