ADVERTISEMENT

ಆರ್‌ಟಿಇ ಅಡಿ ಪ್ರವೇಶ ನೀಡಿ; ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 18 ಮೇ 2017, 20:13 IST
Last Updated 18 ಮೇ 2017, 20:13 IST

ಬೆಂಗಳೂರು: ‘ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ ನಮಗೆ ಪ್ರವೇಶ ನಿರಾಕರಿಸಲಾಗಿದೆ’ ಎಂದು ಆಕ್ಷೇಪಿಸಿದ್ದ  24 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ‘ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಸ್ಕೂಲ್‌’ಗೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಆರು ವರ್ಷದ ಬಾಲಕಿ ಪ್ರತೀಕ್ಷಾ ಕೆ.ಗೌಡ ಸೇರಿದಂತೆ ಒಟ್ಟು 24 ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ. ಮನೋಹರ್‌ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠವು ಗುರುವಾರ ವಿಚಾರಣೆ ನಡೆಸಿ, ಮಧ್ಯಂತರ ಆದೇಶ ನೀಡಿದೆ.

‘ಆರ್ಥಿಕವಾಗಿ ಹಿಂದುಳಿದ ನಾವು  ಈ ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದೆವು. ಆರ್‌ಟಿಇ ಕೋಟಾದಡಿ ನಮಗೆ ಸೀಟು ಮಂಜೂರಾಗಿತ್ತು. ಆದರೆ, ಶಾಲಾ ಮುಖ್ಯಸ್ಥರು ನಮ್ಮನ್ನು ಶಾಲೆಯ ಆವರಣದೊಳಗೇ ಬಿಟ್ಟುಕೊಳ್ಳಲಿಲ್ಲ. ಗೇಟಿಗೆ ಬೀಗ ಹಾಕಿಸಿದ್ದರು. ಅರ್ಜಿ ಪರಿಶೀಲನೆ ನೆಪ ಹೇಳಿ ಸಾಗಹಾಕಿದ್ದರು’ ಎಂದು ರಿಟ್‌ ಅರ್ಜಿಯಲ್ಲಿ ವಿವರಿಸಿದ್ದಾರೆ.

ADVERTISEMENT

ಪ್ರತಿವಾದಿಗಳಾದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಹಾಗೂ ಬೆಂಗಳೂರು ನಗರ ಉಪ ನಿರ್ದೇಶಕರಿಗೆ ತುರ್ತು ನೋಟಿಸ್ ಜಾರಿ ಮಾಡಲು ಆದೇಶಿಸಲಾಗಿದೆ.

ಅರ್ಜಿದಾರರ ಪರ ವಕೀಲ ಕೆ.ಅಭಿಷೇಕ್ ಮತ್ತು ಎಂ.ಆರ್.ವರುಣ್‌ ಹಾಜರಾಗಿದ್ದರು.

ಸಚಿವ ಡಿ.ಕೆ.ಶಿವಕುಮಾರ್‌ ಅಧ್ಯಕ್ಷ: ವೆಬ್‌ಸೈಟ್‌ ಮಾಹಿತಿ ಪ್ರಕಾರ, ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದ ಐಡಿಯಲ್‌  ಟೌನ್‌ಶಿಪ್‌ನಲ್ಲಿರುವ  ‘ನ್ಯಾಷನಲ್‌ ಹಿಲ್‌ ವ್ಯೂ ಪಬ್ಲಿಕ್‌ ಸ್ಕೂಲ್‌’ ಅಧ್ಯಕ್ಷರು ಇಂಧನ ಸಚಿವ ಡಿ.ಕೆ.ಶಿವಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.