ADVERTISEMENT

ಇನ್‌ಸ್ಪೆಕ್ಟರ್‌ಗಳಿಗೆ ಕಮಿಷನರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2015, 19:57 IST
Last Updated 29 ನವೆಂಬರ್ 2015, 19:57 IST

ಬೆಂಗಳೂರು: ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾನೂನು– ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬ ಇನ್‌ಸ್ಪೆಕ್ಟರ್ ಕರ್ತವ್ಯ. ಆದರೆ, ಕೆಲ ಸಿಬ್ಬಂದಿಯ ವಿರುದ್ಧವೇ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿ ನಾಗರಿಕರ ನೆಮ್ಮದಿ ಬದುಕಿಗೆ ಸೂಕ್ತ ವಾತಾವರಣ ನಿರ್ಮಿಸಲು ಆಗದಿದ್ದರೆ ಅಂಥವರು ಸಮವಸ್ತ್ರ ಕಳಚಿಟ್ಟು ಮನೆಗೆ  ಹೋಗಬಹುದು...

ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಶನಿವಾರ ‘ಅಪರಾಧ ಪುನರ್ ಪರಿಶೀಲನಾ ಸಭೆ’ ನಡೆಸಿದ ನಗರ ಪೊಲೀಸ್ ಕಮಿಷನರ್ ಎನ್‌.ಎಸ್‌.ಮೇಘರಿಕ್, ಕೆಲ ಇನ್‌ಸ್ಪೆಕ್ಟರ್‌ಗಳಿಗೆ ನೀಡಿದ ಖಡಕ್ ಎಚ್ಚರಿಕೆ ಇದು.

‘ಪೊಲೀಸ್ ವ್ಯವಸ್ಥೆ’ ಕುರಿತು ಒಂದು ವಾರಗಳ ಕಾಲ ನ್ಯೂಯಾರ್ಕ್‌ನಲ್ಲಿ ನಡೆದ ವಿಚಾರಣ ಸಂಕಿರಣದಲ್ಲಿ ಪಾಲ್ಗೊಂಡು ನಗರಕ್ಕೆ ಮರಳಿರುವ ಮೇಘರಿಕ್, ಅಲ್ಲಿನ ಕೆಲ ಅಂಶಗಳನ್ನು ಬಳಸಿಕೊಂಡು  ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿದ್ದಾರೆ. ಅದರ ಮೊದಲ ಹಂತವಾಗಿ ಎಲ್ಲ ವಿಭಾಗಗಳಿಗೂ ತೆರಳಿ ಡಿಸಿಪಿ, ಎಸಿಪಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳ ಜತೆ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ.

ಮೊದಲು ಪಶ್ಚಿಮ ವಿಭಾಗದಲ್ಲಿ ಸಭೆ ನಡೆಸಿದ್ದ ಮೇಘರಿಕ್, ಶನಿವಾರ ಬೆಳಿಗ್ಗೆ 11ರಿಂದ 3 ಗಂಟೆವರೆಗೆ ಪೂರ್ವ ವಿಭಾಗದಲ್ಲಿ ಸಭೆ ನಡೆಸಿದರು. ಆ ವಿಭಾಗದ ಇಬ್ಬರು ಇನ್‌ಸ್ಪೆಕ್ಟರ್‌ಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ನಿಮ್ಮ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿವೆ. ನೀವು ಏನೇನು ಮಾಡುತ್ತಿದ್ದೀರಿ ಎಂಬುದು ಗಮನಕ್ಕೆ ಬರುತ್ತಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸಲೂ ಆಗದಿದ್ದರೆ, ಮನೆಗೆ ಹೋಗಿ’ ಎಂದು ತಾಕೀತು ಮಾಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.