ADVERTISEMENT

ಕತ್ತು ಸೀಳಿ ಯುವತಿ ಹತ್ಯೆ

ಮೃತರ ಗೆಳತಿ ನಾಪತ್ತೆ l ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:44 IST
Last Updated 24 ಮೇ 2017, 19:44 IST
ಕತ್ತು ಸೀಳಿ ಯುವತಿ ಹತ್ಯೆ
ಕತ್ತು ಸೀಳಿ ಯುವತಿ ಹತ್ಯೆ   
ಬೆಂಗಳೂರು: ಈಜೀಪುರ 20ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಕತ್ತು ಸೀಳಿ ಕೊಲೆಯಾದ ಯುವತಿಯ  ಮೃತದೇಹ ಬುಧವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
 
ಗೀತಾ ಹಾಗೂ ಪ್ರಿಯಾ ಎಂಬುವರು ಇದೇ ಮೇ15ರಂದು ಈ ಮನೆಗೆ ಬಾಡಿಗೆಗೆ ಬಂದಿದ್ದರು. ಈಗ ಒಬ್ಬರು ಕೊಲೆಯಾಗಿದ್ದು, ಮತ್ತೊಬ್ಬ ಯುವತಿ ಭಾನುವಾರ (ಮೇ 20) ರಾತ್ರಿಯಿಂದ ನಾಪತ್ತೆಯಾಗಿದ್ದಾರೆ. ಹೆಸರುಗಳಲ್ಲಿ ಗೊಂದಲವಿರುವ ಕಾರಣ ಹತ್ಯೆಯಾಗಿರುವವರು ಯಾರು ಎಂಬುದು ಸ್ಪಷ್ಟವಾಗಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
 
5 ದಿನವಷ್ಟೇ ವಾಸ: ‘ಈ ಯುವತಿಯರು ಕ್ಯಾಟರಿಂಗ್ ಕೆಲಸ ಮಾಡುತ್ತಿರುವುದಾಗಿ ಮನೆ ಮಾಲೀಕ ಮರಿಯಪ್ಪ ಅವರಿಗೆ ತಿಳಿಸಿ ಮೇ 15ರಂದು ಮನೆಗೆ ಬಾಡಿಗೆಗೆ ಬಂದಿದ್ದರು.
 
ಆದರೆ, ಭಾನುವಾರದಿಂದ (ಮೇ 20) ಇಬ್ಬರೂ ಹೊರಗೆ ಕಾಣಿಸಿರಲಿಲ್ಲ. ಊರಿಗೆ ಹೋಗಿರಬೇಕೆಂದು ಮಾಲೀಕರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಮಂಗಳವಾರ ಸಂಜೆ ಮನೆಯಿಂದ ಕೆಟ್ಟ ವಾಸನೆ ಬರಲಾರಂಭಿಸಿತ್ತು. ಇಲಿ ಸತ್ತಿರಬೇಕು ಎಂದು ಅವರು ಸುಮ್ಮನಾಗಿದ್ದರು’ ಎಂದು  ಹಿರಿಯ ಅಧಿಕಾರಿಗಳು ಹೇಳಿದರು.
 
‘ಬುಧವಾರ ಬೆಳಿಗ್ಗೆ ದುರ್ನಾತ ಹೆಚ್ಚಾಗಿದ್ದರಿಂದ ಕಿಟಕಿ ಮೂಲಕ ಮನೆಯೊಳಗೆ ನೋಡಿದ ಮರಿಯಪ್ಪ, ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲಿದ್ದ ಯುವತಿಯನ್ನು ಕೂಗಿದ್ದಾರೆ. ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡ ಅವರು, ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳಗೆ ಹೊಗಿದ್ದಾರೆ. 
 
ಹೊದಿಕೆ ತೆಗೆದು ನೋಡಿದಾಗ ಯುವತಿ ಕೊಲೆಯಾಗಿರುವುದು ಗೊತ್ತಾಗಿದೆ. ಕೂಡಲೇ ವಿವೇಕನಗರ ಠಾಣೆಗೆ ಕರೆ ಮಾಡಿದ್ದಾರೆ.’‘ಚಾಕುವಿನಿಂದ ಯುವತಿಯ ಕುತ್ತಿಗೆ ಸೀಳಲಾಗಿದೆ. ಮುಖದ ಮೇಲೂ ಗಾಯದ ಗುರುತುಗಳಿವೆ. ಮನೆಯಲ್ಲಿ ಮೃತರ ಮೊಬೈಲ್ ಸಿಕ್ಕಿದ್ದು ಅದೂ ಲಾಕ್ ಆಗಿದೆ.

‘ವನಮ್ಮ, ತಮಿಳುನಾಡು’ ಎಂದು ಬರೆದಿರುವ ಡೈರಿ ಸಿಕ್ಕಿದೆ. ಅದರಲ್ಲಿ ಸಿಕ್ಕ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಹತ್ಯೆಯ ವಿಷಯ ತಿಳಿಸಿದ್ದೇವೆ. ಅವರು ನಗರಕ್ಕೆ ಬಂದ ನಂತರ ವಾಸ್ತವ ಚಿತ್ರಣ ಸಿಗಲಿದೆ. ಲಾಕ್ ತೆಗೆಯುವಂತೆ ಮೊಬೈಲನ್ನು ಸೈಬರ್ ವಿಭಾಗಕ್ಕೆ ಕಳುಹಿಸಿದ್ದೇವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 
****
ಹೊಸ ಮೊಬೈಲ್ ಖರೀದಿ
‘ಇಬ್ಬರೂ ಯುವತಿಯರು ಮೇ 19ರಂದು ವಿವೇಕನಗರದ ಅಂಗಡಿಯೊಂದರಲ್ಲಿ ಹೊಸ ಮೊಬೈಲ್ ಹಾಗೂ ಸಿಮ್‌ ಖರೀದಿಸಿದ್ದರು. ಈ ಸುಳಿವು ಆಧರಿಸಿ ಮೊಬೈಲ್ ಅಂಗಡಿಯ ಇಬ್ಬರು ಹುಡುಗರನ್ನು ವಿಚಾರಣೆಗೆ ಒಳಪಡಿಸಿದ್ದೇವೆ.
 
ಕೊಲೆಯಾದ ಯುವತಿಯನ್ನು ನೋಡಿದ ಅವರು, ‘ಈಕೆ ಗೆಳತಿ ಜತೆ ನಮ್ಮ ಅಂಗಡಿಗೆ ಬಂದು ಹೋಗಿದ್ದಳು’ ಎಂದು ಹೇಳಿಕೆ ಕೊಟ್ಟಿದ್ದಾರೆ. ಆ ಹೊಸ ಮೊಬೈಲ್ ಸಿಕ್ಕಿಲ್ಲ. ಇದನ್ನೆಲ್ಲ ಗಮನಿಸಿದರೆ ವ್ಯವಸ್ಥಿತವಾಗಿ ಸಂಚು ರೂಪಿಸಿ ಹತ್ಯೆಗೈದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.