ADVERTISEMENT

‘ಇಂದಿರಾ ಕ್ಯಾಂಟೀನ್‌ ಹೆಸರಲ್ಲಿ ₹ 65 ಕೋಟಿ ಲೂಟಿ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:57 IST
Last Updated 20 ಜುಲೈ 2017, 19:57 IST

ಬೆಂಗಳೂರು:  ‘ಇಂದಿರಾ ಕ್ಯಾಂಟೀನ್‌ ಹೆಸರಿನಲ್ಲಿ ₹ 65 ಕೋಟಿ ಲೂಟಿಯಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ವಿರುದ್ಧ ಲೋಕಾಯುಕ್ತ ಮತ್ತು ಎಸಿಬಿಗೆ ದೂರು ನೀಡಲಾಗಿದೆ’ ಎಂದು ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ ಎನ್‌. ಆರ್‌. ರಮೇಶ್ ತಿಳಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಯ ಪ್ರತಿಯೊಂದು ಅಡುಗೆ ಮನೆಯ ನಿರ್ಮಾಣದ ಹೆಸರಿನಲ್ಲಿ ₹ 39 ಲಕ್ಷ ಹಾಗೂ ಪ್ರತಿಯೊಂದು ಕ್ಯಾಂಟೀನ್‌ ನಿರ್ಮಾಣದ ನೆಪದಲ್ಲಿ ₹ 18 ಲಕ್ಷ ವಂಚನೆ ಮಾಡಲಾಗುತ್ತಿದೆ’ ಎಂದು ದೂರಿದರು.

‘ಪ್ರತಿ ಕ್ಯಾಂಟೀನ್‌ ನಿರ್ಮಾಣಕ್ಕೆ ₹ 28.50 ಲಕ್ಷ ಬಿಡುಗಡೆ ಮಾಡಲಾಗಿದೆ. ಕ್ಯಾಂಟೀನ್‌ ವಿಸ್ತೀರ್ಣ 900 ಚದರ ಅಡಿ. ಪ್ರೀ– ಕಾಸ್ಟ್‌ (ಮೊದಲೇ ಅಚ್ಚು ಹಾಕುವ ತಾಂತ್ರಿಕತೆ) ಕಟ್ಟಡ ನಿರ್ಮಾಣಕ್ಕೆ ₹ 2.90 ಲಕ್ಷ ವೆಚ್ಚ ಮಾಡಲು ಬಿಬಿಎಂಪಿ ಹೊರಟಿದೆ. ಇಂತಹ ಕಟ್ಟಡ ನಿರ್ಮಾಣಕ್ಕೆ  ಬೇಕಾಗುವುದು ₹ 95 ಸಾವಿರ ಮಾತ್ರ.  ಪಾಲಿಕೆ ಅಮೃತಶಿಲೆಗಳನ್ನು ಬಳಸಿ ಕ್ಯಾಂಟೀನ್‌ ನಿರ್ಮಾಣ ಮಾಡಲು ಹೊರ ಟಿದೆಯೇ’ ಎಂದು ಅವರು ಪ್ರಶ್ನಿಸಿದರು.
‘ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಇಎಫ್‌ ಇನ್ಫ್ರಾಸ್ಟ್ರಕ್ಚರ್‌ ಇಂಡಿಯಾ ಸಂಸ್ಥೆಗೆ ಕ್ಯಾಂಟೀನ್‌ ನಿರ್ಮಾಣದ ಗುತ್ತಿಗೆ ನೀಡಲಾಗಿದೆ. ಬೆಂಗಳೂರು ಸುತ್ತಮುತ್ತ  ಪ್ರೀ–ಕಾಸ್ಟ್‌ ತಂತ್ರಜ್ಞಾನದ ಕಟ್ಟಡ ನಿರ್ಮಾಣ ಸಂಸ್ಥೆಗಳಿದ್ದರೂ ತಮಿಳುನಾಡಿನ ಸಂಸ್ಥೆಗೆ ಗುತ್ತಿಗೆ ನೀಡಿರುವ ಗುಟ್ಟೇನು’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಇ–ಪ್ರೊಕ್ಯೂರ್‌ಮೆಂಟ್‌ ವಿಧಾನದಲ್ಲಿ  ಟೆಂಡರ್‌ ಆಹ್ವಾನಿಸಿ ಎಲ್ಲ ಸಂಸ್ಥೆ ಗಳಿಗೆ ಮುಕ್ತ ಅವಕಾಶ ನೀಡಬೇಕಿತ್ತು. ಆದರೆ,  ಈ ಗುತ್ತಿಗೆಯನ್ನು ಏಕಪಕ್ಷೀಯವಾಗಿ ನೀಡಲಾಗಿದೆ. ಈ ಮೂಲಕ ಕೆಟಿಪಿಪಿ ಕಾಯ್ದೆಯ ಪಾರದರ್ಶಕ ನಿಯಮಗಳನ್ನು  ಉಲ್ಲಂ ಘಿಸಲಾಗಿದೆ’ ಎಂದು   ಆರೋಪಿಸಿದರು.

‘ಈ ಯೋಜನೆಯನ್ನು ಜಾರಿಗೆ ತರಲೇಬೇಕು ಎಂದು ಹಟ ಹಿಡಿದಿರುವ ಸರ್ಕಾರ, ಉದ್ಯಾನಗಳು, ಆಟದ ಮೈದಾನಗಳು, ಸಿ.ಎ. ನಿವೇಶನಗಳು, ದೇವಸ್ಥಾನದ ಜಾಗಗಳು ಹಾಗೂ ಸ್ಮಶಾನಗಳಲ್ಲಿ ಕ್ಯಾಂಟೀನ್‌ ನಿರ್ಮಿಸುತ್ತಿದೆ. ಇದು ತುಘಲಕ್‌ ಸರ್ಕಾರ’ ಎಂದು ಟೀಕಿಸಿದರು.

‘ಯೋಜನೆಯ ಗುತ್ತಿಗೆ ಪಡೆದಿರುವ ಕೆಇಎಫ್‌ ಸಂಸ್ಥೆಗೆ ರಾಜ್ಯ ಸರ್ಕಾರ 4ಜಿ ಅನ್ವಯ ತೆರಿಗೆ ವಿನಾಯಿತಿ ನೀಡಿದೆ. ಈ ಮೂಲಕ ಸಂಸ್ಥೆಗೆ ರಾಜ್ಯ ಸರ್ಕಾರ ₹ 12 ಕೋಟಿ ಲಾಭ ಮಾಡಿಕೊಟ್ಟಿದೆ. ಇದು ದೇಶದ್ರೋಹದ ಕೆಲಸ’ ಎಂದು ರಮೇಶ್‌ ಆರೋಪಿಸಿದರು.

ಈ ಯೋಜನೆಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆ, ಖರ್ಚು ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು.
-ಎನ್‌.ಆರ್‌. ರಮೇಶ್‌, ಬಿಜೆಪಿ ನಗರ ಜಿಲ್ಲಾ ಘಟಕದ ವಕ್ತಾರ

ಇಂದಿರಾ ಕ್ಯಾಂಟೀನ್‌ ಯೋಜನೆಯೇ ₹100 ಕೋಟಿಯದ್ದು. ಅದರಲ್ಲಿ ₹60 ಕೋಟಿ ಗುಳುಂ ಆಗಿದೆ ಎನ್ನುವ ಸುಳ್ಳುಗಾರರ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ
-ಸಿದ್ದರಾಮಯ್ಯ, ­ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.