ADVERTISEMENT

ಐಸಿಎಎಸ್‌ ಅಧಿಕಾರಿ ಸಂದೀಪ್‌ ದಾಸ್‌ ವಜಾ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:42 IST
Last Updated 25 ಮೇ 2017, 19:42 IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ ನಡೆದಿದ್ದ (ಬಿಎಂಆರ್‌ಸಿಎಲ್‌) ಬಹುಕೋಟಿ ಮ್ಯೂಚುವಲ್‌ ಫಂಡ್‌ ಹಗರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಎರಡು ತಿಂಗಳ ಹಿಂದೆಯೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಇದನ್ನು ಆಧರಿಸಿ ಆರೋಪಿ ಭಾರತೀಯ ಲೆಕ್ಕ ಪರಿಶೋಧನಾ ಸೇವೆ (ಐಸಿಎಎಸ್‌) ಅಧಿಕಾರಿ, ಪ್ರಸ್ತುತ ಕೇಂದ್ರ ಹಣಕಾಸು ಇಲಾಖೆಯ ಲೆಕ್ಕ ಪರಿಶೋಧಕರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್‌ ದಾಸ್‌ ಅವರನ್ನು ಸೇವೆಯಿಂದ ವಜಾಗೊಳಿಸಿ ಉಪ ಲೆಕ್ಕ ಪರಿಶೋಧಕ ನೀರಜ್‌ಕುಮಾರ್‌ ಶರ್ಮಾ ಮೇ  2ರಂದು ಆದೇಶ ಹೊರಡಿಸಿದ್ದಾರೆ.

1997ರಿಂದ 2004ರವರೆಗೆ ಬಿಡಿಎ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು 2004ರಿಂದ 2007ರವರೆಗೆ  ಬಿಎಂಆರ್‌ಸಿಎಲ್‌ನಲ್ಲಿ ಕೆಲಸ ಮಾಡಿದ್ದರು.

ಈ ಅವಧಿಯಲ್ಲೇ ಎರಡು ಸಂಸ್ಥೆಯ ನೂರಾರು ಕೋಟಿ ಹಣವನ್ನು ಸರ್ಕಾರದ ಅನುಮತಿ ಪಡೆಯದೆ ಮ್ಯೂಚುವಲ್‌ ಫಂಡ್‌ನಲ್ಲಿ ತೊಡಗಿಸಲಾಗಿತ್ತು. ಇದು  2014ರ ಲೆಕ್ಕ ಪರಿಶೋಧಕರ ವರದಿಯಿಂದ ಬಹಿರಂಗವಾಗಿತ್ತು.

ಪ್ರಕರಣದ ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು ಸಂದೀಪ್‌ ದಾಸ್‌, ಬಿಡಿಎ ಹಣಕಾಸು ವಿಭಾಗದ ಅಧಿಕಾರಿ ಶೇಷಪ್ಪ, ದ್ವಿತೀಯ ದರ್ಜೆ  ಸೂಪರಿಟೆಂಡೆಂಟ್‌ ವಸಂತ್‌ ಕುಮಾರ್, ಗಂಗಣ್ಣ, ಬ್ಯಾಂಕ್‌ ಅಧಿಕಾರಿ ಪನ್ನೀರು ಸೇಲ್ವಂ, ಅನಂತ್‌, ನಿವೃತ್ತ ಐಎಎಸ್‌ ಅಧಿಕಾರಿ ಮೊನ್ನಪ್ಪ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT