ADVERTISEMENT

ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಸುಲಿಗೆ

ಮೂರು ಕಡೆ ಕಳವು, ಇನ್ನೆರಡು ಕಡೆ ಸುಲಿಗೆ ಮಾಡಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST

ಬೆಂಗಳೂರು: ನಗರದಲ್ಲಿ ದುಷ್ಕರ್ಮಿಗಳು ಭಾನುವಾರ ಹಾಗೂ ಸೋಮವಾರ ಮೂರು ಕಡೆಗಳಲ್ಲಿ ಕಳವು ಮತ್ತು ಇನ್ನೆರಡು ಕಡೆಗಳಲ್ಲಿ ಸುಲಿಗೆ ಮಾಡಿದ್ದಾರೆ.

ಬನಶಂಕರಿ 3ನೇ ಹಂತದ ಕಾಳಸಂದ್ರದ 9ನೇ ಮುಖ್ಯರಸ್ತೆಯ ಮನೆಯೊಂದಕ್ಕೆ ಭಾನುವಾರ ಮಧ್ಯಾಹ್ನ ನುಗ್ಗಿದ್ದ ದುಷ್ಕರ್ಮಿಗಳು, ಒಂಟಿ ಮಹಿಳೆಯನ್ನು ಬೆದರಿಸಿ ₹1 ಲಕ್ಷ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಘಟನೆ ಬಗ್ಗೆ ನಿವಾಸಿ ಲಕ್ಷ್ಮಿ ರಮೇಶ್‌ ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ.

ರಿಲಯನ್ಸ್‌ ಮಳಿಗೆಯಲ್ಲಿ ಕಳವು: ಯಲಹಂಕ ನ್ಯೂ ಟೌನ್‌ ಸಮೀಪದ ಶರಾವತಿ ಹೋಟೆಲ್ ಬಳಿಯ ರಿಲಯನ್ಸ್ ಫ್ರೆಶ್‌ ಮಳಿಗೆಗೆ ಭಾನುವಾರ ರಾತ್ರಿ ನುಗ್ಗಿದ್ದ ದುಷ್ಕರ್ಮಿಗಳು, ₹50 ಸಾವಿರ ನಗದು ಕದ್ದೊಯ್ದಿದ್ದಾರೆ.

ADVERTISEMENT

‘ರಾತ್ರಿ 11 ಗಂಟೆಗೆ ವ್ಯಾಪಾರ ಮುಗಿಸಿ ಮಳಿಗೆಗೆ ಬೀಗ ಹಾಕಿಕೊಂಡು ಹೋಗಿದ್ದೆವು. ಶಟರ್‌ ಮೀಟಿ ಒಳನುಗ್ಗಿರುವ ಕಳ್ಳರು, ಈ ಕೃತ್ಯ ಎಸಗಿದ್ದಾರೆ. ಬೆಳಿಗ್ಗೆ ಮಳಿಗೆ ತೆರೆಯಲು ಬಂದಾಗ ಕಳ್ಳತನ ನಡೆದಿದ್ದು ಗೊತ್ತಾಗಿದೆ’ ಎಂದು ದೂರಿನಲ್ಲಿ ಮಳಿಗೆಯ ವ್ಯವಸ್ಥಾಪಕ ಅಶೋಕ ತಿಳಿಸಿದ್ದಾರೆ.

ಒಂಟಿ ಮಹಿಳೆ ಸರ ಕಿತ್ತೊಯ್ದ: ಗಿರಿನಗರದಲ್ಲಿ ಸೋಮವಾರ ಬೆಳಿಗ್ಗೆ ಪಾದಚಾರಿ ಪದ್ಮಾ ಎಂಬುವರನ್ನು ಹಿಂಬಾಲಿಸಿದ್ದ ದುಷ್ಕರ್ಮಿ, 80 ಗ್ರಾಂನ ಮಾಂಗಲ್ಯ ಸರ ಕಿತ್ತೊಯ್ದಿದ್ದಾನೆ.

ಉದ್ಯಮಿ ಮನೆಗೆ ಕನ್ನ: ಸೋಲದೇವನಹಳ್ಳಿ ಬಳಿಯ ಉದ್ಯಮಿ ಶ್ರೀಕಂಠ ಎಂಬುವರ ಮನೆಯ ಬೀಗ ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು, 150 ಗ್ರಾಂ ಚಿನ್ನ ಹಾಗೂ ಎರಡು ಕೆ.ಜಿ ಬೆಳ್ಳಿ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಬಿಡದಿಯ ಕಾರ್ಖಾನೆಯೊಂದರ ಮಾಲೀಕರಾದ ಅವರು ಕುಟುಂಬ ಸಮೇತ ಶನಿವಾರ (ಆಗಸ್ಟ್‌ 2) ಹೊರನಾಡಿಗೆ  ಹೋಗಿದ್ದರು. ಸೋಮವಾರ ಬೆಳಿಗ್ಗೆ ವಾಪಸ್‌ ಬಂದಾಗ ಕೃತ್ಯ ನಡೆದಿರುವುದು ಗೊತ್ತಾಗಿದೆ.

***

ಸುಬ್ರಹ್ಮಣ್ಯನಗರ ಬಳಿಯ ಎನ್‌.ಬ್ಲಾಕ್‌ನಲ್ಲಿರುವ ಕಿರಣ್‌ ಎಂಬುವರ ಮನೆಯ ಬೀಗ ಮುರಿದು ಒಳ ನುಗ್ಗಿದ್ದ ಕಳ್ಳರು ₹70,000 ನಗದು ಹಾಗೂ 20 ಗ್ರಾಂ ಚಿನ್ನದ ಸರವನ್ನು ಕದ್ದೊಯ್ದಿದ್ದಾರೆ.

ಕೋರಮಂಗಲದ ಖಾಸಗಿ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕರಾಗಿರುವ ಅವರು ಪತ್ನಿಯೊಂದಿಗೆ ವಾಸವಿದ್ದಾರೆ. ಸೋಮವಾರ ಬೆಳಿಗ್ಗೆ ಮಳೆ ಬರುತ್ತಿದ್ದ ವೇಳೆ ಬಾಗಿಲು ಬೀಗ ಮುರಿದು ಒಳನುಗ್ಗಿದ್ದ ದುಷ್ಕರ್ಮಿಗಳು, ಈ ಕೃತ್ಯ ಎಸಗಿದ್ದಾರೆ.

‘ಮನೆಯಲ್ಲಿ ದುಷ್ಕರ್ಮಿಗಳ ಓಡಾಟದ ಶಬ್ದ ಕೇಳಿ ಎಚ್ಚರವಾಗಿದ್ದ ಕಿರಣ್‌, ಕೊಠಡಿಯಿಂದ ಹೊರಗೆ ಹೋಗಿ ನೋಡುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಬಾಗಿಲ ಬೀಗ ತೆರೆದಿದ್ದನ್ನು ಕಂಡು ಪರಿಶೀಲಿಸಿದಾಗ ಕಳ್ಳತನ ನಡೆದಿದ್ದು ಗೊತ್ತಾಗಿದೆ’ ಎಂದು ಸುಬ್ರಹ್ಮಣ್ಯನಗರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.