ADVERTISEMENT

ಕೆಂಪಾಪುರದಲ್ಲಿ ಪತ್ತೆಯಾದ ಸಮಾಧಿ: ತಜ್ಞರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಬೆಂಗಳೂರು: ಮಾಗಡಿ ಬಳಿಯ ಕೆಂಪಾಪುರದಲ್ಲಿ ಪತ್ತೆಯಾಗಿರುವ ಸಮಾಧಿ ಯಾರದ್ದು ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಸಂಶೋಧಕರಿಗೆ ಕೋರಲಾಗುವುದು ಎಂದು ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ತಿಳಿಸಿದರು. ಕೆಂಪಾಪುರದಲ್ಲಿ ಇರುವ ಸಮಾಧಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

‘ಕೆಂಪಾಪುರದ ಗೋಪುರದಲ್ಲಿ  ಕೆಂಪೇಗೌಡರ ಸಮಾಧಿ ಸ್ಥಳ ಎಂಬ ಶಾಸನವೊಂದು ಪತ್ತೆಯಾಗಿದೆ. ಆದರೆ ಯಾವ ಕೆಂಪೇಗೌಡರದ್ದು ಎಂಬುದರ ಕುರಿತು ಅದರಲ್ಲಿ ನಿಖರವಾಗಿ ನಮೂದಿಸಿಲ್ಲ. ಹಾಗಾಗಿ ಕೆಂಪೇಗೌಡ ಅಧ್ಯಯನ ಕೇಂದ್ರದ ಸಂಶೋಧಕರು ಮತ್ತು ಇತಿಹಾಸ ತಜ್ಞರ ತಂಡಕ್ಕೆ ಸಂಶೋಧನೆ ನಡೆಸಿ ವರದಿ ಸಲ್ಲಿಸಲು ಕೋರಲಾಗುವುದು’ ಎಂದು ಅವರು ವಿವರಿಸಿದರು.

‘ಇತಿಹಾಸ ತಜ್ಞರು ನೀಡುವ ವರದಿ ಆಧರಿಸಿ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಮಾಲೋಚನೆ ಮಾಡುವೆ. ಮಾಗಡಿ ಪುರಸಭೆ ಸದಸ್ಯರೊಂದಿಗೂ ಮಾತುಕತೆ ನಡೆಸಿ ಸಮಾಧಿ ಸ್ಥಳದ ಅಭಿವೃದ್ಧಿ ಕುರಿತು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಮಾಜಿ ಸದಸ್ಯ ಎ.ಎಚ್.ಬಸವರಾಜು ಸೇರಿದಂತೆ ಹಲವರು ಕೆಂಪೇಗೌಡರ ಸಮಾಧಿ  ಸ್ಥಳವನ್ನು  ಐತಿಹಾಸಿಕ  ಸ್ಥಳವನ್ನಾಗಿ ಪರಿವರ್ತಿಸುವಂತೆ ಮನವಿ ಮಾಡಿದ್ದರು. ಹಲವು ಸಂಘ–ಸಂಸ್ಥೆಗಳಿಂದಲೂ ಮನವಿ ಬಂದಿತ್ತು. ಹೀಗಾಗಿ ಸ್ಥಳ ಪರಿಶೀಲನೆ ನಡೆಸಿದೆ’ ಎಂದು ತಿಳಿಸಿದರು.

ಗುರುತಿನ ಚೀಟಿ: ‘ಕೆಂಪಾಪುರಕ್ಕೆ ಹೋಗುವಾಗ ದಾಸರಹಳ್ಳಿ ವಲಯಕ್ಕೆ ಸೇರಿದ ಭಾರತ ನಗರದಲ್ಲಿರುವ ಪಾಲಿಕೆ ಸಂಪರ್ಕ ಕೇಂದ್ರಕ್ಕೆ ಅವರು ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿದರು. ನೂರಾರು ಮತದಾರರ ಗುರುತಿನ ಚೀಟಿಗಳನ್ನು ವಿತರಣೆ ಮಾಡದೆ ಹಾಗೆ ಇಟ್ಟುಕೊಂಡಿದ್ದು ಕಂಡು ಬಂತು. ಸಂಬಂಧಪಟ್ಟ ಸಹಕಂದಾಯ ಅಧಿಕಾರಿಗೆ ಮೊಬೈಲ್‌ನಲ್ಲಿ ಮಾತಾನಾಡಿ ತರಾಟೆಗೆ ತೆಗೆದುಕೊಂಡರು.

‘ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಮತದಾರರಿಗೆ ಗುರುತಿನ ಚೀಟಿ ಸಿಗದೆ ಪರದಾಡುವಂತಹ ಸ್ಥಿತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎರಡು ದಿನಗಳಲ್ಲಿ ಎಲ್ಲ ಚೀಟಿಗಳನ್ನು ಸಂಬಂಧಪಟ್ಟವರ ಮನೆಗೆ ತಲುಪಿಸಬೇಕು’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.