ADVERTISEMENT

ಓಲಾ, ಉಬರ್‌ ದರ ಮತ್ತಷ್ಟು ದುಬಾರಿ

ಸಾರಿಗೆ ಇಲಾಖೆಯಿಂದ ಪರಿಷ್ಕೃತ ಅಧಿಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:25 IST
Last Updated 22 ಮಾರ್ಚ್ 2018, 20:25 IST
ಓಲಾ, ಉಬರ್‌ ದರ ಮತ್ತಷ್ಟು ದುಬಾರಿ
ಓಲಾ, ಉಬರ್‌ ದರ ಮತ್ತಷ್ಟು ದುಬಾರಿ   

ಬೆಂಗಳೂರು: ಮೊಬೈಲ್‌ ಆ್ಯಪ್ ಆಧರಿತ ಓಲಾ, ಉಬರ್‌ ಸೇರಿದಂತೆ ಇತರೆ ಕಂಪನಿಗಳ ಕ್ಯಾಬ್‌ಗಳ ಪ್ರಯಾಣ ದರ ನಿಗದಿ ಸಂಬಂಧ ಸಾರಿಗೆ ಇಲಾಖೆಯು ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.

ಕನಿಷ್ಠ ಮತ್ತು ಗರಿಷ್ಠ ಪ್ರಯಾಣದರ ನಿಗದಿಪಡಿಸಿ ಜನವರಿ 9ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ. ವಾಹನಗಳ ಮೌಲ್ಯದ ಆಧಾರದಲ್ಲಿ ಹೊಸ ದರ ನಿಗದಿಪಡಿಸಲಾಗಿದೆ. ಇದೇ ದರವನ್ನು ಪ್ರಯಾಣಿಕರಿಂದ ಸಂಗ್ರಹಿಸುವಂತೆ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.

ಬಿಬಿಎಂಪಿ ಸುತ್ತಮುತ್ತಲ 25 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುವ ಕ್ಯಾಬ್‌ ಹಾಗೂ ಟ್ಯಾಕ್ಸಿಗಳಿಗೆ ಈ ದರ ಅನ್ವಯವಾಗಲಿದೆ. ಜತೆಗೆ, ಜಿ.ಎಸ್‌.ಟಿ ಹಾಗೂ ಟೋಲ್‌ ಶುಲ್ಕವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಬಹುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಹೀಗಾಗಿ, ಸದ್ಯದ ದರಕ್ಕಿಂತ ಹೊಸ ದರವು ಶೇ 65ರಷ್ಟು ಜಾಸ್ತಿ ಆಗಲಿದೆ.

ADVERTISEMENT

ಕಾಯುವಿಕೆ ದರ ಮೊದಲಿನ 20 ನಿಮಿಷದವರೆಗೆ ಉಚಿತವಾಗಿರಲಿದೆ ನಂತರದ ಪ್ರತಿ 15 ನಿಮಿಷಗಳಿಗೆ ₹10 ಶುಲ್ಕ ಪಾವತಿಸಬೇಕಿದೆ. ಸಮ
ಯದ ಆಧಾರದಲ್ಲಿ ದರ ವಸೂಲಿ ಮಾಡುವುದನ್ನು ನಿಷೇಧಿಸಲಾಗಿದ್ದು, ಕಿ.ಮೀ ಆಧಾರದಲ್ಲಿ ಮಾತ್ರ ದರ ನಿಗದಿ ಮಾಡುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಕಂಪನಿ ಪ್ರತಿನಿಧಿಗಳು ಹಾಗೂ ಕೆಲ ಚಾಲಕರು, ಮನವಿ ಸಲ್ಲಿಸಿದ್ದರು. ಅದನ್ನೇ ಹಿರಿಯ ಅಧಿಕಾರಿಗಳಿಗೆ ನೀಡಿದ್ದೆವು. ಅವುಗಳನ್ನು ಪರಿಶೀಲಿಸಿದ್ದ ಹಿರಿಯ ಅಧಿಕಾರಿಗಳು ಗೆಜೆಟ್‌ನಲ್ಲಿ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದಾರೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿ ತಿಳಿಸಿದರು.

ಹೊಸ ದರ ‍ಪಾಲನೆ; ಓಲಾ ಪರಿಷ್ಕೃತ ಅಧಿಸೂಚನೆ ಪ್ರಕಾರವೇ ಹೊಸ ದರಗಳನ್ನು ವಿಧಿಸುವುದಾಗಿ ಓಲಾ ಕಂಪನಿ ಪ್ರತಿನಿಧಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಲಿಖಿತ ಹೇಳಿಕೆ ನೀಡಿದ್ದಾರೆ.

