ADVERTISEMENT

ಒಂದೇ ದಿನ ₹1.60 ಕೋಟಿ ಹೆಚ್ಚುವರಿ ಆದಾಯ

ಮಂಜುನಾಥ್ ಹೆಬ್ಬಾರ್‌
Published 27 ನವೆಂಬರ್ 2015, 20:08 IST
Last Updated 27 ನವೆಂಬರ್ 2015, 20:08 IST

ಬೆಂಗಳೂರು: ಜಲಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್‌ ಅವರು ಕೈಗೊಂಡ ಉಪಕ್ರಮಗಳಿಂದಾಗಿ ಮಂಡಳಿಗೆ ಒಂದೇ ದಿನ (ಗುರುವಾರ) ಹೆಚ್ಚುವರಿಯಾಗಿ ₹1.60 ಕೋಟಿ ಆದಾಯ ಬಂದಿದೆ.

ಅಸಂಖ್ಯ ಸಂಖ್ಯೆಯ ನೀರಿನ ಬಳಕೆದಾರರು ವರ್ಷಗಳಿಂದ ನೀರಿನ ಶುಲ್ಕ ಬಾಕಿ ಇರಿಸಿಕೊಂಡಿದ್ದರು. ಕೆಲವರ ನೀರಿನ ಬಾಕಿ ಬಿಲ್‌ ಲಕ್ಷದ ವರೆಗೆ ಮುಟ್ಟಿತ್ತು. ಈ ಬಾಕಿ ಬಿಲ್‌ ಕಟ್ಟುವಂತೆ ಜಲಮಂಡಳಿ ಅಧಿಕಾರಿಗಳು ನೋಟಿಸ್‌ ನೀಡಿದ್ದರೂ ಬಳಕೆದಾರರು ಸ್ಪಂದಿಸಿರಲಿಲ್ಲ.

ಈ ಕಾರಣದಿಂದ ವಿಜಯಭಾಸ್ಕರ್ ಅವರು ನೋಟಿಸ್‌ ನೀಡುವಂತೆ ಸೂಚನೆ ನೀಡಿದ್ದರು. ಬಾಕಿ ಪಾವತಿ ಮಾಡದಿದ್ದರೆ ಜಲಮಂಡಳಿ ಕಾಯ್ದೆ ಸೆಕ್ಷನ್‌ 53ರ ಪ್ರಕಾರ ನೀರಿನ ಸಂಪರ್ಕ ಹಾಗೂ ಸೆಕ್ಷನ್‌ 75ಎ ಪ್ರಕಾರ ಒಳಚರಂಡಿ ಸಂಪರ್ಕ ಕಡಿತ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಮಹಾನಗರಕ್ಕೆ ಸೇರ್ಪಡೆಯಾಗಿರುವ ನಗರಸಭೆ, ಪುರಸಭೆಗಳ ವ್ಯಾಪ್ತಿಯ 1200 ಚದರ ಅಡಿ ಹಾಗೂ ಮೇಲ್ಪಟ್ಟ ವಿಸ್ತೀರ್ಣದ ನಿವೇಶನಗಳಲ್ಲಿನ ಕಟ್ಟಡಗಳ ಫಲಾನುಭವಿ ವಂತಿಕೆಯನ್ನು ಪಾವತಿಸುವಂತೆ ಸೂಚನೆ ನೀಡಿದ್ದರು.  1200 ಚದರ ಅಡಿ ಹಾಗೂ ಮೇಲ್ಪಟ್ಟ ನಿವೇಶನಗಳಲ್ಲಿ ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಅಂತಸ್ತಿನ ಕಟ್ಟಡಗಳ ಪ್ರೋರೇಟಾ ಶುಲ್ಕವನ್ನು ಪಾವತಿಸುವಂತೆ ನಿರ್ದೇಶನ ನೀಡಿದ್ದರು. 

