ADVERTISEMENT

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:45 IST
Last Updated 24 ಅಕ್ಟೋಬರ್ 2016, 19:45 IST
ಸಂಸದ ವೀರಪ್ಪ ಮೊಯಿಲಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಅನಂತಕುಮಾರಿ, ಅಧ್ಯಕ್ಷ ವಿ. ಪ್ರಸಾದ್‌, ಶಾಸಕ ಎಂ.ಟಿ.ಬಿ. ನಾಗರಾಜ್, ಜಿಲ್ಲಾಧಿಕಾರಿ ಪಾಲಯ್ಯ, ಸಿಇಒ ಮಂಜುಶ್ರಿ ಇದ್ದರು -– ಪ್ರಜಾವಾಣಿ ಚಿತ್ರ
ಸಂಸದ ವೀರಪ್ಪ ಮೊಯಿಲಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಅನಂತಕುಮಾರಿ, ಅಧ್ಯಕ್ಷ ವಿ. ಪ್ರಸಾದ್‌, ಶಾಸಕ ಎಂ.ಟಿ.ಬಿ. ನಾಗರಾಜ್, ಜಿಲ್ಲಾಧಿಕಾರಿ ಪಾಲಯ್ಯ, ಸಿಇಒ ಮಂಜುಶ್ರಿ ಇದ್ದರು -– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜಿಲ್ಲೆಯಲ್ಲಿ ಅನುಮೋದನೆಗೊಂಡ ಎಲ್ಲಾ ಯೋಜನೆಗಳನ್ನು ವಿಳಂಬ ಮಾಡದೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಲೋಕಸಭಾ ಸದಸ್ಯ ಡಾ. ಎಂ. ವೀರಪ್ಪ ಮೊಯಿಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಅನುದಾನ ಬಿಡುಗಡೆ ವಿಳಂಬವಾಗಿರುವುದರಿಂದ ನಾನಾ ಯೋಜನೆಯಡಿ ಕೈಗೊಳ್ಳಲಾಗಿರುವ ಕಾಮಗಾರಿಗಳ  ವೇಗ ಕುಂಠಿತವಾಗಿದೆ ಎಂಬ ಅಧಿಕಾರಿಗಳು ದೂರಿದರು. ಇದಕ್ಕೆ ಉತ್ತರಿಸಿದ ಮೊಯ್ಲಿ ಅವರು ‘ಶೀಘ್ರ ಅನುದಾನ ಬಿಡುಗಡೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವೆ’ ಎಂದು ತಿಳಿಸಿದರು.

‘ಈ ವರ್ಷ ಜಿಲ್ಲೆಯಲ್ಲಿ ಮಳೆ ಸರಿಯಾಗಿ ಆಗದ ಕಾರಣ ರಾಗಿ, ಜೋಳ, ನೆಲಗಡಲೆ ಇತ್ಯಾದಿ ಬೆಳೆಗಳ ಉತ್ಪಾದನೆಯಲ್ಲಿ ಶೇ 70ರಷ್ಟು ಇಳುವರಿ ಕುಂಠಿತವಾಗಿದೆ. ರೈತರಿಗೆ ಬೆಳೆ ನಷ್ಟದ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ಒಟ್ಟು 1077 ರೈತರು ಬೆಳೆ ವಿಮೆ ಯೋಜನೆಯಡಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಬೆಳೆ ನಷ್ಟದ  ವರದಿ ನಂತರ ಪರಿಹಾರದ ಮೊತ್ತವನ್ನು ರೈತರಿಗೆ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಕೃಷಿ ಜಂಟಿ ನಿರ್ದೇಶಕ ಜಯಸ್ವಾಮಿ ಮಾಹಿತಿ ನೀಡಿದರು.

ತೋಟಗಾರಿಕೆ ಬೆಳೆಗಳಲ್ಲಿ ಆಲೂಗಡ್ಡೆ, ಬೀನ್ಸ್, ಟೊಮೆಟೊ ಬೆಳೆಗಳಿಗೆ ಮಾತ್ರ ಬೆಳೆ ವಿಮೆಗೆ ಅವಕಾಶವಿದೆ ಎಂದು ಅಧಿಕಾರಿ ಹೇಳಿದಾಗ, ‘ತೆಂಗಿನ ಬೆಳೆಗಳಿಗೂ ವಿಮೆ ಅನುಕೂಲ ಕಲ್ಪಿಸಬೇಕು’ ಎಂದು ವೀರಪ್ಪ ಮೊಯ್ಲಿ  ಅವರು ಸೂಚಿಸಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ನವೀಕರಣ, ಐಸಿಯು ಘಟಕ ನಿರ್ಮಾಣ, ಡಯಾಲಿಸಿಸ್ ಕೇಂದ್ರ ಸ್ಥಾಪನೆ ಮತ್ತು ಪಿಯುಸಿ ವಿಜ್ಞಾನ ಕಾಲೇಜುಗಳಲ್ಲಿ ಪ್ರಯೋಗ ಶಾಲೆ ಅನುಷ್ಠಾನದ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ರೂಪುರೇಷೆಗಳನ್ನು ಸಿದ್ಧ ಪಡಿಸಿ ಅಂದಾಜು ಪಟ್ಟಿ ಸಲ್ಲಿಸಿದರೆ ಸಂಸದರ, ಶಾಸಕರ ಅನುದಾನದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.