‘ಓಲಾ ಕಂಪನಿ ಪ್ರತಿನಿಧಿಗಳು ಮಾತ್ರ ಪ್ರತಿಕ್ರಿಯಿಸಿದ್ದಾರೆ. ಉಬರ್‌ ಹಾಗೂ ಇತರೆ ಕಂಪನಿ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದಕ್ಕಾಗಿ ಕಾಯುತ್ತಿದ್ದೇವೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‍ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿಯೊಂದು ಕ್ಯಾಬ್‌ಗಳಲ್ಲೂ ಹೊಸ ದರ ಪಾಲನೆ ಮಾಡುತ್ತಿರುವುದನ್ನು ಪರಿಶೀಲಿಸಲು ಪ್ರತ್ಯೇಕ ತಂಡ ರಚಿಸಿದ್ದೇವೆ. ತಂಡದ ಅಧಿಕಾರಿಗಳು, ನಗರದೆಲ್ಲೆಡೆ ಸಂಚರಿಸಿ ದರಗಳ ಬಗ್ಗೆ ಮಾಹಿತಿ ಕಲೆಹಾಕಲಿದ್ದಾರೆ. ದರ ಪಾಲನೆ ಮಾಡದ ಕಂಪನಿ ವಿರುದ್ಧ ಕ್ರಮವನ್ನೂ ಕೈಗೊಳ್ಳಲಿದ್ದಾರೆ’ ಎಂದರು.

ಹೊಸ ದರದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಓಲಾ ಹಾಗೂ ಉಬರ್‌ ಕಂಪನಿ ಪ್ರತಿನಿಧಿಗಳು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಯಾಣಿಕರ ಆಕ್ರೋಶ: ಪರಿಷ್ಕೃತ ಪ್ರಯಾಣ ದರವು ಪ್ರಯಾಣಿಕರಿಗೆ ಹೊರೆಯಾಗಲಿದೆ. ಪ್ರತಿ ಕಿ.ಮೀಗೆ ಸದ್ಯ ₹7 ದರ ನೀಡುತ್ತಿರುವ ಪ್ರಯಾಣಿಕರು ಇನ್ನು ಮುಂದೆ ₹11 ನೀಡಬೇಕು. ದರಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಚೇರಿಗೆ ನಿತ್ಯವೂ ಓಲಾ ಕಂಪನಿ ಕ್ಯಾಬ್‌ನಲ್ಲಿ ಹೋಗುತ್ತೇನೆ. ಈಗಿನ ದರ ಚೆನ್ನಾಗಿತ್ತು. ಈಗ ದಿಢೀರ್ ದರ ಏರಿಕೆ ಮಾಡಿರುವುದರಿಂದ ಹೊರೆಯಾಗಲಿದೆ’ ಎಂದು ಬನಶಂಕರಿ ನಿವಾಸಿ ರಾಘವೇಂದ್ರ ತಿಳಿಸಿದರು.

ರಾಜಾಜಿನಗರ ಲೋಜಿತ್‌ ಕುಮಾರ್, ‘ಕ್ಯಾಬ್‌ಗಳ ನಡುವೆ ಪೈಪೋಟಿ ಇದೆ. ಕಂಪನಿಯವರೇ ಕಡಿಮೆ ದರದಲ್ಲಿ ಸೇವೆ ನೀಡುತ್ತಿದ್ದಾರೆ. ಇಷ್ಟೇ ದರ ವಸೂಲಿ ಮಾಡಿ ಎಂದು ಸಾರಿಗೆ ಇಲಾಖೆಯು ಹೇಳುತ್ತಿರುವುದು ಸರಿಯಲ್ಲ’ ಎಂದರು.

‘ಸಾರ್ವಜನಿಕರ ತೆರಿಗೆ ಹಣದಲ್ಲಿ ಸರ್ಕಾರ ನಡೆಯುತ್ತಿದೆ. ಈಗ ಕಂಪನಿಯವರಿಗೆ ಲಾಭ ಮಾಡಿಕೊಡಲು ಸರ್ಕಾರವೇ ಈ ರೀತಿ ದರ ನಿಗದಿ ಮಾಡಿದೆ. ಕೂಡಲೇ ಅಧಿಸೂಚನೆಯನ್ನು ಹಿಂಪಡೆದು, ಮೊದಲಿದ್ದ ದರವನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

‘ಚಾಲಕರ ಕಣ್ಣೊರೆಸುವ ತಂತ್ರ’

‘ಕನಿಷ್ಠ ಹಾಗೂ ಗರಿಷ್ಠ ದರ ನಿಗದಿ ಮಾಡಿದ ಕೂಡಲೇ ಚಾಲಕರ ಸಮಸ್ಯೆ ಬಗೆಹರಿಯುವುದಿಲ್ಲ. ಇದು ಚಾಲಕರ  ಕಣ್ಣೊರೆಸುವ ತಂತ್ರ’ ಎಂದು ‘ಓಲಾ, ಟ್ಯಾಕ್ಸಿಶ್ಯೂರ್‌, ಉಬರ್‌ ಕಂಪನಿ ಚಾಲಕರು ಮತ್ತು ಮಾಲೀಕರ ಸಂಘ’ದ ಅಧ್ಯಕ್ಷ ತನ್ವೀರ್ ಪಾಷಾ ಕಿಡಿಕಾರಿದರು.

‘ಎಲ್ಲ ಕಂಪನಿಯವರು ಚಾಲಕರಿಂದ ಸದ್ಯ ಶೇ 30ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ. ವಿನಾಕಾರಣ ದಂಡ ವಿಧಿಸಿ, ಹಣ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಇಲಾಖೆಯು ಮೊದಲು ನಿಯಮ ರೂಪಿಸಬೇಕು. ಚಾಲಕರ ಆರ್ಥಿಕ ಪರಿಸ್ಥಿತಿ ತಿಳಿದುಕೊಂಡು ದರ ನಿಗದಿ ಮಾಡಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.