ಈ ಶುಲ್ಕಗಳನ್ನು ಪಾವತಿ ಮಾಡದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಜಾಹೀರಾತುಗಳ ಮೂಲಕವೂ ಎಚ್ಚರಿಕೆ ನೀಡಿದ್ದರು. ನೋಟಿಸ್‌ ನೋಡಿದ ಕೂಡಲೇ ನೂರಾರು ಮಂದಿ ಬಾಕಿ ಪಾವತಿ ಮಾಡಿದ್ದಾರೆ. ಜಲಮಂಡಳಿಯ ನಿತ್ಯದ ಆದಾಯ ಸರಿಸುಮಾರು ₹2.5 ಕೋಟಿ. ಗುರುವಾರ ₹4 ಕೋಟಿ ಮಂಡಳಿಯ ಬೊಕ್ಕಸಕ್ಕೆ ಸೇರಿದೆ.

ಕಳೆದ ವರ್ಷದ ವರೆಗೆ ಮಂಡಳಿಯ ತಿಂಗಳ ಆದಾಯ ₹45 ಕೋಟಿ ಆಗಿತ್ತು. ಜನವರಿಯಲ್ಲಿ ನೀರಿನ ದರ ಪರಿಷ್ಕರಣೆ ಮಾಡಲಾಗಿತ್ತು. ಆ ಬಳಿಕ ಮಂಡಳಿಯ ಆದಾಯ ₹80 ಕೋಟಿಗೆ ಏರಿತ್ತು. ಕಳೆದ ತಿಂಗಳು ₹86 ಕೋಟಿ ಆದಾಯ ಗಳಿಸಿತ್ತು. ಅನಧಿಕೃತ ಸಂಪರ್ಕ ಪತ್ತೆ ಹಾಗೂ ನೀರಿನ ಸೋರಿಕೆ ತಡೆಗಟ್ಟಲು ನವೆಂಬರ್‌ನಲ್ಲಿ ಸಮರೋಪಾದಿ ಕ್ರಮ ಕೈಗೊಳ್ಳಲಾಗಿದ್ದು, ಈ ತಿಂಗಳ ಆದಾಯ ₹90 ಕೋಟಿ ದಾಟುವ ನಿರೀಕ್ಷೆ ಇದೆ.

ADVERTISEMENT

ನವೆಂಬರ್‌ನಲ್ಲಿ ಪ್ರೋರೇಟಾ ಶುಲ್ಕವೇ ಅಂದಾಜು ₹30 ಕೋಟಿ ಸಂಗ್ರಹವಾಗಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ಅಧಿಕಾರಿಗಳಿಗೆ ಜವಾಬ್ದಾರಿ:  ಮಂಡಳಿ ಆದಾಯ ಸೋರಿಕೆ ಹಾಗೂ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ನಗರದಲ್ಲಿ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ 48 ಇತ್ತು. ಅದನ್ನು ಈಗ ಶೇ 44ಕ್ಕೆ ಇಳಿಸಲಾಗಿದೆ. ಡಿಸೆಂಬರ್‌ ಅಂತ್ಯಕ್ಕೆ ಅದನ್ನು ಶೇ 35ಕ್ಕೆ ಇಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ನೀರಿನ ಸೋರಿಕೆ ತಡೆಗಟ್ಟಿ ಮಂಡಳಿಯ ಆದಾಯ ಹೆಚ್ಚಿಸಲು ವಿವಿಧ ತಂಡಗಳನ್ನು ರಚಿಸಿ ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ಹೊಣೆ ವಹಿಸಲಾಗಿದೆ.

ಕಾರ್ಯನಿರ್ವಾಹಕ ಎಂಜಿನಿಯರ್‌ ಗಳನ್ನು ಒಳಗೊಂಡ ನೋಡಲ್‌ ಅಧಿಕಾರಿಗಳ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಒಳಗೊಂಡ ಸಹಾಯಕ ನೋಡಲ್‌ ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡದ ಸದಸ್ಯರು ಪ್ರತಿ ಮಂಗಳವಾರ ಹಾಗೂ ಗುರುವಾರ ಸೇವಾ ಠಾಣಾ ವ್ಯಾಪ್ತಿಗೆ ತೆರಳಿ ಪರಿಶೀಲನೆ ನಡೆಸಬೇಕು. ಬೆಳಿಗ್ಗೆ 8 ಗಂಟೆಗೆ ಕಚೇರಿಗೆ ತೆರಳಿ ಸಿಬ್ಬಂದಿಯ ಹಾಜರಾತಿ ಪರಿಶೀಲನೆ ಮಾಡಬೇಕು.

