ADVERTISEMENT

‘ಕಲೆ ಸಿದ್ಧಿಗೆ ನಿರಂತರ ಅಭ್ಯಾಸವೇ ಸಿದ್ಧಸೂತ್ರ’

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
‘ಮನೆಯಂಗಳದಲ್ಲಿ ಮಾತುಕತೆ’ ಯಲ್ಲಿ ಮಾತನಾಡಿದ ಹಿರಿಯ ಚಿತ್ರಕಲಾವಿದ ಪ.ಸ.ಕುಮಾರ್   – ಪ್ರಜಾವಾಣಿ ಚಿತ್ರ
‘ಮನೆಯಂಗಳದಲ್ಲಿ ಮಾತುಕತೆ’ ಯಲ್ಲಿ ಮಾತನಾಡಿದ ಹಿರಿಯ ಚಿತ್ರಕಲಾವಿದ ಪ.ಸ.ಕುಮಾರ್ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಲೆಯ ಸಿದ್ಧಿ ಪಡೆಯಲು ನಿರಂತರ ಅಭ್ಯಾಸವೇ ಸಿದ್ಧ ಸೂತ್ರ. ಇದರಿಂದ ಮಾತ್ರ ನಿಜವಾದ ಕಲಾವಿದನಾಗಿ ಹೊರಹೊಮ್ಮಲು ಸಾಧ್ಯ’ ಎಂದು ಹಿರಿಯ ಚಿತ್ರಕಲಾವಿದ ಪ.ಸ.ಕುಮಾರ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಆಯೋಜಿಸಿದ್ದ 184ನೇ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ  ಅವರು ತಮ್ಮ ಜೀವನದ ಬಗ್ಗೆ ಹೇಳಿಕೊಂಡರು.

ಗುರುಗಳಾದ ಆರ್.ಎಂ.ಹಡಪದ ಹೇಳಿಕೊಟ್ಟ ಸಾಮಾಜಿಕ ಅರಿವು, ಅಮ್ಮನ ಮಾರ್ಗದರ್ಶನ, ನನ್ನ ಕಲೆಯನ್ನು ಮೊದಲು  ಗುರುತಿಸಿದ ಅಪ್ಪಾಜಿ ರಾವ್ ಮತ್ತು ಸತತ ಅಭ್ಯಾಸದ ಫಲದಿಂದ ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು’ ಎಂದರು.

‘ಚಿತ್ರಕಲಾವಿದರು ತಮ್ಮ ಮನಸ್ಸಿಗೆ ತೃಪ್ತಿ ಸಿಗುವವರೆಗೂ ಚಿತ್ರ ರಚಿಸಬೇಕು. ಈಗಲೂ ನಾನು ದಿನಕ್ಕೆ 6–7 ಗಂಟೆ ಚಿತ್ರಕಲೆಯಲ್ಲಿ ತೊಡಗಿಕೊಳ್ಳುತ್ತೇನೆ. ಅಭ್ಯಾಸ ನಿಲ್ಲಿಸಿದರೆ ನಾನು ಮೂಡಿಸುವ ಗೆರೆಗಳು ನನ್ನನ್ನು ಅಣಕಿಸುತ್ತವೆ. ಹೀಗಾಗಿ ಆ ಎಚ್ಚರ ಇಟ್ಟುಕೊಂಡೇ ಅಭ್ಯಾಸದಲ್ಲಿ ತೊಡಗುತ್ತೇನೆ’ ಎಂದು ತಮ್ಮ ಅನುಭವ ಹಂಚಿಕೊಂಡರು.

‘ನಮ್ಮ ತಂದೆ ಪರುಶುರಾಮ್. ಅವರು ದೇವಾಲಯದ ದ್ವಾರ ಮತ್ತು ಪೀಠ ರಚನೆಯಲ್ಲಿ ಅತ್ಯಂತ ನೈಪುಣ್ಯತೆ ಹೊಂದಿದ್ದರು. ವಿಧಾನಸೌಧ ನಿರ್ಮಾಣದಲ್ಲೂ ಅವರು ಭಾಗಿಯಾಗಿ ತಮ್ಮ ನಿಪುಣತೆ ತೋರಿದ್ದರು. ತಾಯಿ ಧನಲಕ್ಷ್ಮಿ ಅವರು ಆಗಿನ ಕಾಲಕ್ಕೆ ಫಿಲೋಮಿನಾ ಇಂಗ್ಲಿಷ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ್ದರು. ಅವರಿಬ್ಬರೂ ನನ್ನ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಒಳ್ಳೆಯ ವಿದ್ಯಾರ್ಥಿಯಾಗಲು ಸಾಧ್ಯವಾಯಿತು’ ಎಂದರು.

‘ಅಮ್ಮನಿಗೆ, ನನ್ನನ್ನು ಕಾನ್ವೆಂಟ್ ಶಾಲೆಗೆ ಸೇರಿಸಬೇಕು ಎಂಬ ಆಸೆಯಿತ್ತು. ಆದರೆ, ಆರ್ಥಿಕ ಸಮಸ್ಯೆಯಿಂದ  ಇದು ಸಾಧ್ಯವಾಗಲಿಲ್ಲ. ನನ್ನ ಮಗ ಚಿತ್ರಕಲಾವಿದ ಎಂದು ಹೇಳುತ್ತಿದ್ದಾಗ ಕೆಲವರು ಅವರನ್ನು ತಾತ್ಸರದಿಂದ ಕಂಡಿದ್ದರು. ಇದರಿಂದ ತುಂಬಾ ನೊಂದಿದ್ದರೂ ನನ್ನನ್ನು ಪ್ರೋತ್ಸಾಹಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು’ ಎಂದರು.

ತಂದೆ–ಮಗನ ಒಡನಾಟ: ಕಲಾಗುರುಗಳಾದ ಎಂ.ಎಸ್‌.ಹಡಪದ ಅವರೊಂದಿಗೆ ನನ್ನದು ತಂದೆ–ಮಗನ ಒಡನಾಟ. ನನ್ನ ಇಂದಿನ ಸ್ಥಿತಿಗೆ ಅವರೇ ಕಾರಣ. ಅಂತಹ ವ್ಯಕ್ತಿ ನನ್ನ ಜೀವನದಲ್ಲಿ ಬರಲು ನಾನು ಪುಣ್ಯ ಮಾಡಿದ್ದೆ ಅನಿಸುತ್ತದೆ. ನಮ್ಮ ಜೇಬಿಗೆ ಹಣವಿಟ್ಟು ಸಿನಿಮಾಗೆ ಕಳಿಸುತ್ತಿದ್ದರು. ಇಂದಿನ ಶಿಕ್ಷಕರು ಯಾರಾದರೂ ಹೀಗೆ ಮಾಡಲು ಸಾಧ್ಯವೇ’ ಎಂದರು.

‘ಅವರು, ಹಲವು ವಿದ್ಯಾರ್ಥಿಗಳಿಗೆ ತಾವೇ ಫೀಸು, ಊಟ ಕೊಟ್ಟು ಚಿತ್ರಕಲೆ ಹೇಳಿಕೊಟ್ಟಿದ್ದಾರೆ. ಸಿನಿಮಾಗಳ ಕಲಾವಂತಿಕೆಯ ಕುರಿತು ಚರ್ಚಿಸಿ ನಮ್ಮ ಜ್ಞಾನ ಹೆಚ್ಚಿಸುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.