ADVERTISEMENT

ಕಸ ಕರಗಿಸಲು ‘ಬ್ಲ್ಯಾಕ್‌ಹೋಲ್‌’!

ಪೀಣ್ಯದ ಪ್ಲಾಟಿನಂ ಸಿಟಿಯಲ್ಲಿ ಈ ಯಂತ್ರ ಪ್ರಾಯೋಗಿಕವಾಗಿ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 20:02 IST
Last Updated 21 ಜನವರಿ 2017, 20:02 IST
ಕಸ ಕರಗಿಸುವ ‘ಬ್ಲ್ಯಾಕ್‌ ಹೋಲ್’ ಯಂತ್ರ
ಕಸ ಕರಗಿಸುವ ‘ಬ್ಲ್ಯಾಕ್‌ ಹೋಲ್’ ಯಂತ್ರ   

ಬೆಂಗಳೂರು: ನಗರದ ಟೆಸ್ಲಾಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪೆನಿ ಕಸ ಕರಗಿಸಲು ‘ಬ್ಲ್ಯಾಕ್‌ ಹೋಲ್’ ಎಂಬ ಯಂತ್ರವನ್ನು ತಯಾರಿಸಿದೆ. ಇಂಧನವನ್ನೇ ಬಳಸದೆ ಈ ಯಂತ್ರ ಕಸ ಕರಗಿಸಲಿದೆ. ಪೀಣ್ಯದ ಪ್ಲಾಟಿನಂ ಸಿಟಿಯಲ್ಲಿ ಈ ಯಂತ್ರವನ್ನು ಸದ್ಯ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

ಯಂತ್ರದಲ್ಲಿರುವ ಕಸಕ್ಕೆ ಬೆಂಕಿ ಹಚ್ಚಿದರೆ ಮುಗಿಯಿತು, ಅದರಲ್ಲಿನ ಎಲ್ಲ ಕಸ ಕರಗಿ ಹೋಗಲಿದೆ. ಈ ಪ್ರಕ್ರಿಯೆಯಲ್ಲಿ ಹೊಗೆ ಸೂಸುವುದಿಲ್ಲ. ಬೂದಿಯ ಪ್ರಮಾಣವೂ ಕಡಿಮೆ ಎಂದು ವಿವರಿಸುತ್ತಾರೆ ಟೆಸ್ಲಾ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಮೆನ್‌ ಡೈಲಾನ್‌.

‘ಪ್ರತಿ ಮನೆಯಲ್ಲಿ ದಿನವೊಂದಕ್ಕೆ ಕೆ.ಜಿ ಕಸ ಉತ್ಪಾದನೆಯಾದರೆ ಸಾವಿರ ಮನೆಗಳಿಂದ ಒಂದು ಟನ್‌ನಷ್ಟು ಕಸ ಉತ್ಪತ್ತಿ ಆಗುತ್ತದೆ. ಅಷ್ಟು ಮನೆಗಳಿಗೆ ಒಂದರಂತೆ ಈ ಯಂತ್ರ ಅಳವಡಿಸಿದರೆ ತ್ಯಾಜ್ಯದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಲ್ಲದೆ, ಕಸ ಸಂಗ್ರಹಿಸಲು ಮತ್ತಷ್ಟು ಜಾಗದ ಅಗತ್ಯವಿಲ್ಲ’ ಎಂದು ಹೇಳುತ್ತಾರೆ.

‘ಕಸ ಕರಗಿಸಿದ ನಂತರ ಹೊರಸೂಸುವ ಅನಿಲದಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ಬೂದಿಯನ್ನು ಸಿಮೆಂಟ್ ಕಾರ್ಖಾನೆಗಳಲ್ಲಿ ಬಳಸಬಹುದು. ಉತ್ಪತ್ತಿಯಾಗುವ  ಟಾರ್ ಅನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಅವಕಾಶ ಇದೆ’ ಎಂದು ವಿವರಿಸುತ್ತಾರೆ.

‘ಪ್ರೋಗ್ರಾಮ್ಡ್ ಆಕ್ಸಿಜನರೇಟೆಡ್ ಪ್ಲಾಸ್ಮಿಕ್ ಸ್ಟೇಟ್ ತಂತ್ರಜ್ಞಾನದಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತದೆ. ಈ ಯಂತ್ರದಲ್ಲಿ ಅಳವಡಿಸಲಾಗಿರುವ ಎರಡು ಪದರದ ಸ್ಟೇನ್‌ಲೆಸ್ ಸ್ಟೀಲ್‌ನ ಚೇಂಬರ್‌ಗೆ ಕಸ ಹಾಕಬೇಕು. ಅದಕ್ಕೆ ಬೆಂಕಿ ತಾಗಿಸಿದರೆ ಸಂಸ್ಕರಣೆ ಪ್ರಕ್ರಿಯೆ ಆರಂಭವಾಗುತ್ತದೆ. 350ರಿಂದ 500 ಡಿಗ್ರಿ ಸೆಂಟಿಗ್ರೇಡ್‌ ತಾಪಮಾನದಲ್ಲಿ ಆ ಕಸವನ್ನು ಕರಗಿಸುತ್ತದೆ’ ಎಂದು ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.