ADVERTISEMENT

‘ಕೃಷಿ ಭಾಗ್ಯ’ ಫಲಾನುಭವಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:21 IST
Last Updated 27 ಮಾರ್ಚ್ 2017, 20:21 IST

ಬೆಂಗಳೂರು: ‘ಕೃಷಿಭಾಗ್ಯ’ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಸರ್ಕಾರದ ನಾಮನಿರ್ದೇಶಿತ ಸದಸ್ಯರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ವಿಧಾನ ಸಭಾಧ್ಯಕ್ಷರ ಪೀಠದ ಎದುರು ಸೋಮವಾರ ಧರಣಿ ನಡೆಸಿದರು.

‘ಶಾಸಕರ ಅಧ್ಯಕ್ಷತೆಯ ಸಮಿತಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಅದಕ್ಕೆ ನಾಮನಿರ್ದೇಶಿತ ಸದಸ್ಯರೂ ಒಪ್ಪಿಗೆ ಸೂಚಿಸುತ್ತಾರೆ. ಆದರೆ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಬಳಿ ಪಟ್ಟಿ ಹೋದಾಗ ಬದಲಾವಣೆಯಾಗುತ್ತದೆ’ ಎಂದು ಆಪಾದಿಸಿ ಜೆಡಿಎಸ್‌ ಸದಸ್ಯರು ಧರಣಿಗೆ ಮುಂದಾದರು.
‘ಫಲಾನುಭವಿಗಳ ಪಟ್ಟಿಯಲ್ಲಿ ಕೈಯಾಡಿಸುವ ಮೂಲಕ ನಾಮನಿರ್ದೇಶಿತ ಸದಸ್ಯರು ವ್ಯಾಪಾರ ಮಾಡಲು ಹೊರಟಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದು, ಮಾತಿನ ಚಕಮಕಿಗೆ ಕಾರಣವಾಯಿತು.

‘ಗಂಗಾ ಕಲ್ಯಾಣ ಯೋಜನೆಯಲ್ಲೂ ಇದೇ ರೀತಿ ಆಗುತ್ತಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಸರಿಯಾಯಿತು’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

ADVERTISEMENT

‘ಯು.ಬಿ. ಬಣಕಾರ ಕ್ಷೇತ್ರದಲ್ಲಿ 80:20 ಅನುಪಾತದಲ್ಲಿ ಫಲಾನುಭವಿಗಳ ಪಟ್ಟಿಯನ್ನು ಹಂಚಿಕೊಳ್ಳೋಣ ಎಂದು ನಾಮನಿರ್ದೇಶಿತ ನಾಲ್ವರು ಸದಸ್ಯರು ಹೇಳುತ್ತಿದ್ದಾರಂತೆ’ ಎಂದೂ ಶೆಟ್ಟರ್‌ ದೂರಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ, ‘ಸದಸ್ಯರು ವ್ಯಾಪಾರ ಮಾಡುತ್ತಾರೆ ಎಂದು ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಆರೋಪಿಸುವುದು ಸರಿಯಲ್ಲ. ಶಾಸಕರು  ಪ್ರಸ್ತಾಪಿಸಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಲಿದೆ’ ಎಂದು ಸಮಾಧಾನಪಡಿಸಿದರು. ಬಳಿಕ ಜೆಡಿಎಸ್ ಸದಸ್ಯರು ಧರಣಿ ಹಿಂತೆಗೆದುಕೊಂಡರು.

ಮತ್ತೊಮ್ಮೆ ಧರಣಿ: ‘ಗೌರವಧನ ಹೆಚ್ಚಿಸುವಂತೆ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು 11 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಅವರ ಅಹವಾಲು ಆಲಿಸಲು ಸರ್ಕಾರ ಮುಂದಾಗುತ್ತಿಲ್ಲ’ ಎಂದು ಜೆಡಿಎಸ್‌ನ ಎಚ್‌.ಕೆ. ಕುಮಾರಸ್ವಾಮಿ ಪ್ರಸ್ತಾಪಿಸಿದರು.
ಅದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ ಸದಸ್ಯರು, ಮುಷ್ಕರ ನಿರತರ ಜೊತೆ ಸರ್ಕಾರ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿ ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಲು ಮುಂದಾದರು.

ಈ ವೇಳೆ, ಸಚಿವ ತನ್ವೀರ್‌ ಸೇಠ್‌, ‘ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಿರತರ ನಿಯೋಗ ಈಗಾಗಲೇ ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸದನಕ್ಕೆ ವಿವರಣೆ ನೀಡುತ್ತೇನೆ’ ಎಂದು ತಿಳಿಸಿದರು.
ಆಗ ಜೆಡಿಎಸ್‌ ಸದಸ್ಯರು ಧರಣಿ ವಾಪಸ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.