ADVERTISEMENT

ಇಂದಿರಾ ಕ್ಯಾಂಟೀನ್‌ಗೆ ಬಿಬಿಸಿ ನ್ಯೂಸ್‌ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ಇಂದಿರಾ ಕ್ಯಾಂಟೀನ್‌ಗೆ ಬಿಬಿಸಿ ನ್ಯೂಸ್‌ ಮೆಚ್ಚುಗೆ
ಇಂದಿರಾ ಕ್ಯಾಂಟೀನ್‌ಗೆ ಬಿಬಿಸಿ ನ್ಯೂಸ್‌ ಮೆಚ್ಚುಗೆ   

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್’ ಕುರಿತು ಬಿಬಿಸಿ ನ್ಯೂಸ್‌ ವರದಿ ಮಾಡಿದ್ದು, ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಬಿಬಿಸಿಯ ಗೀತಾ ಪಾಂಡೆ ಅವರು ಸಿಟಿ ಮಾರುಕಟ್ಟೆಯಲ್ಲಿರುವ ಕ್ಯಾಂಟೀನ್‌ನಲ್ಲಿ ಟೋಕನ್‌ ಪಡೆದು ಉಪಾಹಾರ ಹಾಗೂ ಊಟದ ರುಚಿಯನ್ನು ಸವಿದಿದ್ದಾರೆ.

ತಮಿಳುನಾಡಿನ ಅಮ್ಮ ಕ್ಯಾಂಟೀನ್‌ ಮಾದರಿಯಲ್ಲೇ ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್‌ ಅನ್ನು ಆಗಸ್ಟ್‌ 16ರಂದು ಆರಂಭಿಸಲಾಯಿತು. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಉದ್ಘಾಟಿಸಿದ್ದರು. ತಾಜಾ, ಬಿಸಿ ಹಾಗೂ ಸುವಾಸನೆಭರಿತ ತಿಂಡಿ, ಊಟವನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ತಿಂಡಿಗೆ ₹5, ಊಟಕ್ಕೆ ₹10 ನಿಗದಿಪಡಿಸಲಾಗಿದೆ.

ADVERTISEMENT

ಬಡವರು, ದಿನಗೂಲಿ ನೌಕರರು, ಚಾಲಕರು, ಭದ್ರತಾ ಸಿಬ್ಬಂದಿ, ಭಿಕ್ಷುಕರು –ಹೀಗೆ ಅನೇಕ ಮಂದಿ ಕ್ಯಾಂಟೀನ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅನೇಕರ ಹಸಿವು ನೀಗಿಸುವಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದು ವರದಿ ಮಾಡಲಾಗಿದೆ.

‘ಕಳೆದ ವರ್ಷ ಅಮ್ಮ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದೆ. ಊಟ ಚೆನ್ನಾಗಿತ್ತು. ಇಂದಿರಾ ಕ್ಯಾಂಟೀನ್‌ನ ಊಟ ಅದಕ್ಕಿಂತಲೂ ಚೆನ್ನಾಗಿದೆ’ ಎಂದು ಗೀತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿ 152 ಕ್ಯಾಂಟೀನ್‌ಗಳನ್ನು ತೆರೆಯಲಾಗಿದ್ದು, ನಿತ್ಯ 2 ಲಕ್ಷ ಮಂದಿಗೆ ತಿಂಡಿ, ಊಟ ಪೂರೈಸಲಾಗುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ಎಲ್ಲ ವಾರ್ಡ್‌ಗಳಲ್ಲೂ ಕ್ಯಾಂಟೀನ್‌ ಆರಂಭಿಸುತ್ತೇವೆ. ಬಳಿಕ ನಿತ್ಯ 3 ಲಕ್ಷ ಮಂದಿ ತಿಂಡಿ, ಊಟ ಸೇವಿಸಬಹುದು’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ ರಾಜನ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಕರ್ನಾಟಕ ಸರ್ಕಾರದ ಟ್ವಿಟರ್‌ ಖಾತೆಗೆ ಮರು ಟ್ವೀಟ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.