ADVERTISEMENT

ಇತಿಹಾಸದ ಯಾವ ವ್ಯಕ್ತಿಯೂ ಪರಿಪೂರ್ಣ ಅಲ್ಲ

‘ಟಿಪ್ಪು ಸುಲ್ತಾನ್‌ ಮತ್ತು ಇತಿಹಾಸದ ಮರುಶೋಧ’ ಗೋಷ್ಠಿಯಲ್ಲಿ ಸಚಿವ ದಿನೇಶ್‌ ಗುಂಡೂರಾವ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2015, 19:46 IST
Last Updated 6 ಡಿಸೆಂಬರ್ 2015, 19:46 IST

ಬೆಂಗಳೂರು: ‘ಟಿಪ್ಪು ಸುಲ್ತಾನ್‌ ಸೇರಿದಂತೆ ಇತಿಹಾಸದ ಯಾವ ವ್ಯಕ್ತಿಯೂ ಪರಿಪೂರ್ಣ ಅಲ್ಲ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಭಾನುವಾರ ನಗರದಲ್ಲಿ ಆಯೋಜಿಸಿದ್ದ ‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ‘ಟಿಪ್ಪು ಸುಲ್ತಾನ್‌ ಮತ್ತು ಇತಿಹಾಸದ ಮರುಶೋಧ’ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

‘ಪ್ರತಿಯೊಬ್ಬರಲ್ಲೂ ಸಕಾರಾತ್ಮಕ, ನಕಾರಾತ್ಮಕ ಅಂಶಗಳು ಇದ್ದೇ ಇರುತ್ತವೆ.  ಆದರೆ ಯಾವುದೋ ಒಂದು ನಕಾರಾತ್ಮಕ ಅಂಶದಿಂದ ಅವರನ್ನು ತಿರಸ್ಕರಿಸುವುದು ಸರಿಯಾಗುವುದಿಲ್ಲ’ ಎಂದರು.

‘ಸಂಗೊಳ್ಳಿ ರಾಯಣ್ಣ, ರಾಣಿ ಕಿತ್ತೂರು ಚೆನ್ನಮ್ಮ ಅವರಂತೆಯೇ ಟಿಪ್ಪು ಸುಲ್ತಾನ್‌ ಕೂಡ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದ. ಹಲವು ವರ್ಷಗಳಿಂದ ಕೆಲವರು ಟಿಪ್ಪು ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಸರ್ಕಾರವೇ ಮುಂದೆ ಬಂದು ಆಚರಿಸಿದೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ನಂಜನಗೂಡು, ಶೃಂಗೇರಿ, ಕೊಲ್ಲೂರು ಮೂಕಾಂಬಿಕೆಗೆ ಹೋದರೆ ಟಿಪ್ಪು ನಮ್ಮ ಊರಿನಲ್ಲಿ ದೇವಸ್ಥಾನ ಕಟ್ಟಿಸಿದ್ದ, ಅದಕ್ಕೆ ಆರ್ಥಿಕ ನೆರವು ನೀಡಿದ್ದ ಎಂದು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ. ಅಂತಹದ್ದರಲ್ಲಿ ಆತ ಹಿಂದೂ  ವಿರೋಧಿಯಾಗಿದ್ದ  ಎಂದು ಆರ್‌ಎಸ್‌ಎಸ್‌, ಬಜರಂಗ ದಳ ಸೇರಿದಂತೆ ಇತರ ಹಿಂದೂ ಸಂಘಟನೆಗಳು ಅಪಪ್ರಚಾರ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

‘ಮರಾಠರು ಕರ್ನಾಟಕದ ಮೇಲೆ ದಾಳಿ ನಡೆಸಿದ್ದರು. ಹಾಗಂತ ಅವರನ್ನು ದೂಷಿಸಲು ಆಗುತ್ತದೆಯೇ. ಅದೇ ರೀತಿ ಟಿಪ್ಪುವಿನಿಂದಲೂ ಕೆಲವೊಂದು ತಪ್ಪುಗಳಾಗಿರಬಹುದು. ಅವುಗಳನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಯಾವುದೋ ಒಂದು ವಿಷಯವನ್ನು ಮುಂದಿಟ್ಟುಕೊಂಡು ಆತನ ಕೊಡುಗೆಯನ್ನು ಅಲ್ಲಗಳೆಯಲು ಆಗುತ್ತದೆಯೇ’ ಎಂದರು.

‘ರಾಕೆಟ್‌ ತಯಾರಿಸುವ ಕಾರ್ಯಕ್ಕೆ ಮೊದಲು ಚಾಲನೆ ನೀಡಿದ್ದು ಟಿಪ್ಪು. ಆತನ ಮಂತ್ರಿಮಂಡಲದಲ್ಲಿ ಬಹುತೇಕ ಮಂತ್ರಿಗಳು ಹಿಂದೂಗಳಾಗಿದ್ದರು. ಜೊತೆಗೆ ಭೂಸುಧಾರಣೆಗೂ ಶ್ರಮಿಸಿದ್ದ’ ಎಂದು ಸಾಧನೆಗಳ ಪಟ್ಟಿ ವಿವರಿಸಿದರು.