ಹೊರಗುತ್ತಿಗೆ ಸಿಬ್ಬಂದಿಗೆ ನೀಡುವ ಸೌಲಭ್ಯಗಳ ಪರಿಶೀಲನೆ ನಡೆಸಬೇಕು. ದೂರುಗಳ ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಪ್ರತಿ ಅಧಿಕಾರಿ ತಲಾ ಐದು ಗೃಹ, ಗೃಹೇತರ, ಭಾಗಶಃ ಗೃಹ ನೀರಿನ ಸಂಪರ್ಕದ ಮೀಟರ್‌ಗಳ ಪರಿಶೀಲನೆ ನಡೆಸಬೇಕು ಎಂದು ವಿಜಯಭಾಸ್ಕರ್ ಅವರು ಅಧಿಕಾರ ಸ್ವೀಕರಿಸಿದ ಶುರುವಿನಲ್ಲೇ ಸೂಚಿಸಿದ್ದರು. ಜತೆಗೆ ಹಲವು ಕಡೆಗಳಿಗೆ ವಿಜಯಭಾಸ್ಕರ್ ಅವರು ಹಠಾತ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅವರ ನಡೆ ಅಧಿಕಾರಿಗಳಲ್ಲಿ ಸಂಚಲನ ಮೂಡಿಸಿದೆ.

ಕಂದಾಯ ಜಾಗೃತ ದಳ: ವಲಯಗಳ ಮೇಲೆ ನಿಗಾ ಇಡಲು 9 ಕಂದಾಯ ಜಾಗೃತ ದಳಗಳನ್ನು ಸ್ಥಾಪಿಸಲಾಗಿದೆ.  ಮುಖ್ಯ ಎಂಜಿನಿಯರ್‌ಗಳಿಗೆ ಈ ಹೊಣೆ ವಹಿಸಲಾಗಿದೆ.

ವಾಟ್ಸ್‌ ಆ್ಯಪ್‌ ಗ್ರೂಪ್‌: ಅಸಮರ್ಪಕ ನೀರು ಪೂರೈಕೆ, ನೀರಿನ ಸೋರಿಕೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಜಲಮಂಡಳಿಗೆ ಪ್ರತಿನಿತ್ಯ ನೂರಾರು ಕರೆಗಳು ಬರುತ್ತಿವೆ. ಈ ದೂರುಗಳಿಗೆ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರು ಇದೆ. ಅಧಿಕಾರ ಸ್ವೀಕರಿಸಿದ ಕೂಡಲೇ ವಿಜಯಭಾಸ್ಕರ್ ಅವರು ಮಂಡಳಿಯ ವೆಬ್‌ಸೈಟ್‌ನಲ್ಲಿ ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿದ್ದರು.

ದೂರುಗಳ ತ್ವರಿತ ವಿಲೇವಾರಿಗೆ ಅವರು ವಾಟ್ಸ್ ಆ್ಯಪ್‌ ಗ್ರೂಪ್‌ ರಚಿಸಿದ್ದಾರೆ. ಇದರಲ್ಲಿ ಮಂಡಳಿಯ 42 ಹಿರಿಯ ಅಧಿಕಾರಿಗಳು ಇದ್ದಾರೆ. ಸಮಸ್ಯೆ ಹಾಗೂ ಅದಕ್ಕೆ ಸಂಬಂಧಿಸಿದ ಛಾಯಾಚಿತ್ರವನ್ನು ಗ್ರೂಪ್‌ಗೆ ಹಾಕಲಾಗುತ್ತದೆ. ಕೆಲಸ ಪೂರ್ಣಗೊಳಿಸಿದ ಬಳಿಕ ಸಂಬಂಧಪಟ್ಟ  ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಬೇಕು.  ಇದರಿಂದಾಗಿ ದೂರುಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.