‘ಮುಸ್ಲಿಮರಿಗೆ ಸರ್ಕಾರ ಏನೇ ಮಾಡಿದರೂ ಅವರನ್ನು ಓಲೈಸಲಾಗುತ್ತಿದೆ ಎಂದು ಹೇಳಲಾಗುತ್ತದೆ. ಆದರೆ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಯಾರನ್ನೂ ಓಲೈಸಲು ಪ್ರಯತ್ನಿಸಿಲ್ಲ. ಆ ವರ್ಗದವರ ಬಹುದಿನಗಳ ಬೇಡಿಕೆ ಇತ್ತು. ಸರ್ಕಾರ ಅದನ್ನು ಈಡೇರಿಸಿದೆ. ಕೇವಲ ರಾಜಕೀಯ ಕಾರಣಕ್ಕೆ ಕೆಲವು ಹಿಂದೂ ಸಂಘಟನೆಗಳು ಜಯಂತಿಯನ್ನು ವಿರೋಧಿಸಿದವು’ ಎಂದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ತೇಜಸ್ವಿ ಸೂರ್ಯ ಮಾತನಾಡಿ, ‘ಟಿಪ್ಪು ಸುಲ್ತಾನ್‌ ಅನೇಕ ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದ. ಸಾವಿರಾರು ಹಿಂದೂಗಳನ್ನು ಮತಾಂತರ ಮಾಡಿದ್ದ. ಭಾರತದ ಮೇಲೆ ದಾಳಿ ಮಾಡುವಂತೆ ಆಫ್ಘಾನಿಸ್ತಾನದ ದೊರೆಗೆ ಪತ್ರ ಬರೆದಿರುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ’ ಎಂದರು.

‘ಪಾರ್ಸಿಯನ್ನು ಆಡಳಿತ ಭಾಷೆಯಾಗಿ ಜಾರಿಗೊಳಿಸಿದ್ದ. ಮೈಸೂರಿನ ಹೆಸರನ್ನು ನಜರ್‌ಬಾದ್‌ ಎಂದು ಮರುನಾಮಕರಣ ಮಾಡಿದ್ದ. ಹೀಗಿರುವಾಗ ಆತನ ಜಯಂತಿ ಆಚರಿಸುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದ ನಿರ್ದೇಶಕ ವಿಕ್ರಂ ಸಂಪತ್‌ ಮಾತನಾಡಿ, ‘ಇತಿಹಾಸದ ಬಗ್ಗೆ ಮರು ಸಂಶೋಧನೆ, ವಿಶ್ಲೇಷಣೆ ನಡೆಸಿ ಪರಿಷ್ಕರಿಸುವ ಕೆಲಸ ಆಗಬೇಕಾಗಿದೆ’ ಎಂದರು.

‘ಮೊದಲು ಸರ್ಕಾರ ಟಿಪ್ಪು ಹುಟ್ಟಿದ ದಿನವನ್ನು ಖಚಿತಪಡಿಸಿಕೊಳ್ಳಬೇಕು. ಬಳಿಕ ಜಯಂತಿ ಆಚರಣೆಗೆ ಮುಂದಾಗಬೇಕು’ ಎಂದು ಸಲಹೆ ಮಾಡಿದರು.

ಟಿಪ್ಪು ಮುಸ್ಲಿಂ ಎಂಬುದೇ ಕೆಲವು ಸಂಘಟನೆಗಳಿಗೆ ದೊಡ್ಡ ಸಮಸ್ಯೆ.  ಒಂದು ವೇಳೆ ಟಿಪ್ಪು  ಹಿಂದೂ ಆಗಿದ್ದರೆ ಶಿವಾಜಿ ಮಹಾರಾಜರಿಗೆ ಸಿಕ್ಕಿರುವ ಸ್ಥಾನಮಾನ ಸಿಗುತ್ತಿತ್ತು
ದಿನೇಶ್‌ ಗುಂಡೂರಾವ್‌

ಟಿಪ್ಪು ಜಯಂತಿ ಆಚರಣೆಗೆ ವಿರೋಧವಿದ್ದರೂ, ಕರ್ಫ್ಯೂ ವಿಧಿಸಿ  ಆಚರಿಸುವ ಅಗತ್ಯ ಏನಿತ್ತು?   ಶಿಶುನಾಳ ಷರೀಫರ ಜಯಂತಿ ಆಚರಿಸಿದ್ದರೆ ಯಾರೂ ವಿರೋಧಿಸುತ್ತಿರಲಿಲ್ಲ
ತೇಜಸ್ವಿ ಸೂರ್ಯ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎನ್ನುವುದು ಜನರಿಗೆ ಮುಖ್ಯವಾದ ವಿಷಯವಲ್ಲ. ಅಲ್ಲಿಗೆ ಬೇಗ ತಲುಪಲು ವ್ಯವಸ್ಥೆ ಮಾಡಿದರೆ ಸಾಕಷ್ಟೇ
ವಿಕ್ರಂ ಸಂಪತ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.